ಜೆಡಿಎಸ್ ಎನ್ಡಿಎ ಮೈತ್ರಿಗೆ ನಾನು ಆಸಕ್ತನಾಗಿಲ್ಲ – ಹೆಚ್ ಡಿ ಕುಮಾರಸ್ವಾಮಿ

ಜೆಡಿಎಸ್ ಪಕ್ಷವನ್ನು ಎನ್ ಡಿಎ ಮೈತ್ರಿಕೂಟದಲ್ಲಿ ಸೇರ್ಪಡೆಗೊಳಿಸಲು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಸಕ್ತಿ ಹೊಂದಿದ್ದಾರೆ ಎಂಬಂತಹ ವರದಿಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತಿತ್ತು. ಆದರೆ, ಇವೆಲ್ಲಾ ಸುಳ್ಳು ವರದಿಗಳು ಎಂದು ಕುಮಾರಸ್ವಾಮಿ ಇಂದು ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್‌  ಮುಗಿಸುವ ಪ್ರಯತ್ನಗಳೆಲ್ಲ ವಿಫಲವಾಗಿವೆ ಎಂಬುದು ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ಮೂಲಕ ಬಿಜೆಪಿಗೆ ಮನವರಿಕೆಯಾಗಿದೆ. ಇದೇ ಕಾರಣಕ್ಕೆ ಮೈತ್ರಿಯ ಕಪಟ ನಾಟಕವಾಡಲು ಬಿಜೆಪಿ ನಿಂತಿದೆ. ಇದಕ್ಕಾಗಿಯೇ ಜೆಡಿಎಸ್‌ ಎನ್‌ಡಿಎ ಸೇರಲಿದೆ ಎಂಬ ಕಲ್ಪಿತ ಸುದ್ದಿಗಳನ್ನು ವ್ಯವಸ್ಥಿತವಾಗಿ ಹರಡುತ್ತಿದೆ. ಇದೆಲ್ಲವೂ ಅಪ್ಪಟ ಸುಳ್ಳು ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

1997ರಲ್ಲಿ ದೇವೇಗೌಡರು ಪ್ರಧಾನಿ ಸ್ಥಾನದಿಂದ ಇಳಿಯುವಾಗ ಇದೇ ಬಿಜೆಪಿಯ ಅಗ್ರಮಾನ್ಯ ಸಾರ್ವಕಾಲಿಕ ನಾಯಕ ದಿ. ವಾಜಪೇಯಿ ಅವರು ದೇವೇಗೌಡರಿಗೆ, ಜನತಾದಳಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದರು. ಆಗಲೇ ಪ್ರಧಾನಿ ಹುದ್ದೆ, ಕೇಂದ್ರದ ಅಧಿಕಾರ ತಿರಸ್ಕರಿಸಿ ಬಂದವರು ನಾವು. ಇನ್ನು ಯಕಶ್ಚಿತ್‌ ಮಂತ್ರಿ ಸ್ಥಾನಕ್ಕೆ ಆಸೆ ಪಡುವ ವ್ಯಕ್ತಿ ನಾನಲ್ಲ ಎಂದಿದ್ದಾರೆ.

ಸದ್ಯ ಯಾವ ಪಕ್ಷಕ್ಕೆ ಯಾರ ಅಗತ್ಯವೂ ಇಲ್ಲ. ನಮಗಂತೂ ಬಿಜೆಪಿ ಸ್ನೇಹ ಬೇಕಿಲ್ಲ.ನಮಗೆ ಬೇಕಿರುವುದು ರಾಜ್ಯದ ಅಭಿವೃದ್ಧಿ ಹಾಗೂ ನಮ್ಮ ಕಾರ್ಯಕರ್ತರು. ಪ್ರತಿಕೂಲ ಪರಿಸ್ಥಿತಿ ಇದ್ದರೂ ಕಾರ್ಯಕರ್ತರಲ್ಲಿ ಉತ್ಸಾಹ, ಚೈತನ್ಯವಿದೆ ಎಂಬುದು ಗ್ರಾ.ಪಂ. ಚುನಾವಣೆ ಫಲಿತಾಂಶದಿಂದ ಎಲ್ಲರಿಗೂ ಗೊತ್ತಾಗಿದೆ. ಈಗ ನಮ್ಮ ಮುಂದಿರುವುದು ಪಕ್ಷದ ಸಂಘಟನೆ ಮಾತ್ರ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights