ಸ್ಥಳೀಯರಿಗೆ ಉದ್ಯೋಗವಿಲ್ಲ; 08 ಗ್ರಾಮಗಳ ಗ್ರಾಮ ಪಂ. ಚುನಾವಣೆ ಬಹಿಷ್ಕಾರ!
ಕೈಗಾರಿಕೆಗಳ ಸ್ಥಾಪನೆಗಾಗಿ ಭೂ ಸ್ವಾಧೀನ ಮಾಡಿಕೊಂಡು 08 ವರ್ಷಗಳೇ ಕಳೆದರೂ, ಇನ್ನೂ ವೈಜ್ಞಾನಿಕವಾದ ರೀತಿಯಲ್ಲಿ ರೈತರಿಗೆ ಪರಿಹಾರ ದೊರೆತಿಲ್ಲ. ಸ್ಥಳೀಯ ಯುವಜನರಿಗೆ ಉದ್ಯೋಗವನ್ನೂ ನೀಡಲಾಗಿಲ್ಲ ಎಂದು ಆರೋಪಿಸಿರುವ ಯಾದಗಿರಿ ಜಿಲ್ಲೆಯ ಕಡೇಚೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ 07 ಗ್ರಾಮಗಳು ಗ್ರಾಮ ಪಂ. ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ.
ಅಲ್ಲದೆ, ತಮ್ಮ ಹಳ್ಳಿಗಳ ಪಕ್ಕದಲ್ಲಿ ಆರಂಭಿಸಿರುವ ಕೆಮಿಕಲ್ ಕಂಪನಿಯು ಸುತ್ತಮುತ್ತಲಿನ ಗ್ರಾಮಗಳ ಪರಿಸರಕ್ಕೆ ಹಾನಿಯುಂಟು ಮಾಡುತ್ತಿದೆ. ಅಧಿಕ ಪ್ರಮಾಣದಲ್ಲಿ ಮಾಲಿನ್ಯ ಉಂಟು ಮಾಡುತ್ತಿದೆ. ಆ ಕಂಪನಿಯನ್ನು ಮುಚ್ಚಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಡೇಚೂರ ಗ್ರಾ.ಪಂ. ವ್ಯಾಪ್ತಿಯ ಕಡೇಚೂರ, ದುಪ್ಪಲ್ಲಿ, ಚಂದಾಪುರ, ಮಾವಿನಹಳ್ಳಿ, ಬಮ್ಮರಾದೊಡ್ಡಿ, ಸೌರಾಷ್ಟ್ರ ಹಳ್ಳಿ ಮತ್ತು ದದ್ದಲ್ ಹಾಗೂ ಸೈದಾಪುರ ಪಂಚಾಯತಿಗೆ ಒಳಪಡುವ ಶೆಟ್ಟಿಹಳ್ಳಿಯ ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.
2012ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ಜವಳಿ ಪಾರ್ಕ್, ಕೊಕೊ ಕೊಲಾ ಕಂಪನಿ ಹಾಗೂ ಇನ್ನಿತರ ಕಂಪನಿಗಳನ್ನು ಆರಂಭ ಮಾಡಲಾಗುತ್ತದೆ. ಸ್ಥಳೀಯರಿಗೆ ಉದ್ಯೋಗ ಕೊಡುತ್ತೇವೆ ಎಂದು ಹೇಳಿ ಯಾದಗಿರಿ ತಾಲೂಕಿನ ಕಡೇಚೂರ – ಬಾಡಿಹಾಳ ಗ್ರಾಮದ ರೈತರಿಂದ 3232 ಎಕರೆ ಭೂಮಿ ಸ್ವಾಧೀನ ಮಾಡಿಕೊಂಡಿತ್ತು. ಆದರೆ, ಅಂತಹ ಯಾವುದೇ ಕೈಗಾರಿಕೆಗಳು ಇನ್ನೂ ಆರಂಭವಾಗಿಲ್ಲ. ಬದಲಾಗಿ ಕೆಮಿಕಲ್ ಕಂಪನಿಯನ್ನು ಆರಂಭಿಸಲಾಗಿದೆ. ಇದು ಸುತ್ತಮುತ್ತಲ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದೆ ಎಂದು ಗ್ರಾಮಗಳ ಜನರು ಆರೋಪಿಸಿದ್ದಾರೆ.
ಇದನ್ನೂ ಓದಿ: ರಸ್ತೆಗಳಿಲ್ಲ, ಕುಡಿಯಲು ಶುದ್ಧ ನೀರಿಲ್ಲ; ಗ್ರಾಮ ಪಂ. ಚುನಾವಣೆ ಬಹಿಷ್ಕಾರಕ್ಕೆ ಹಳ್ಳಿಗರ ನಿರ್ಧಾರ!
ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಭೂಮಿ ಕಳೆದುಕೊಂಡ ರೈತರಿಗೆ ಹೆಚ್ಚಿನ ಪರಿಹಾರ ನೀಡಿಲ್ಲ. ಅದೇ ರೀತಿ ಬೃಹತ್ ಕೈಗಾರಿಕೆ ಆರಂಭ ಮಾಡಿ ಉದ್ಯೋಗ ಕಲ್ಪಿಸಿಲ್ಲ. ಕೆಲ ಪರಿಸರಕ್ಕೆ ಮಾರಕವಾಗುವ ಕೆಮಿಕಲ್ ಕಂಪನಿ ಆರಂಭದಿಂದ ನಾವು ಬದಕಲು ಆಗುವುದಿಲ್ಲ. ಈ ರಾಸಾಯನಿಕ ಕಂಪನಿ ಮುಚ್ಚಬೇಕು. ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು. ಪರಿಸರಕ್ಕೆ ಧಕ್ಕೆಯಾಗದಂತಹ ಕೈಗಾರಿಕೆಗಳನ್ನು ಆರಂಭ ಮಾಡಬೇಕು ಎಂದು ಒತ್ತಾಯಿಸಿಸ ಚುನಾವಣಾ ಬಹಿಷ್ಕಾರಕ್ಕೆ ನಿರ್ಧರಿಸಿದ್ದೇವೆ ಎಂದು ಕಡೇಚೂರ ಗ್ರಾಮದ ಮುಖಂಡ ಸಿದ್ದಣ್ಣಗೌಡ ಅವರು ತಿಳಿಸಿದ್ದಾರೆ. ಮಾತನಾಡಿ,
ಸಿಎಂ ಬಿಎಸ್ ಯಡಿಯೂರಪ್ಪ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ನಡೆಯುತ್ತಿರುವ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ ಮಾಡುತ್ತೇವೆ. ಯಾವುದೇ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ. ಸರಕಾರ ಕೂಡಲೇ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: ಗ್ರಾಮ ಪಂಚಾಯತಿ ಚುನಾವಣೆ; ರಾಜ್ಯಾದ್ಯಂತ ಚುನಾವಣಾ ಬಹಿಷ್ಕಾರದ ಪರ್ವ!

