ತಮ್ಮನ್ನು ಉಚ್ಚಾಟಿಸಲಿ ಎಂದು ಜಿಟಿ ದೇವೇಗೌಡರೇ ಕಾಯುತ್ತಿದ್ದಾರೆ: ಹೆಚ್‌ಕೆ ಕುಮಾರಸ್ವಾಮಿ
ಜಿ.ಟಿ. ದೇವೇಗೌಡರನ್ನು ಉಚ್ಛಾಟನೆ ಮಾಡುತ್ತೇವೆ ಎಂದು ನಾವು ಹೇಳಿಲ್ಲ. ಆದರೆ, ಅವರೇ ತಮ್ಮನ್ನು ಉಚ್ಛಾಟನೆ ಮಾಡಲಿ ಎಂದು ಕಾಯುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.
ಓರ್ವ ಶಾಸಕ ಪಕ್ಷದಲ್ಲಿ ಗೆದ್ದ ಮೇಲೆ ಅವಧಿ ಇರುವವರೆಗೂ ಪಕ್ಷಕ್ಕೆ ನಿಷ್ಠೆಯಿಂದ ಇರುವುದು ಒಳ್ಳೆಯದು. ಈಗ ಉಚ್ಛಾಟನೆಗೆ ಯಾರೂ ಹೆದರಲ್ಲ. ಏಕೆಂದರೆ, ಅದರಿಂದ ಸದಸ್ಯತ್ವ ಹೋಗುವುದಿಲ್ಲ. ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಲಿ ಎಂದು ಜಿಟಿ ದೇವೇಗೌಡರೇ ಕಾಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಜಿ.ಟಿ. ದೇವೇಗೌಡರಿಗೆ ಅವರದ್ದೇ ಆದ ಕ್ಷೇತ್ರವಿದೆ. ಮೊದಲು ಅವರ ಕ್ಷೇತ್ರದಲ್ಲಿ ಗೆದ್ದವರಿಗೆ ಸನ್ಮಾನ ಮಾಡಲಿ. ಆಮೇಲೆ ಬೇರೆ ಕ್ಷೇತ್ರಕ್ಕೆ ಹೋಗಲಿ. ಹೋಗಬಾರದು ಅಂತಲ್ಲ, ಅವರು ನಮ್ಮ ಪಕ್ಷದಲ್ಲಿ ಇನ್ನೂ ಇದ್ದಾರೆ. ನಮ್ಮ ಪಕ್ಷದ ಬಗ್ಗೆ ವಿಶ್ವಾಸ ಇಟ್ಟುಕೊಂಡು ಸ್ಥಳೀಯ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಜೊತೆಗಿರಬೇಕು ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರ ಬಂದಿದ್ದೇ ಆಪರೇಷನ್ ಕಮಲದ ಮೂಲಕ. ನಮ್ಮ ಶಾಸಕರನ್ನು ಸೆಳೆಯುವುದರ ಮೂಲಕ ಸರ್ಕಾರ ರಚನೆ ಮಾಡಿದರು. ಈಗ ಇದೇ ರೀತಿ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರಿ ಹಿಡಿಯುವುದಕ್ಕೆ ಬಿಜೆಪಿ ಇಲ್ಲಸಲ್ಲದ ರಣತಂತ್ರ ರೂಪಿಸುತ್ತಿದೆ. ಗ್ರಾಮ ಪಂಚಾಯಿತಿ ವಿಜೇತ ಸದಸ್ಯರನ್ನು ಅಕ್ರಮ ಮಾರ್ಗದಿಂದ ಸೆಳೆಯಲಾಗುತ್ತಿದೆ. ಗ್ರಾಮ ಪಂಚಾಯಿತಿ ಸದಸ್ಯರು ಮಾರಾಟದ ವಸ್ತುಗಳಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಸಾಕಾಗಿದೆ BJP-ಕಾಂಗ್ರೆಸ್ ಸಹವಾಸ; ವಿರೋಧ ಪಕ್ಷವಾಗಿರಲು ಸಿದ್ದ: ಜೆಡಿಎಸ್

