ರಾಜಸ್ಥಾನ: ಕಾಂಗ್ರೆಸ್ ಜೊತೆ ಬಿಎಸ್‌ಪಿ ಶಾಸಕರ ವಿಲೀನ; ತುರ್ತು ಸಭೆ ಕರೆದ ಬಿಜೆಪಿ
ರಾಜಸ್ಥಾನದ ಆರು ಬಿಎಸ್‌ಪಿ ಶಾಸಕರು ಆಡಳಿತಾರೂಢ ಕಾಂಗ್ರೆಸ್ ಜೊತೆಗೆ ವಿಲೀನ ಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ವಿಧಾನಸಭಾ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ಬಿಜೆಪಿ ಹೈಕಮಾಂಡ್ ರಾಜಸ್ಥಾನದ ತನ್ನ ಮೂವರು ಉನ್ನತ ನಾಯಕರ ಜೊತೆ ದೆಹಲಿಯಲ್ಲಿ ತುರ್ತು ಸಭೆ ಕರೆದಿದೆ. ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಸತೀಶ್ ಪೂನಿಯಾ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ಮತ್ತು ಬಿಜೆಪಿ ರಾಜ್ಯ ಉಪಾದ್ಯಕ್ಷ ರಾಜೇಂದ್ರ ರಾಥೋಡ್ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಜೊತೆ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಮೂಲಗಳ ಪ್ರಕಾರ, ಬಿಎಸ್‌ಪಿ ಶಾಸಕರು ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳಲು ಸಲ್ಲಿಸಿದ್ದ ಅರ್ಜಿಯ ವಿಚಾರಕ್ಕೆ ಸುಪ್ರೀಂ ನೋಟಿಸ್ ನೀಡಿರುವ ವಿಚಾರವಾಗಿ ಬಿಜೆಪಿ ಚರ್ಚೆ ನಡೆಸಲಿದೆ ಎಂದು ಹೇಳಲಾಗಿದೆ. ಅಲ್ಲದೆ, ರೈತರ ಹೋರಾಟವನ್ನು ಬೆಂಬಲಿಸಿ ಹನುಮಾನ್ ಬೆನಿವಾಲ್ ನೇತೃತ್ವದ ಆರ್‌ಎಲ್‌ಪಿ ಪಕ್ಷವು ಬಿಜೆಪಿಯೊಂದಿಗಿನ ಸಖ್ಯ ತೊರೆದಿರುವ ವಿಚಾರವಾಗಿಯೂ ಚರ್ಚಿಸಬಹುದು. ಅಷ್ಟೇ ಅಲ್ಲದೆ, ರಾಜಸ್ಥಾನದಲ್ಲಿ ಮುಂದೆ ನಡೆಯಲಿರುವ ಮೂರು ವಿಧಾನಸಭಾ ಉಪಚುನಾವಣೆಗೆ ಸಿದ್ದತೆಯ ಬಗ್ಗೆಯೂ ಚರ್ಚಿಸಲಾಗುತ್ತದೆ ಎಂದು ಹೇಳಲಾಗಿದೆ.
ರಾಜಸ್ಥಾನದಲ್ಲಿ 200 ಶಾಸಕರ ಸಂಖ್ಯಾ ಬಲವಿರುವ ವಿಧಾನಸಭೆಯಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ 100 ಶಾಸಕರನ್ನು ಹೊಂದಿದೆ. ಕಳೆದ ಜುಲೈ-ಆಗಸ್ಟ್ ತಿಂಗಳಿನಲ್ಲಿ ಗೆಹ್ಲೋಟ್ ವಿರುದ್ಧ ಸಚಿನ್ ಪೈಲಟ್ ಬಂಡಾಯ ಎದ್ದಿದ್ದ ಸಂದರ್ಭದಲ್ಲಿ ಬಿಎಸ್‌ಪಿ ವಿಲೀನ ಭಾರೀ ಗಮನ ಸೆಳೆದಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಬಹುಮತ ಸಾಬೀತು ಪಡಿಸಲು ಬಿಎಸ್‌ಪಿ ಶಾಸಕರು ಪ್ರಮುಖ ಪಾತ್ರವಹಿಸಿದ್ದರು.
ಇದನ್ನೂ ಓದಿ: ರಾಜಸ್ಥಾನ: ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಬಿಟಿಪಿ ಪಕ್ಷ!
ಅಂದಿನಿಂದಲೂ, ಬಿಜೆಪಿಯ ಮೂವರು ನಾಯಕರಾದ ಪೂನಿಯಾ-ಕಟಾರಿಯಾ-ರಾಥೋಡ್ ಅವರು ಗೆಹ್ಲೋಟ್ ಸರ್ಕಾರ ಆರು ತಿಂಗಳಲ್ಲಿ ಬೀಳಲಿದೆ ಎಂದು ಪದೇ ಪದೇ ಹೇಳುತ್ತಲೇ ಇದ್ದಾರೆ. ಅಲ್ಲದೆ, ಇಂದು ನಡೆಯಲಿರುವ ದೆಹಲಿ ಸಭೆಯಿಂದ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರನ್ನು ಹೈಕಮಾಂಡ್ ದೂರವಿಟ್ಟಿದೆ ಎಂದು ವರದಿಯಾಗಿದೆ. ಸಚಿನ್ ಪೈಲಟ್ ಬಂಡಾಯದ ಸಂದರ್ಭದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದಾಗ, ಗೆಹ್ಲೋಟ್ ಸರ್ಕಾರವನ್ನು ಉರುಳಿಸದಂತೆ ಉಳಿಸಲು ವಸುಂದರಾ ರಾಜೆ ಸಹಾಯ ಮಾಡಿದ್ದಾರೆ ಎಂಬ ವದಂತಿಗಳಿವೆ.
ಕಳೆದ ವರ್ಷ ಆಗಸ್ಟ್ 24 ರಂದು ರಾಜಸ್ಥಾನ್ ಹೈಕೋರ್ಟ್ ಹೊರಡಿಸಿದ ಆದೇಶದ ವಿರುದ್ಧ ಬಿಎಸ್‌ಪಿ ಮತ್ತು ಬಿಜೆಪಿ ಶಾಸಕ ಮದನ್ ದಿಲಾವರ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸಿದೆ. ಕಾಂಗ್ರೆಸ್ ಜೊತೆಗೆ ಬಿಎಸ್‌ಪಿ ಶಾಸಕರ ವಿಲೀನಕ್ಕೆ 18 ಸೆಪ್ಟೆಂಬರ್ 2019 ರಂದು ವಿಧಾನಸಭೆ ಸ್ಪೀಕರ್ ಅನುಮೋದನೆ ನೀಡಿ ಅಂಗೀಕರಿಸಿದ್ದರು. ಇದನ್ನು ಪ್ರಶ್ನಿಸಿ ಬಿಎಸ್‌ಪಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಆದರೂ, ಆರು ಶಾಸಕರ ಪಕ್ಷಾಂತರದ ವಿರುದ್ದ ಅನರ್ಹತೆಯ ಅರ್ಜಿಯನ್ನು ಸ್ಪೀಕರ್‌ಗೆ ಸಲ್ಲಿಸಲು ಹೈಕೋರ್ಟ್ ಬಿಎಸ್‌ಪಿಗೆ ಅವಕಾಶ ನೀಡಿತ್ತು. ವಿಲೀನ ವಿರುದ್ಧ ಬಿಜೆಪಿ ಶಾಸಕರು ಸಲ್ಲಿಸಿದ್ದ ಅನರ್ಹತೆ ಅರ್ಜಿಯನ್ನು ಮೂರು ತಿಂಗಳೊಳಗೆ ತೀರ್ಮಾನಿಸುವಂತೆ ರಾಜಸ್ಥಾನ ಹೈಕೋರ್ಟ್ ಸ್ಪೀಕರ್‌ಗೆ ಸೂಚಿಸಿತ್ತು.
ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ಆಡಳಿತಾರೂಢ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ; BJPಗಿಂತ ಸ್ವತಂತ್ರರೇ ಹೆಚ್ಚು ಗೆಲುವು!