ಕೆನಡಾ ಪ್ರಧಾನಿಗೆ ಪ್ರತಿಕ್ರಿಯಿಸಿದಷ್ಟೇ ವೇಗವಾಗಿ ರೈತರಿಗೂ ಸ್ಪಂಧಿಸಿದ್ದರೆ ಸರ್ಕಾರದ ಮಾನ ಉಳಿಯುತ್ತಿರಲಿಲ್ಲವೇ?
ಕಳೆದ 09 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಇದೂವರೆಗೂ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ವಿಚಾರವಾಗಿ ಒಂದೂ ಮಾತನಾಡಿಲ್ಲ. ಕಳೆದವಾರ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದ ನಡುವೆಯೂ ಮನ್ ಕೀ ಬಾತ್ನಲ್ಲಿ ಮಾತನಾಡಿದ ಮೋದಿ ರೈತರ ಪ್ರತಿಭಟನೆಯ ಬಗ್ಗೆ ಪ್ರಸ್ತಾಪಿಸಲಿಲ್ಲ. ಇಂತಹ ನಿರ್ಲಕ್ಷದ ನಡುವೆ ಮೊನ್ನೆ ಗುರುನಾನಕ್ ಜಯಂತಿಯ ಭಾಗವಾಗಿ ಮಾತನಾಡಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ಭಾರತ ರೈತ ಪ್ರತಿಭಟನೆಯ ಬಗ್ಗೆ ಮಾತನಾಡಿದ್ದರು. ಇದಕ್ಕೇ ತಟ್ ಅಂತ ಭಾರತದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಸಿ ಟ್ರೂಡೊ ವಿರುದ್ದ ಕಿಡಿಕಾರಿದೆ.
“ರೈತರ ಪ್ರತಿಭಟನೆಯ ಕುರಿತು ಭಾರತದಿಂದ ಬರುತ್ತಿರುವ ಸುದ್ದಿಗಳನ್ನು ನಮ್ಮನ್ನು ಆತಂಕಕ್ಕೀಡುಮಾಡಿವೆ. ಅಲ್ಲಿನ ಪರಿಸ್ಥಿತಿಯಿಂದ ನಾವೆಲ್ಲರೂ ಕುಟುಂಬ ಮತ್ತು ಸ್ನೇಹಿತರ ಬಗ್ಗೆ ಚಿಂತಿತರಾಗಿದ್ದೇವೆ. ನಿಮ್ಮಲ್ಲಿ ಅನೇಕರಿಗೆ ಇದು ನಿಜವೆಂದು ತಿಳಿದಿದೆ. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಕೆನಡಾ ಯಾವಾಗಲೂ ಬೆಂಬಲಿಸುತ್ತದೆ ಎಂದು ಹೇಳು ಇಚ್ಛಿಸುತ್ತೇನೆ. ಸಂವಾದದಲ್ಲಿ ನಂಬಿಕೆಯುಳ್ಳವರು ನಾವು. ರೈತರ ಬಗೆಗಿನ ನಮ್ಮ ಕಾಳಜಿಯನ್ನು ನೇರವಾಗಿ ಎಲ್ಲಾ ಮಾರ್ಗಗಳಲ್ಲಿ ಭಾರತದ ಸರ್ಕಾರದ ಗಮನಕ್ಕೆ ತರುತ್ತೇವೆ. ಇದು ನಾವೆಲ್ಲರೂ ರೈತರೊಂದಿಗೆ ನಿಲ್ಲುವ ಸಮಯ” ಎಂದು ಗುರುನಾನಕ್ ಜಯಂತಿಯಂದು ಬಿಡುಗಡೆಗೊಳಿಸಿದ ವಿಡಿಯೋದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಮಾತಾಡಿದ್ದಾರೆ.
ಇದನ್ನೂ ಓದಿ: ಮಾಧ್ಯಮಗಳು ರೈತ ಹೋರಾಟವನ್ನು ತಿರುಚುತ್ತಿರುವುದೇಕೆ? ಇಲ್ಲಿವೆ ಅಸಲಿ ಕಾರಣಗಳು!
ಇದಕ್ಕೆ ಪ್ರತಿಕ್ರಿಸಿದ ವಿದೇಶಾಂಗ ಸಚಿವಾಲಯ, “ಭಾರತದ ರೈತರ ಬಗೆಗೆನ ಕೆನಡಾದ ನಾಯಕರ ಅನಪೇಕ್ಷಿತ ಪ್ರತಿಕ್ರಿಯೆಗಳು ಗಮನಕ್ಕೆ ಬಂದಿವೆ. ವಿಶೇಷವಾಗಿ ಪ್ರಜಾಪ್ರಭುತ್ವ ದೇಶದ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಇವು ಅನಗತ್ಯ. ರಾಜಕೀಯ ಉದ್ದೇಶಗಳಿಗಾಗಿ ರಾಜತಾಂತ್ರಿಕ ಸಂಭಾಷಣೆಗಳನ್ನು ತಪ್ಪಾಗಿ ನಿರೂಪಿಸದಿರುವುದು ಉತ್ತಮ”ಎಂದು ಹೇಳಿತ್ತು.
ಅನ್ಯ ದೇಶದ ಪ್ರಧಾನಿ ಭಾರತ ರೈತರ ಪರಿಸ್ಥಿತಿ ಬಗ್ಗೆ ಮಾತನಾಡುವುದನ್ನು ಸಹಿಸಲಾಗದ ಕೇಂದ್ರ ಸರ್ಕಾರ, ರೈತರ ಕತ್ತು ಹಿಸುಕಲು ಮುಂದಾಗಿದೆ. ಕೆನಡಾ ಪ್ರಧಾನಿಯ ಮಾತಿಗೆ ದಿಢೀರ್ ಪ್ರತ್ಯುತ್ತರ ನೀಡದ ಸರ್ಕಾರಕ್ಕೆ ದೆಹಲಿಯ ಕೊರೆವ ಚಳಿಯಲ್ಲೂ ಪ್ರತಿಭಟನೆ ನಡೆಸುತ್ತಿರುವ ರೈತರ ಧ್ವನಿ ಕೇಳದೇ ಇರುವುದು ವಿಪರ್ಯಾಸ.
ಅಚ್ಛೇದಿನ್ ಆಯೇಗ ಎಂದು ಭಾಷಣ ಮಾಡಿದ್ದ ಪ್ರಧಾನಿ ಮೋದಿ, ರೈತರನ್ನು ಕೊರೆವ ಚಳಿಯಲ್ಲಿ ರೈತರನ್ನು ರಸ್ತೆಗೆ ತಂದು ನಿಲ್ಲಿಸಿದ್ದಾರೆ. ಮಾಧ್ಯಮಗಳು ರೈತರನ್ನೇ ದೇಶ ದ್ರೋಹಿಗಳಾಗಿ ಬಿಂಬಿಸುತ್ತಿವೆ. ಕೆನಡಾ ಪ್ರಧಾನಿಯ ಮಾತಿಗೆ ಪ್ರತಿಕ್ರಿಯಿಸಿದಷ್ಟೇ ವೇಗವಾಗಿ ರೈತರ ಆಕ್ರೋಶಕ್ಕೂ ಪ್ರತಿಕ್ರಿಯೆ ನೀಡಿದ್ದರೆ, ರೈತರ ಹಕ್ಕೊತ್ತಾಯಗಳನ್ನು ಕೇಳಿದ್ದರೆ, ರೈತರ ಮಾತುಗಳಿಗೆ ಸ್ಪಂದಿಸಿದ್ದರೆ, ಸರ್ಕಾರದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋಗುತ್ತಿರಲಿಲ್ಲ. ಸರ್ಕಾರ ತನ್ನ ಮರ್ಯಾದೆಯನ್ನು ಉಳಿಸಿಕೊಳ್ಳಬಹುದಿತ್ತು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಶೇಮ್ ಆನ್ ಮೀಡಿಯಾ: ರೈತರು ಮಾಧ್ಯಮಗಳನ್ನು ತಿರಸ್ಕರಿಸುತ್ತಿರುವುದೇಕೆ?

