ಬುರೆವಿ ಚಂಡಮಾರುತ ಎಫೆಕ್ಟ್ : ಬೆಂಗಳೂರಿನಲ್ಲಿ ತುಂತುರು ಮಳೆ..!
ಬೆಳ್ಳಂಬೆಳಿಗ್ಗೆ ರಾಜ್ಯ ರಾಜಧಾನಿಯಲ್ಲಿ ತುಂತುರು ಮಳೆ ಆರಂಭವಾಗಿದ್ದು ವಾಹನ ಸವಾರರು ಸುಸ್ತಾಗಿ ಹೋಗಿದ್ದಾರೆ. ಬುರೆವಿ ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆಯಿಂದಲೇ ವರುಣನ ಅರ್ಭಟ ಶುರುವಾಗಿದೆ.
ಕೊರೆಯುವ ಚಳಿ, ಶೀತ ಗಾಳಿ ಮಧ್ಯೆ ತುಂತುರು ಮಳೆ ಕೆಲಸಕ್ಕೆ ಹೋಗುವ ಜನರಿಗೆ ಕೊಂಚ ಕಿರಿಕಿರಿಯನ್ನುಂಟು ಮಾಡಿದೆ. ಬೆಂಗಳೂರು ಮಾತ್ರವಲ್ಲದೇ ಪಕ್ಕ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮನ್ಸೂಚನೆ ನೀಡಿದೆ. ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Cyclonic Storm ‘Burevi’ over southwest Bay of Bengal (Cyclone Warning for South Tamilnadu and South Kerala coasts: Orange Message).https://t.co/eXJcK5Xipb pic.twitter.com/VexCVc9tD2
— India Meteorological Department (@Indiametdept) December 2, 2020
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ನಿವಾರ್ ಚಂಡಮಾರುತ ದಕ್ಷಿಣ ಭಾರತವನ್ನು ಅಪ್ಪಳಿಸಿತ್ತು. ಇದೀಗ ಇಂದಿನಿಂದ ಬುರೇವಿ ಚಂಡಮಾರುತದ ಅಬ್ಬರ ಶುರುವಾಗಲಿದೆ. ಇಂದಿನಿಂದ ಕೇರಳಕ್ಕೆ ಬುರೇವಿ ಚಂಡಮಾರುತದ ಆಗಮನವಾಗಲಿದೆ. ಇದರ ಪರಿಣಾಮವಾಗಿ ಕೇರಳದ ನೆರೆಯ ರಾಜ್ಯಗಳಾದ ತಮಿಳುನಾಡು ಕರ್ನಾಟಕದಲ್ಲಿ ಕೂಡ ನಾಲ್ಕೈದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈಗಾಗಲೇ ಬೆಂಗಳೂರಿನಲ್ಲಿ ತುಂತುರು ಮಳೆ ಆರಂಭವಾಗಿದ್ದು, ಮೈಕೊರೆಯುವ ಚಳಿ ಶುರುವಾಗಿದೆ. ಈ ನಡುವೆ ನೆರೆ ರಾಜ್ಯ ಕೇರಳದ 9 ಜಿಲ್ಲೆಗಳಲ್ಲಿ ಬುರೆವಿ ಅಬ್ಬರ ಜೋರಾಗಿದ್ದು, ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಕೇರಳದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮಳೆಯ ಆರ್ಭಟ ಭಾರೀ ಹೆಚ್ಚಾಗಲಿದೆ. ಹೀಗಾಗಿ, ರೆಡ್ ಅಲರ್ಟ್ ಘೋಷಿಸಲಾಗಿದೆ. ಬುರೇವಿ ಚಂಡಮಾರುತವು ಇಂದು ಮಧ್ಯಾಹ್ನ 70-80 ಕಿ.ಮೀ. ವೇಗದಲ್ಲಿ ಕೇರಳಕ್ಕೆ ಆಗಮಿಸಲಿದೆ.

