ರೈತ ಪ್ರತಿಭಟನೆ: ಸುಪ್ರೀಂ ಕೋರ್ಟ್‌ ಪಿತೃಪ್ರಧಾನ ಧೋರಣೆ ಹೊಂದಿದೆ; ನಾವು ಪ್ರತಿಭಟನೆ ಬಿಡುವುದಿಲ್ಲ: ರೈತ ಮಹಿಳೆಯರು

ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳ ವಿರುದ್ಧ ಕಳೆದ 50 ದಿನಗಳಿಂದ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಪುರುಷರು ಮಾತ್ರವಲ್ಲ, ರೈತ ಮಹಿಳೆಯರೂ ಭಾಗಿಯಾಗಿದ್ದಾರೆ. ಕೃಷಿ ಕಾಯ್ದೆಗಳು ರದ್ದಾಗುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಹೇಳುತ್ತಿದ್ದಾರೆ.

ಪಂಜಾಬ್‌ನಲ್ಲಿ ‘ಲೋಹ್ರಿ’ ಹಬ್ಬವನ್ನು ರೈತರು ಸಂಭ್ರಮದಿಂದ ಆಚರಿಸುತ್ತಾರೆ. ಇದೇ ಮೊದಲ ಬಾರಿಗೆ ರೈತ ಮಹಿಳೆಯರು ಹಬ್ಬದ ಸಂದರ್ಭದಲ್ಲಿ ಅವರ ಮನೆಯಿಂದ ದೂರವಿದ್ದಾರೆ. ಆದರೆ, ಅವರ್ಯಾರು ಈ ಬಗ್ಗೆ ಬೇಸರವಾಗಿಲ್ಲ. ಎಲ್ಲರೂ ಹೋರಾಟದಲ್ಲಿದ್ದೇವೆ. ಇಲ್ಲಿಯೇ ‘ಕೃಷಿ ಕಾಯ್ದೆಗಳ ಲಕ್ಷಾಂತರ ಪ್ರತಿಗಳನ್ನು ಸುಟ್ಟು’ ಹಬ್ಬ ಆಚರಿಸಿದ್ದೇವೆ ಎಂದು ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮಹಿಳೆ ರವೀಂದರ್ ಪಾಲ್‌ ಕೌರ್‌ ಅವರು ಹೇಳಿದ್ದಾರೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್‌, ದೆಹಲಿಯ ಶೀತ ಮತ್ತು ಚಳಿ ನಮ್ಮನ್ನು ಆತಂಕಕ್ಕೀಡು ಮಾಡಿದೆ. ಹಾಗಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಮಹಿಳೆಯರು, ರೈತರು, ಮಕ್ಕಳು ತಮ್ಮ ಮನೆಗಳಿಗೆ ಹಿಂದಿರುಗಬೇಕು ಎಂದು ಸಲಹೆ ನೀಡಿತ್ತು. ಕೋರ್ಟ್‌ನ ಈ ಸಲಹೆ ನಮಗೆ ನಿರಾಶೆಯಾಗಿದೆ. ನಮ್ಮ ಹೋರಾಟದ ಸಂಕಲ್ಪ ಎಂದಿಗೂ ಕುಂದುವುದಿಲ್ಲ. ನಾವು ಹಿಂದಿರುವುದಿಲ್ಲ ಎಂದು 50 ವರ್ಷದ ಕೌರ್‌ ತಿಳಿಸಿದ್ದಾರೆ.

“ನ್ಯಾಯಾಲಯವು ಮಹಿಳೆಯರನ್ನು ಮನೆಗೆ ಹಿಂದಿರುಗುವಂತೆ ಹೇಗೆ ಕೇಳುತ್ತದೆ? ಕೃಷಿಯಲ್ಲಿ ಮಹಿಳೆಯ ಪಾತ್ರ ಹೆಚ್ಚಿದೆ. ಹೊಲ-ಗದ್ದೆಗಳಲ್ಲಿ ಬೀಜಗಳನ್ನು ಭಿತ್ತನೆ ಮಾಡುವುದರಿಂದ ಬೆಳೆಗಳನ್ನು ಕೊಯ್ಲು ಮಾಡುವವರೆಗೂ ಮಹಿಳೆಯ ಶ್ರಮ ಹೆಚ್ಚಾಗಿರುತ್ತದೆ. 80% ರಷ್ಟು ಕೃಷಿ ಕಾರ್ಮಿಕರು ಮಹಿಳೆಯರೇ ಆಗಿದ್ದೇವೆ. ನಾವು ಪುರುಷರಿಗೆ ಸಮಾನರು. ನಾವು ಪ್ರತಿಭಟನಾ ಸ್ಥಳದಿಂದ ಕದಲವುದಿಲ್ಲ” ಎಂದು ಜೈ ಕಿಸಾನ್‌ ಆಂದೋಲನದ ಕಾರ್ಯದರ್ಶಿಯಾಗಿರುವ ಕೌರ್ ಹೇಳಿದ್ದಾರೆ.

ನ್ಯಾಯಾಧೀಶರ ದೃಷ್ಟಿಕೋನವು ಪಿತೃಪ್ರಧಾನ ವ್ಯವಸ್ಥೆ ಮತ್ತು ಸಮಾಜದಲ್ಲಿ ಮಹಿಳೆಯರ ಪಾತ್ರವನ್ನು ಕೀಳಾಗಿ ಕಾಣುತ್ತಿದೆ. ಇತಿಹಾಸದುದ್ದಕ್ಕೂ ಎಲ್ಲಾ ಹೋರಾಟಗಳಲ್ಲಿಯೂ ಮಹಿಳೆಯರು ನಿರ್ಣಾಯಕ ಪಾತ್ರವಹಿಸಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಕೆಲಸ ಮಾಡುತ್ತಾರೆ. ಹೀಗಿರುವಾಗ ಈ ತಾರತಮ್ಯ ಏಕೆ? ಎಂದು ಹರಿಯಾಣದ ರೈತ ಮಹಿಳೆ ರಾಜ್‌ಬಾಲಾ ಯಾದವ್ ಕೌರ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ರೈತ ಹೋರಾಟದ ಕಿಡಿ ಜಗಮೋಹನ್‌ ಸಿಂಗ್‌ ಪಟಿಯಾಲ; ಇವರು ಯಾರು ಗೊತ್ತೇ?

“ನಾವು ನಮ್ಮ ಭೂಮಿಯನ್ನು ನಮ್ಮ ತಾಯಿಯೆಂದು ಪರಿಗಣಿಸುತ್ತೇವೆ. ಅದಕ್ಕಾಗಿ ನಾವು ನಮ್ಮ ಜೀವನವನ್ನು ತ್ಯಾಗ ಮಾಡಲು ಸಿದ್ದರಾಗಿದ್ದೇವೆ.” ಹೊಸ ಕೃಷಿ ನೀತಿಗಳು ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಇಲ್ಲದಿದ್ದರೆ, ನಮ್ಮ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟಿಗೆ ಸಿಲುಕುತ್ತದೆ. ಕೃಷಿ ಕಾಯ್ದೆಗಳು ರದ್ದಾಗದೆ ನಾವು ಈ ಸ್ಥಳದಿಂದ ಹೊರಹೋಗುವುದಿಲ್ಲ ಎಂದು ಶಹಜಹಾನ್‌ಪುರ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಯಾದವ್ ಹೇಳಿದ್ದಾರೆ.

“ನ್ಯಾಯಾಧೀಶರ ಹೇಳಿಕೆಯು ಪಿತೃಪ್ರಧಾನ ಮನಸ್ಥಿತಿಯದ್ದು. ಅಂತಹ ಕಾಮೆಂಟ್‌ಗಳನ್ನು ಮಾಡುವ ಮೂಲಕ ಉನ್ನತ ನ್ಯಾಯಾಲಯವು ಮಹಿಳೆಯರನ್ನು ದುರ್ಬಲ ಎಂದು ಚಿತ್ರಿಸುತ್ತಿದೆ. ಹೊಲ-ಗದ್ದೆಗಳಲ್ಲಿ ಮಹಿಳೆಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ, ಅವರನ್ನು ಕೃಷಿಕರೆಂದು ಗುರುತಿಸಲಾಗಿಲ್ಲ. ಭಾರತದಲ್ಲಿ ಮಹಿಳೆಯರು ಕೇವಲ 12.8 ರಷ್ಟು ಭೂಮಿಯ ಮೇಲೆ ಅಧಿಕಾರವನ್ನು ಹೊಂದಿದ್ದಾರೆ ಎಂದು ಅಧ್ಯಯನಗಳು ಹೇಳುತ್ತವೆ. ಆದರೆ, ಶೇಕಡಾ 73 ರಷ್ಟು ಗ್ರಾಮೀಣ ಮಹಿಳೆಯರು ಕೃಷಿಯಲ್ಲಿ ತೊಡಗಿದ್ದಾರೆ” ಎಂದು ಮಹಿಳಾ ಕಿಸಾನ್ ಅಧಿಕಾರ್‌ ಮಂಚ್ (ಮಕಾಮ್)ನ ಕವಿತಾ ಕುರುಗಂತಿ ಹೇಳಿದ್ದಾರೆ.

“ಪುರುಷರಂತೆಯೇ, ಮಹಿಳೆಯರು ಹೊಸ ಕಾನೂನುಗಳ ಬಗ್ಗೆ ಅಷ್ಟೇ ಕೋಪಗೊಂಡಿದ್ದಾರೆ. ನಮ್ಮ ಜಮೀನನ್ನು ನಾವೂ ಪ್ರೀತಿಸುತ್ತೇವೆ. ಕಾನೂನುಗಳು ಜಾರಿಗೆ ಬಂದರೆ ಮಹಿಳಾ ಕಾರ್ಮಿಕ ವರ್ಗ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ರೈತರ ಆದಾಯ ಸುರಕ್ಷಿತವಾಗಿಲ್ಲದಿದ್ದರೆ, ಅವರು ಕೃಷಿ ಕಾರ್ಮಿಕರನ್ನು ಹೇಗೆ ನೇಮಿಸಿಕೊಳ್ಳುತ್ತಾರೆ? ಯಾರು ಪ್ರತಿಭಟಿಸಬೇಕು ಅಥವಾ ಬೇಡ ಎಂದು ನಿರ್ಧರಿಸುವ ಹಕ್ಕು ಸರ್ಕಾರಕ್ಕೆ ಇಲ್ಲ.” ನಾನು ಉನ್ನತ ವ್ಯಾಸಂಗ ಮಾಡುತ್ತಿದ್ದೇನೆ. ಕೃಷಿ ಕಾನೂನುಗಳು ರದ್ದಾಗುವವರೆಗೂ ನಾನು ವ್ಯಾಸಂಗಕ್ಕೆ ಮರಳುವುದಿಲ್ಲ ಎಂದು ಯುವ ರೈತ ಕಾರ್ಯಕರ್ತೆ ಅಮಂದೀಪ್ ಕೌರ್ ಖಿವಾ ಹೇಳುತ್ತಾರೆ.

ಮೂಲ: ಔಟ್‌ಲುಕ್

ಕನ್ನಡಕ್ಕೆ: ಸೋಮಶೇಖರ್ ಚಲ್ಯ


ಇದನ್ನೂ ಓದಿ: ರೈತರ ಹೋರಾಟ ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತಿದೆ: ಹೋರಾಟಗಾರ್ತಿ ಮೇಧಾ ಪಾಟ್ಕರ್‌

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights