ಫ್ಯಾಕ್ಟ್‌ಚೆಕ್ : ಮುಖ್ಯಶಿಕ್ಷಕ ಮತ್ತು ಬಾಲಕಿಯ ಚಿತ್ರವನ್ನು ದಂಪತಿಗಳು ಎಂದು ತಪ್ಪಾಗಿ ಹಂಚಿಕೆ

ಮುಸ್ಲಿಂ ಸಮುದಾಯದ 50ವರ್ಷದ ವ್ಯಕ್ತಿಯೊಬ್ಬ 8ವರ್ಷದ ಪುಟ್ಟ ಬಾಲಕಿಯನ್ನು ವಿವಾಹವಾಗಿದ್ದಾನೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಪುಟ್ಟ ಬಾಲಕಿಯೊಬ್ಬಳು ವೃದ್ಧನ ಜೊತೆ ನಿಂತಿರುವ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ  ವೈರಲ್ ಆಗಿದ್ದು,  ವೃದ್ಧನೊಬ್ಬ ಪುಟ್ಟ ಬಾಲಕಿಯನ್ನು ಮದುವೆಯಾಗಿದ್ದಾನೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಇಸ್ಲಾಂ ಧರ್ಮವನ್ನು ಗುರಿಯಾಗಿಸಿಕೊಂಡು ಈ ಪೋಸ್ಟ್‌ಅನ್ನು ಮಾಡಲಾಗಿದೆ ಎಂಬ ಕಮೆಂಟ್‌ಗಳನ್ನು ಕಾಣಬಹುದಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪನೆಯನ್ನು  ಪರಿಶೀಲಿಸಲು  ಗೂಗಲ್ ಸರ್ಚ್ ಮಾಡಿದಾಗ, ಈ ಘಟನೆಗೆ ಸಂಬಂಧಿಸಿದಂತೆ 20 ಮೇ 2016 ರ ಟರ್ಕಿಶ್ ಪತ್ರಿಕೆ SoL ಮಾಡಿದ ವರದಿಯೊಂದು ಲಭ್ಯವಾಗಿದೆ.

ಈ ವರದಿಯ ಪ್ರಕಾರ, ಎಲಾಜಿಗ್‌ನಲ್ಲಿರುವ ಶಿಶುವಿಹಾರದ ಕೇಂದ್ರವೊಂದರಲ್ಲಿ ಕುರಾನ್ ಅಭ್ಯಾಸವನ್ನು ಆಚರಿಸುವ ಸಂದರ್ಭದಲ್ಲಿ,  ಬಾಲಕಿಯರು ಮದುವೆಯ ವೇಷಭೂಷಣಗಳನ್ನು ಧರಿಸಿದ್ದರು. ಅಕ್ಷರ ಕಲಿಯುತ್ತಿರುವ ಮಕ್ಕಳ ಹಲವು ಪೋಟೊ ಮತ್ತು ವೀಡಿಯೊಗಳ ಮೂಲಕ ಕುರಾನ್‌ನ ಬೋಧನೆಗಳನ್ನು ಸ್ವೀಕರಿಸುತ್ತಿದ್ದಾರೆ ಎಂದು ಶಿಶುವಿಹಾರವು ಸಾಮಾಜಿಕ ಮಾಧ್ಯಮದಲ್ಲಿ ಹೇಳಿತ್ತು. ಮಕ್ಕಳಿಂದ ಕುರಾನ್ ಅಧ್ಯಯನವನ್ನು ಆಚರಿಸಲು ಸಂಸ್ಥೆಯು ಉತ್ಸವವನ್ನು ಆಯೋಜಿಸಿತ್ತು. ಈ ಹಬ್ಬದಲ್ಲಿ ಹುಡುಗಿಯರು ಮದುವೆಯ ಡ್ರೆಸ್ ಧರಿಸಿದ್ದರು. ಚಿತ್ರದಲ್ಲಿ ಕಾಣುತ್ತಿರುವವರು ಶಿಶುವಿಹಾರದ ಮುಖ್ಯೋಪಾಧ್ಯಾಯರು.

ಟರ್ಕಿಯ ಮತ್ತೊಂದು ಪ್ರಮುಖ ಪತ್ರಿಕೆಯಾದ ಮಿಲಿಯೆಟ್ ಕೂಡ ಈ ಫೋಟೋಗೆ ಸಂಬಂಧಿಸಿದ ಸುದ್ದಿಯನ್ನು ಮೇ 20, 2016 ರಂದು ಪ್ರಕಟಿಸಿದೆ. ಈ ಚಿತ್ರಗಳು ಟರ್ಕಿಶ್ ನಗರದ ಎಲಾಜಿಗ್‌ನಲ್ಲಿರುವ ಶಿಶುವಿಹಾರ ಎಂದು ಹೇಳಲಾಗಿದೆ. ಆದರೆ, ಆ ಕಾಲದಲ್ಲೂ ಪ್ಲೇ ಸ್ಕೂಲ್‌ನಲ್ಲಿ ಹೆಣ್ಣುಮಕ್ಕಳಿಗೆ ಮದುವೆ ಹೆಣ್ಣಿನಂತೆ ಸಿಂಗಾರ ಮಾಡಿರುವುದನ್ನು ಹಲವರು ಟೀಕಿಸಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಟರ್ಕಿಯ ಎಲಾಜಿಗ್‌ನಲ್ಲಿರುವ ಶಿಶುವಿಹಾರದ ಮುಖ್ಯ ಶಿಕ್ಷಕ ಮತ್ತು ಬಾಲಕಿ ಇರುವ ಚಿತ್ರವನ್ನು ಮುಸ್ಲಿಂ ವ್ಯಕ್ತಿ ಪುಟ್ಟ ಬಾಲಕಿಯನ್ನು ಮದುವೆಯಾಗಿದ್ದಾನೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೆ.

ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಯೋವೃದ್ಧರು ಮತ್ತು ಪುಟ್ಟ ಬಾಲಕಿಯ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಇಬ್ಬರೂ ಪತಿ-ಪತ್ನಿ ಎಂದು ಹೇಳಲಾಗಿದೆ. ಇದು ನಿಜವಲ್ಲ. ವಾಸ್ತವವಾಗಿ ಇದು ಟರ್ಕಿಯ ಎಲಾಜಿಗ್‌ನಲ್ಲಿರುವ ಶಿಶುವಿಹಾರದ ಮುಖ್ಯೋಪಾಧ್ಯಾಯರು ಮತ್ತು ಅವರ ವಿದ್ಯಾರ್ಥಿಯ ಚಿತ್ರವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮಸೀದಿಯಲ್ಲಿ ಕನ್ನಡ ನಾಮಫಲಕ ಅಳವಡಿಸಿಲ್ಲ ಎಂದು ಸುಳ್ಳು ಪೋಸ್ಟ್‌ ಹಂಚಿಕೊಂಡ BJP ಬೆಂಬಲಿಗರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights