ಕೃಷಿ ಕಾಯ್ದೆಗಳನ್ನು ತಡೆಹಿಡಿಯಿರಿ; ಇಲ್ಲವೇ ನಾವೇ ತಡೆಯುತ್ತೇವೆ: ಕೇಂದ್ರಕ್ಕೆ ಸುಪ್ರೀಂ ಆದೇಶ
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ದ ಹೋರಾಟ ನಡೆಸುತ್ತಿರುವ ರೈತರಿಗೆ ಮೊದಲ ಹಂತದ ಗೆಲುವು ಸಿಕ್ಕಿದೆ. ಕೃಷಿ ನೀತಿಗಳ ವಿರುದ್ದ ರೈತ ಹೋರಾಟಗಾರರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, “ಕಾಯ್ದೆಗಳನ್ನು ನೀವು ತಡೆಹಿಡಿಯುತ್ತೀರಾ ಅಥವಾ ಈ ಕೆಲಸವನ್ನು ನಾವು ಮಾಡಬೇಕೆ? ಇದರಲ್ಲಿ ಅಹಂ ಯಾಕೆ?” ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
“ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಏನಾದರೂ ತೊಂದರೆಯಾದರೆ ಪ್ರತಿಯೊಬ್ಬರೂ ಜವಾಬ್ದಾರರಾಗುತ್ತೇವೆ. ನಮ್ಮ ಕೈಯಲ್ಲಿ ಯಾವುದೇ ರೀತಿಯ ರಕ್ತದ ಕಲೆಗಳನ್ನು ನಾವು ಬಯಸುವುದಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ ತೀಕ್ಷ್ಣವಾದ ಹೇಳಿಕೆ ನೀಡಿದ್ದಾರೆ.”
ರೈತರು ಪ್ರತಿಭಟನೆ ಮುಂದುವರಿಸಬಹುದು. “ಆದರೆ ನೀವು ಅದೇ ಸ್ಥಳದಲ್ಲಿ (ದೆಹಲಿ ಗಡಿಯಲ್ಲಿ) ಪ್ರತಿಭಟನೆಯನ್ನು ಮುಂದುವರಿಸಲು ಬಯಸುತ್ತೀರಾ ಅಥವಾ ಇತರ ಬೇರೆ ಸ್ಥಳಕ್ಕೆ ಹೋಗಬೇಕೆ ಎಂಬುದನ್ನು ನೀವೆ ನಿರ್ಧರಿಸಿ” ಎಂದು ರೈತರಿಗೆ ಉನ್ನತ ನ್ಯಾಯಾಲಯ ಸೂಚಿಸಿದೆ.
“ನಾವು ಕೊನೆಯ ವಿಚಾರಣೆಯಲ್ಲಿ ಸರ್ಕಾರ ಮತ್ತು ರೈತ ಸಂಘಟನೆಗಳ ನಡುವೆ ಕೃಷಿ ನೀತಿಗಳ ಬಗ್ಗೆ ಆರೋಗ್ಯಕರ ಚರ್ಚೆಗಳು ನಡೆಯುತ್ತಿವೆಯೇ ಎಂದು ತಿಳಿಸಲು ಕೇಳಿದ್ದೇವೆ. ಆದರೆ ಉತ್ತರವಿಲ್ಲ. ಪರಿಸ್ಥಿತಿ ಹದಗೆಟ್ಟಿದೆ. ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಚಳಿಯ ಹವಾಮಾನದಲ್ಲಿಯೂ ವೃದ್ಧರು ಮತ್ತು ಮಹಿಳೆಯರು ಏಕೆ ಆಂದೋಲನದ ಭಾಗವಾಗಿದ್ದಾರೆ?” ಮುಖ್ಯ ನ್ಯಾಯಮೂರ್ತಿಗಳು ಸರ್ಕಾರವನ್ನು ಪ್ರಶ್ನಿಸಿದರು.
ಇದನ್ನೂ ಓದಿ: ದೇಹದ ರೋಗಕ್ಕೆ ಮಾತ್ರವಲ್ಲ; ಸಮಾಜದ ರೋಗಗಳಿಗೂ ಮದ್ದುಕೊಡುತ್ತಿದ್ದಾರೆ ವೈದ್ಯ ದರ್ಶನ್ ಪಾಲ್!
ಕೃಷಿ ಕಾಯ್ದೆಗಳ ಅನುಷ್ಠಾನವನ್ನು ತಡೆಹಿಡಿಯಿರಿ. ಕೇಂದ್ರವು ಅದನ್ನು ಸ್ವಂತವಾಗಿ ಮಾಡದಿದ್ದರೆ, ನಾವು ಅದನ್ನು ಮಾಡುತ್ತೇವೆ ಎಂದಿರುವ ಮುಖ್ಯನ್ಯಾಯಮೂರ್ತಿಗಳು, ಕೃಷಿ ಕಾಯ್ದೆಗಳ ವಿಚಾರವಾಗಿ ಸಮಿತಿಯನ್ನು ರಚಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಳೆದ 48 ದಿನಗಳಿಂದ (ನವೆಂಬರ್ 25ರಿಂದ) ದೆಹಲಿ ಗಡಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಮತ್ತು ರೈತರ ನಡುವೆ 08 ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ, ತನ್ನ ಅಹಂ ಬಿಡದ ಕೇಂದ್ರ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯಲು ನಿರಾಕರಿಸಿತ್ತು. ಅಲ್ಲದೆ, ಕಾಯ್ದೆಗಳಿಗೆ ತಿದ್ದುಪಡಿ ತರುವುದಾಗಿ ಹೇಳಿತ್ತು.
ಸರ್ಕಾರವು ಕಾನೂನುಗಳನ್ನು ರದ್ದುಗೊಳಿಸಬೇಕು. ಅದರ ಹೊರತಾಗಿ ಬೇರೆ ಯಾವುದಕ್ಕೂ ನಾವು ಒಪ್ಪುವುದಿಲ್ಲ ಎಂದು ರೈತರು ಹೇಳಿದ್ದಾರೆ. ಕೃಷಿ ನೀತಿಗಳು ನಮ್ಮ ಆದಾಯವನ್ನು ನಾಶ ಮಾಡುತ್ತವೆ ಮತ್ತು ಕಾರ್ಪೊರೇಟ್‌ಗಳಿಗೆ ಪ್ರಯೋಜನವನ್ನು ನೀಡುತ್ತವೆ. ಅವುಗಳ ರದ್ದಾಗದ ಹೊರತು ರೈತರಿಗೆ ಉಳಿಗಾಲವಿಲ್ಲ ಎಂದು ರೈತರು ಹೇಳಿದ್ದಾರೆ.
ಸರ್ಕಾರ ಮತ್ತು ರೈತರ ನಡುವೆ ಮುಂದಿನ ಸಭೆ ಶುಕ್ರವಾರ ನಡೆಯಲಿದೆ.
ಇದನ್ನೂ ಓದಿ: ಹೊಸ ಬೆಳೆ ಬೆಳೆಯಬಲ್ಲವ… ಹೊಸ ನಗರವನ್ನು ಸೃಷ್ಟಿಸಬಲ್ಲ! ದೆಹಲಿ ಗಡಿಯಲ್ಲಿ ನಗರ ನಿರ್ಮಿಸುತ್ತಿದ್ದಾರೆ ರೈತರು

