ಹಂಪಿ ದೇವಾಲಯದಲ್ಲಿ ವಸ್ತ್ರಸಂಹಿತೆ ಬ್ಯಾನರ್ ಹಾಕಿದ ಪುಂಡರು: ಪ್ರವಾಸಿಗರಲ್ಲಿ ಗೊಂದಲ

ಹಂಪಿಯ ವಿರೂಪಾಕ್ಷ ದೇವಾಲಯದ ಬಳಿಯಲ್ಲಿ ವಸ್ತ್ರಸಂಹಿತೆ ಕುರಿತ ಬ್ಯಾನರ್‌ ಶುಕ್ರವಾರ ಪ್ರತ್ಯಕ್ಷವಾಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ರಾಜ್ಯ ಮತ್ತು ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಬರುವ ಐತಿಹಾಸಿಕ ಪ್ರವಾಸಿ ತಾಣವಾಗಿರುವ ಹಂಪಿಯಲ್ಲಿ ವಸ್ತ್ರಸಂಹಿತೆಯ ಬ್ಯಾನರ್‌ ಹಾಕಿರುವುದು ಪ್ರವಾಸಿಗರಿಗೆ ಗೊಂದಲ ಉಂಟುಮಾಡಿದೆ.

ದೇವಸ್ಥಾನದ ಪ್ರವೇಶ ದ್ವಾರದಲ್ಲಿ ವಸ್ತ್ರ ಸಂಹಿತೆಗೆ ಸಂಬಂಧಿಸಿದ ಬ್ಯಾನರ್‌ ಅಳವಡಿಸಲಾಗಿದೆ. ವಿರೂಪಾಕ್ಷ ದೇವಸ್ಥಾನ ಪ್ರವೇಶಿಸುವ ಭಕ್ತರು ಸೀರೆ, ಚೂಡಿದಾರ್‌, ಪಂಚೆ, ಪ್ಯಾಂಟು, ಶರ್ಟ್‌ ಧರಿಸಿಕೊಂಡು ಒಳಹೋಗಬೇಕು ಎಂಬ ಹೇಳಿಕೆಯೊಂದಿಗೆ ಚಿತ್ರ ಬಿಡಿಸಲಾಗಿದೆ.  ಇನ್ನೊಂದು ಬದಿಯಲ್ಲಿ ತುಂಡುಡುಗೆಗಳಾದ ಶಾರ್ಟ್ಸ್‌, ನೈಟಿ ಧರಿಸಿದವರಿಗೆ ಪ್ರವೇಶವಿಲ್ಲ ಎಂಬ ಸೂಚನೆಯನ್ನು ನೀಡಲಾಗಿದೆ.

‘ಹಂಪಿಯಲ್ಲಿ ವಸ್ತ್ರ ಸಂಹಿತೆಯ ಬ್ಯಾನರ್‌‌ ಅಳವಡಿಸಿರುವುದು ಗಮನಕ್ಕೆ ಬಂತು. ಪ್ರವಾಸಕ್ಕೆ ಬಂದಿದ್ದ ನಮ್ಮ ಸ್ನೇಹಿತರಲ್ಲಿ ಕೆಲವರು ಶಾರ್ಟ್ಸ್‌ ಧರಿಸಿದ್ದರಿಂದ ಅನುಮಾನ ಬಂದು ದೇವಸ್ಥಾನದವರನ್ನು ವಿಚಾರಿಸಿದೆವು. ಅವರು ದರ್ಶನ ಮಾಡಿಕೊಂಡು ಹೋಗುವಂತೆ ತಿಳಿಸಿದ್ದರಿಂದ ನಮಗೆ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಆದರೆ, ಇದರಿಂದ ಭಕ್ತರಲ್ಲಿ ಗೊಂದಲ ಉಂಟಾಗುತ್ತಿದೆ’ ಎಂದು ಬೆಂಗಳೂರಿನ ಪ್ರವಾಸಿ ಲಕ್ಷ್ಮಿ ತಿಳಿಸಿದರು.

‘ಈ ಬ್ಯಾನರ್‌ ದೇವಸ್ಥಾನದಿಂದ ಅಳವಡಿಸಿಲ್ಲ. ಯಾವುದೇ ಸಂಘಟನೆಯೂ ಇದರ ಜವಾಬ್ದಾರಿ ಹೊತ್ತುಕೊಂಡಿಲ್ಲ. ಯಾರೋ ಖಾಸಗಿ ವ್ಯಕ್ತಿಗಳು ವಸ್ತ್ರ ಸಂಹಿತೆಯ ಬ್ಯಾನರ್‌‌ ಹಾಕಿದ್ದಾರೆ’ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್‌ ರಾವ್ ತಿಳಿಸಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.

‘ಇದುವರೆಗೆ ಹಂಪಿ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ವಸ್ತ್ರ ಸಂಹಿತೆಗೆ ಸಂಬಂಧಿಸಿದ ಬ್ಯಾನರ್‌ ಇರಲಿಲ್ಲ. ಶುಕ್ರವಾರ ಏಕಾಏಕಿ ಕಾಣಿಸಿಕೊಂಡಿದೆ. ಇದು ಭಕ್ತರಲ್ಲಿ ಗೊಂದಲ ಮೂಡಿಸಿದೆ. ಹಂಪಿಗೆ ವಿವಿಧ ಭಾಗಗಳ ಜನ ಬಂದು ಹೋಗುತ್ತಾರೆ. ಒಬ್ಬೊಬ್ಬರು ಒಂದೊಂದು ರೀತಿಯ ದಿರಿಸು ಧರಿಸಿಕೊಂಡು ಬರುತ್ತಾರೆ. ಅನಗತ್ಯ ಗೊಂದಲ ಸೃಷ್ಟಿಸಬಾರದು. ಅದಕ್ಕೆ ಅವಕಾಶವೂ ಕೊಡಬಾರದು’ ಎಂದು ಹೆಸರು ಹೇಳಲಿಚ್ಛಿಸದ ಹಂಪಿ ಹಿರಿಯ ಗೈಡ್‌ ಹೇಳಿದರು.

ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೆ ತರಬೇಕು ಎಂದು ವಿಶ್ವ ಹಿಂದೂ ಪರಿಷತ್, ಬಜರಂಗ ದಳ‌ ಹೋರಾಟ ನಡೆಸಿದ್ದವು.

ಆದರೆ, ಈ ಬ್ಯಾನರ್‌‌ ಅಳವಡಿಸಿದವರು ಯಾರು ಎಂದು ತಿಳಿದುಬಂದಿಲ್ಲ.


ಇದನ್ನೂ ಓದಿ: ಹೆಚ್‌ಡಿಕೆ ಸರ್ಕಾರದ ದೂರವಾಣಿ ಕದ್ದಾಲಿಕೆ ಪ್ರಕರಣ; ವಿಚಾರಣೆಗೆ ಬಿಎಸ್‌ವೈ ನಕಾರ: ಕಾರಣವೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights