ಹಳ್ಳಿಹಕ್ಕಿ ವಿಶ್ವನಾಥ್‌ ಕೋಗಿಲೆ ಅಲ್ಲ, ಕಾಗೆ; ಅವರಿಗೆ ಮಾನಸಿಕ ಸ್ಟ್ರೋಕ್‌ ಆಗಿದೆ: ಸಾರಾ ಮಹೇಶ್‌

ಆಪರೇಷನ್‌ ಕಮಲಕ್ಕೆ ಒಳಗಾಗಿ ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸೇರಿದ ಹಳ್ಳಿಹಕ್ಕಿ ವಿಶ್ವನಾಥ್‌ಗೆ ಸಚಿವ ಸ್ಥಾನ ಮಿಸ್‌ ಆಗಿದ್ದು, ಬಿಜೆಪಿಗರ ವಿರುದ್ದ ವಿಶ್ವನಾಥ್‌ ವಾಗ್ದಾಳಿ ನಡೆಸುತ್ತಿದ್ದಾರೆ.

ಶಾಸಕ ಸ್ಥಾನದಿಂದ ಅನರ್ಹಗೊಂಡ ಬಳಿಕ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡ ವಿಶ್ವನಾಥ್‌ಗೆ ವಿಧಾನ ಪರಿಷತ್‌ಗೆ ಶಾಸಕ ಮತದಾನದ ಮೂಲಕ ಆಯ್ಕೆಗೆ ಬಿಜೆಪಿ ಹೈಕಮಾಂಡ್‌ ಟಿಕೆಟ್‌ ನೀಡಿರಲಿಲ್ಲ. ಹಾಗಾಗಿ ಅವರು ಚುನಾವಣೆಯ ಮೂಲಕ ಆಯ್ಕೆಯಾಗಲಿಲ್ಲ. ಅವರನ್ನು ನಾಮನಿರ್ದೇಶನ ಮಾಡಿ ಪರಿಷತ್‌ಗೆ ಆಯ್ಕೆ ಮಾಡಲಾಗಿದ್ದು, ವಿಶ್ವನಾಥ್‌ಗೆ ಸಚಿವ ಸ್ಥಾನ ನೀಡುವಂತಿಲ್ಲ ಎಂದು ಹೈಕೋರ್ಟ್‌ ಆದೇಶ ಹೊರಡಿಸಿತ್ತು.

ಹೀಗಾಗಿ, ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಶ್ವನಾಥ್‌ಗೆ ಸಚಿವ ಸ್ಥಾನ ನೀಡಲಾಗಿಲ್ಲ. ಶಾಸಕ ಕ್ಷೇತ್ರದಿಂದ ಆಯ್ಕೆಯಾಗಲು ಚುನಾವಣೆಗೆ ಟಿಕೆಟ್‌ ನೀಡದೇ ಇದ್ದ ಬಿಜೆಪಿ ಹೈಕಮಾಂಡ್‌ ವಿಶ್ವನಾಥ್‌ಗೆ ಸಚಿವ ಸ್ಥಾನ ನೀಡಬಾರದು ಎಂಬ ಕಾರಣಕ್ಕೆ ಹೀಗೆ ಮಾಡಿರಬಹುದು ಎಂದು ರಾಜಕೀಯ ಪಡಸಾಲೆಯಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಹಳ್ಳಿಹಕ್ಕಿಗಿಲ್ಲ ಸಚಿವ ಸ್ಥಾನ; ಮಂತ್ರಿಗಿರಿಗೆ ವಿಶ್ವನಾಥ್‌ ಅನರ್ಹ: ಹೈಕೋರ್ಟ್‌ ತೀರ್ಪು

ಈ ಹಿನ್ನೆಲೆಯಲ್ಲಿ, ಸಿಎಂ ಬಿಎಸ್‌ವೈ ವಿರುದ್ದ ವಾಗ್ದಾಳಿ ನಡೆಸಿರುವ ಹಳ್ಳಿಹಕ್ಕಿ, ನಮ್ಮ ಭಿಕ್ಷೆಯಿಂದ ಮುಖ್ಯಮಂತ್ರಿ ಆದವರುಈಗ ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಅಲ್ಲದೆ, ಕಾಂಗ್ರೆಸ್‌-ಜೆಡಿಎಸ್‌ ನಾಯಕರ ವಿರುದ್ದವೂ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.

ವಿಶ್ವನಾಥ್‌ ಅವರ ವಾಗ್ದಾಳಿಗೆ ಪ್ರತಿಕ್ರಿಯಿಸಿರುವ ಜೆಡಿಎಸ್‌ ಶಾಸಕ ಸಾರಾ ಮಹೇಶ್‌, ವಿಶ್ವನಾಥ್ ಎಲ್ಲೂ ನಿಯತ್ತಾಗಿ ಇರುವುದಿಲ್ಲ. ವಿಶ್ವನಾಥ್ ಕೋಗಿಲೆ ಅಲ್ಲ ಕಾಗೆ. ಅವರ ವೈಯಕ್ತಿಕ ಇಚ್ಚೆಗಳು ಈಡೇರದೇ ಹೋದರೆ ಎಲ್ಲರಿಗೂ ಬಯ್ಯುತ್ತಾರೆ. ದೈಹಿಕ, ಮಾನಸಿಕ ಸ್ಟ್ರೋಕ್ ಆಗಿರುವುದು ವಿಶ್ವನಾಥ್‌ಗೆ, ಯಡಿಯೂರಪ್ಪ ಅವರಿಗಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪರಿಷತ್‌ನಲ್ಲಿ ಗಲಾಟೆ: ಸದನ ಸಮಿತಿಗೆ ಹಳ್ಳಿಹಕ್ಕಿ ವಿಶ್ವನಾಥ್‌ ರಾಜೀನಾಮೆ

ಸ್ಟ್ರೋಕ್ ಆಗಿ ಮಲಗಿದ್ದಾಗ ನಿಮಗೆ ಚೈತನ್ಯ ತುಂಬಿದ್ದು ಜನತಾದಳ. ಆದರೆ ಪಕ್ಷಕ್ಕೆ ದ್ರೋಹ ಮಾಡಿದ್ದರ ಪರಿಣಾಮವನ್ನ ಈಗ ಎದುರಿಸಿದ್ದೀರಿ. ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಶಾಪಕ್ಕೆ ತುತ್ತಾಗಿ ಮಂತ್ರಿ ಸ್ಥಾನ ಕಳೆದುಕೊಂಡಿದ್ದೀರಿ. ಈಗ ಮತ್ತೆ ಯಡಿಯೂರು ಸಿದ್ದಲಿಂಗೇಶ್ವರರನ್ನು ಎಳೆಯಬೇಡಿ. ಈಗಿರುವ ವಿಧಾನಪರಿಷತ್ ಸ್ಥಾನವೂ ಹೋಗಿಬಿಡುತ್ತೆ ಎಂದು ಸಾರಾ ಮಹೇಶ್‌ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸನ್ನು ವಿಶ್ವನಾಥ್ ಮದುವೆಯಾಗಿದ್ದರು. ಅವರು ಜೆಡಿಎಸ್‌ಗೆ ಬಂದಾಗ ನಾವು ಕೂಡಾವಳಿ ಮಾಡಿಕೊಂಡೆವು. ಅವರು ಬಂದಾಗಲೇ ಕಾಂಗ್ರೆಸ್​ನ ಹಲವು ಮುಖಂಡರು ಹೇಳಿದ್ದರು. ಇವರು ಸರಿ ಇಲ್ಲ ಅಂತಾ. ಆದರೂ ನಾವು ನಂಬಿದೆವು. ನಮ್ಮ ಪಕ್ಷದಲ್ಲಿ 15-20 ತಿಂಗಳು ಇದ್ದರು. ನಂತರ ಪಾರ್ಟ್ ಪೇಮೆಂಟ್​ನಲ್ಲಿ ಬಿಜೆಪಿ ಅವರು ಕರೆದುಕೊಂಡು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.


ಇದನ್ನೂ ಓದಿ: ವಿಶ್ವನಾಥ್‌ಗೆ ಕೃತಜ್ಞತೆ ಇಲ್ಲ; ಅದಕ್ಕೆ ಬಿಎಸ್‌ವೈ ಕೂಡ ಮಂತ್ರಿ ಮಾಡಿಲ್ಲ: ಸಿದ್ದರಾಮಯ್ಯ ವ್ಯಂಗ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights