ಬಂಗಾಳದಲ್ಲಿ BJPಗೆ TMCಗರ ದಂಡು; ಪಕ್ಷಕ್ಕೆ ಆನಂದ – RSSಗೆ ಆತಂಕ!

ನಾನಾ ರಾಜ್ಯಗಳಲ್ಲಿ ಆಪರೇಷನ್‌ ಮಾಡಿ ಸರ್ಕಾರ ರಚಿಸಿರುವ ಬಿಜೆಪಿ, ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೂ ಮುನ್ನವೇ ತನ್ನ ಅಪರೇಷನ್‌ ಅಸ್ತ್ರ ಬಳಸುತ್ತಿದೆ. ಬಂಗಾಳದ ಆಡಳಿತಾರೂಢ ಟಿಎಂಸಿ ಪಕ್ಷದಿಂದ ಹಲವಾರು ನಾಯಕರು BJPಗೆ ಲಗ್ಗೆ ಇಡುತ್ತಿದ್ದಾರೆ. ಇದು ಬಿಜೆಪಿಗೆ ಬಂಗಾಳದ ಚುನಾವಣೆಯನ್ನು ಗೆಲ್ಲುತ್ತೇವೆ ಎಂಬ ಉತ್ಸಾಹವನ್ನು ತಂದಿದ್ದರೆ, RSSಗೆ ತಲೆನೋವು ಉಂಟಾಗಿದೆ.

ಟಿಎಂಸಿಯಿಂದ ದಂಡು-ದಾಳಿಯ ಸಮೇತ ಹೆಚ್ಚಿನ ನಾಯಕರು ಬಿಜೆಪಿ ಎಡೆಗೆ ಹೊರಳುತ್ತಿದ್ದಾರೆ. ಹೀಗಾಗಿ, ಪಕ್ಷಕ್ಕೆ ಬರುವವರ ಹಿನ್ನೆಲೆ ಪರಿಶೀಲಿಸದೇ, ಎಲ್ಲರಿಗೂ ಪಕ್ಷದಲ್ಲಿ ಅವರಕಾಶ ಕೊಟ್ಟರೆ, ಮುಂದಿನ ದಿನಗಳಲ್ಲಿ ಸೈದ್ಧಾಂತಿಕ ಬಿನ್ನಾಭಿಪ್ರಾಯಗಳಿಗೆ ಎಡೆ ಮಾಡಿಕೊಡುತ್ತದೆ ಎಂಬುದು ಸಂಘಪರಿವಾರದ ಚಿಂತೆಗೆ ಕಾರಣವಾಗಿದೆ.

ಸೈದ್ಧಾಂತಿಕ ಬಿನ್ನಾಭಿಪ್ರಾಯ ಹೆಚ್ಚಾದರೆ, ಬಂಗಾಳದಲ್ಲಿ ರಾಜಿಯ ರಾಜಕಾರಣ ಮಾಡಬೇಕಾಗುತ್ತದೆ. ಸಂಘದ ಸಿದ್ದಾಂತಗಳು ಹೆಚ್ಚು ಮುನ್ನೆಲೆಗೆ ಬರುವುದಿಲ್ಲ ಎಂದು ಆರ್‌ಎಸ್‌ಎಸ್‌ ಕಳವಳ ವ್ಯಕ್ತಪಡಿಸಿದೆ.

ಅಲ್ಲದೆ, ಟಿಎಂಸಿಯಿಂದ ಬಿಜೆಪಿಗೆ ಬರುವವರಿಗೆ ಚುನಾವಣೆಯಲ್ಲಿ ಹೆಚ್ಚಿನ ಆದ್ಯತೆ ಕೊಡಬೇಕಾಗುತ್ತದೆ. ಹೀಗಾಗಿ ಪಕ್ಷದೊಳಗೆ ಬಣಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಇದು ಈಗಗಲೇ ಕರ್ನಾಟಕದಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಲೇ ಇದೆ. ಒಂದು ವೇಳೆ ಬಿಜೆಪಿ ರಾಜ್ಯದಲ್ಲಿ ಸೋತರೆ, ನಿರಾಸೆಗೊಂಡ ವಲಸಿಗರೆಲ್ಲರೂ ಮತ್ತೆ ಪಕ್ಷ ತೊರೆಯುವ ಸಾಧ್ಯತೆಗಳು ಇರುತ್ತವೆ ಎಂದಜು ಆರ್‌ಎಸ್‌ಎಸ್‌ ಕಳವಳ ವ್ಯಕ್ತಡಿಸುತ್ತಿದೆ ಎಂದು ಬಂಗಾಳದ ಬಿಜೆಪಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: BJP ಮತ್ತು TMC ಕಾರ್ಯಕರ್ತರ ನಡುವೆ ಮಾರಾಮಾರಿ; ಹಲವರಿಗೆ ಗಾಯ

‘ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷವನ್ನು ಬಲಪಡಿಸಬೇಕೆಂಬ ಉದ್ದೇಶದಿಂದ ಟಿಎಂಸಿ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗುತ್ತಿದೆ. ಇಷ್ಟಾದ ಮೇಲೂ ಪಕ್ಷವು ಮುಂಬರುವ ಚುನಾವಣೆಯಲ್ಲಿ ಬಹುಮತ ಪಡೆಯದಿದ್ದರೆ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಈ ಸಂಬಂಧ ಆರ್‌ಎಸ್‌ಎಸ್‌ಗೂ ವಿವರಣೆ ನೀಡಬೇಕಾಗುತ್ತದೆ’ ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

‘ಪಕ್ಷ ಸೇರುವವರಿಗೆ ಬೇಡ ಎನ್ನಲು ಆಗುವುದಿಲ್ಲ. ರಾಜ್ಯದಲ್ಲಿ ಪಕ್ಷ ಗಟ್ಟಿಯಾಗಿ ಬೇರೂರಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು’ ಎಂದೂ ಅವರು ತಿಳಿಸಿದ್ದರು.

ಟಿಎಂಸಿ ಹಾಗೂ ಸಿಪಿಐ (ಎಂ) ಪಕ್ಷಗಳ ಪ್ರಭಾವಿ ನಾಯಕರು ಪಕ್ಷ ಸೇರಲು ಮನಸ್ಸು ಮಾಡಿದರೆ ಅವರನ್ನು ಬರಮಾಡಿಕೊಳ್ಳಬೇಕು ಎಂದು ರಾಜ್ಯ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೂಚನೆ ನೀಡಿದ್ದಾರೆ ಎಂದೂ ಮೂಲಗಳು ಹೇಳಿವೆ.


ಇದನ್ನೂ ಓದಿ: BJPಯ 6-7 ಶಾಸಕ/ಸಂಸದರು TMC ಸೇರಲಿದ್ದಾರೆ: ಸಚಿವ ಜ್ಯೋತಿಪ್ರಿಯ ಮುಲ್ಲಿಕ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights