ಅಧಿವೇಶನದಲ್ಲಿ ಸರ್ಕಾರದ ಬೆವರಿಳಿಸಲು ಕಾಂಗ್ರೆಸ್‌ ತಂತ್ರ! ವಿಚಾರಗಳೇನು ಗೊತ್ತೇ?

ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಗೋಹತ್ಯೆ ನಿಷೇಧ, ಲವ್‍ಜಿಹಾದ್, ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳಂತ ವಿವಾದಿತ ಕಾಯ್ದೆಗಳ ಅಂಗೀಕಾರಕ್ಕೆ ಅಧಿವೇಶದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಈ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನೆಯಲ್ಲಿ ಕಾಂಗ್ರೆಸ್‌ ನಾಯಕರು, ಉಭಯ ಸದನದ ಸದಸ್ಯರು ಸಭೆ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಅಭಿವೃದ್ಧಿಗೆ ಪೂರಕವಾದ ಯಾವುದೇ ಕಾನೂನುಗಳನ್ನು ಜಾರಿಗೆ ತರುತ್ತಿಲ್ಲ. ಬದಲಾಗಿ ವೋಟ್ ಬ್ಯಾಂಕ್ ದೃಷ್ಟಿಯಿಂದ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಕಾನೂನುಗಳನ್ನು ರೂಪಿಸುತ್ತಿದೆ. ಇಂತಹ ವಿಚಾರಗಳನ್ನು ಕಾಂಗ್ರೆಸ್‌ ತೀವ್ರವಾಗಿ ವಿರೋಧಿಸಬೇಕು ಎಂದು ನಿರ್ಧಾರಿಸಲಾಗಿದೆ.

ಪ್ರಸ್ತುತ ಸಂದರ್ಭದಲ್ಲಿ ಕೊರೊನಾ ಹಾವಳಿಯಿದೆ. ನೆರೆಯಿಂದ ಉತ್ತರ ಕರ್ನಾಟಕ ಸೇರಿದಂತೆ ಬಹುತೇಕ ಜಿಲ್ಲೆಗಳು ಸಂತ್ರಸ್ತವಾಗಿದೆ. ಜನ ಸಾಮಾನ್ಯರಿಗೆ ನೆಲೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ ಬಗ್ಗೆ ಬಿಜೆಪಿ ಸರ್ಕಾರ ಕಿಂಚಿತ್ತೂ ಯೋಚನೆ ಮಾಡುತ್ತಿಲ್ಲ. ಬದಲಾಗಿ ರೈತರಿಗೆ, ಕೃಷಿಗೆ ಮಾರಕವಾಗಿರುವ ಭೂ ಸುಧಾರಣಾ ಕಾಯ್ದೆ , ಎಪಿಎಂಸಿ ಕಾಯ್ದೆಗಳನ್ನು ಮರುಮಂಡನೆ ಮಾಡಿ ಅಂಗೀಕಾರ ಪಡೆಯುವ ಹುನ್ನಾರ ನಡೆಸಿದೆ. ಇವುಗಳ ಜೊತೆಗೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೂ ಹುನ್ನಾರ ನಡೆಸಿದೆ. ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಕಾಂಗ್ರೆಸ್‌ ನಿರ್ಧರಿಸಿದೆ.

ಇದನ್ನೂ ಓದಿ: ರೈತ-ಸರ್ಕಾರದ 5ನೇ ಮಾತುಕತೆಯೂ ವಿಫಲ! ಕೃಷಿ ನೀತಿ ರದ್ದಾಗುವವರೆಗೂ ಹೋರಾಟ ನಿಲ್ಲಲ್ಲ!

ಈ ಮಸೂದೆಗಳು ವಿಧಾನಸಭೆಯಲ್ಲಿ ಅಂಗೀಕಾರವಾದರೂ, ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತ ಇಲ್ಲ. ಆದ್ರೆ, ಮಾಜಿ ಸಿಎಂ ಕುಮಾರಸ್ವಾಮಿಯವರ ಹೇಳಿಕೆಗಳು ಬಿಜೆಪಿಗೆ ಬೆಂಬಲ ನೀಡುವ ರೀತಿಯಲ್ಲಿವೆ. ಜೆಡಿಎಸ್‌ ಬೆಂಬಲ ನೀಡಿದ್ರೆ ಈ ಮಸೂದೆಗಳು ಪರಿಷತ್‌ನಲ್ಲೂ ಅಂಗೀಕಾರ ಆಗೋ ಸಾಧ್ಯತೆ ಇದೆ.

ಹಾಗಾಗಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು. ಅಂತಹ ವಿಚಾರಗಳನ್ನಿಟ್ಟುಕೊಂಡು ಚರ್ಚೆ ನಡೆಸಬೇಕು. ವಿವಾದಿತ ಮಸೂದೆಗಳ ಮಂಡನೆಗೆ ಅವಕಾಶ ಸಿಗದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಮಂಡನೆಯಾದರೂ ಅವು ಅಂಗೀಕಾರಗೊಳ್ಳದಂತೆ ತಂತ್ರರೂಪಿಸಬೇಕು ಎಂದು ಕಾಂಗ್ರೆಸ್‌ ನಿರ್ಧರಿಸಿದೆ.

ಮೊನ್ನೆ ತೆರದಾಳದಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ಅವರ ನೇತೃತ್ವದಲ್ಲಿ ನಗರಸಭೆ ಮಹಿಳಾ ಸದಸ್ಯರ ಮೇಲೆ ನಡೆದ ದೌರ್ಜನ್ಯ, ನೆರೆ, ಕೆಜಿಹಳ್ಳಿ, ಡಿಜೆಹಳ್ಳಿ ಗಲಭೆ, ಕೊರೊನಾ ನಿಯಂತ್ರಣದಲ್ಲಿ ವೈಫಲ್ಯ ಹಾಗೂ ಚಿಕಿತ್ಸಾ ವೆಚ್ಚ ನೀಡುವಲ್ಲಿ ನಡೆದಿರಬಹುದಾದ ಅವ್ಯವಹಾರಗಳನ್ನು ಮುಂದಿಟ್ಟುಕೊಂಡು ಚರ್ಚೆಗೆ ಒತ್ತಾಯಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ.


ಇದನ್ನೂ ಓದಿ: ಪರಿಷತ್ ಚುನಾವಣೆ: ಮೋದಿ ಕ್ಷೇತ್ರದಲ್ಲಿ BJPಗೆ ಹೀನಾಯ ಸೋಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights