ಬಂಗಾಳ: ಸುವೆಂದು ಅಧಿಕಾರಿಯ ಕ್ಷೇತ್ರ ನಂದಿಗ್ರಾಮ್ನಿಂದ ಮಮತಾ ಸ್ಪರ್ಧೆ: ಕ್ಷೇತ್ರದ ವಿಶೇಷವೇನು ಗೊತ್ತಾ?
ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 10 ವರ್ಷಗಳ ಹಿಂದೆ ರಾಜ್ಯದಲ್ಲಿ ಟಿಎಂಸಿಯನ್ನು ಅಧಿಕಾರಕ್ಕೆ ತಂದ ರೈತ ಚಳವಳಿಯ ಕೇಂದ್ರಬಿಂದುವಾಗಿದ್ದ ನಂದಿಗ್ರಾಮ್ ನಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ತಮ್ಮ ಬಲಗೈ ಬಂಟನಾಗಿದ್ದ ಸುವೆಂಡು ಅಧಿಕಾರಿ ಪಕ್ಷ ತೊರೆದು ಬಿಜೆಪಿ ಸೇರಿದ ಸುವೆಂದು ಅಧಿಕಾರಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಇದಾಗಿದ್ದು, ಈ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
“ನಾನು ನಂದಿಗ್ರಾಮ್ನಿಂದ ಸ್ಪರ್ಧಿಸುತ್ತೇನೆ. ನಂದಿಗ್ರಾಮ್ ನನ್ನ ಅದೃಷ್ಟದ ಕ್ಷೇತ್ರ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅವರು ಕಳೆದ ಚುನಾವಣೆಯಲ್ಲಿ ಕೋಲ್ಕತ್ತಾದ ಭವಾನಿಪುರದಿಂದ ಸ್ಪರ್ಧಿಸಿದ್ದರು.
ನಂದಿಗ್ರಾಮ್ನಲ್ಲಿ ಪ್ರಸ್ತಾವಿತ ‘ಆರ್ಥಿಕ ವಲಯ ಯೋಜನೆ’ಯಿಂದ ರೈತರ ಭೂಮಿಯನ್ನು ರಕ್ಷಿಸುವ ಆಂದೋಲನವು ಮಮತಾ ಬ್ಯಾನರ್ಜಿ ಅವರು 2011 ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ನೆರವಾಗಿತ್ತು. ಆಂದೋಲನ ನಡೆದ ನಂತರ, ಅವರು ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದರು.
2007 ರಲ್ಲಿ ನಂದಿಗ್ರಾಮ್ನಲ್ಲಿ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ 14 ರೈತರು ಸಾವನ್ನಪ್ಪಿದ್ದರು. ನಂತರದ ಚುನಾವಣೆಯಲ್ಲಿ, ಮಮತಾ ಬ್ಯಾನರ್ಜಿ ಮತ್ತು ಅವರ ತೃಣಮೂಲ ಕಾಂಗ್ರೆಸ್ ಆ ಘಟನೆಯ ಸುತ್ತ “ಮಾ, ಮಾತಿ, ಮನುಷ್” ಅಭಿಯಾನವನ್ನು ರೂಪಿಸಿದ್ದರು. ಅಲ್ಲದೆ, ಹೋರಾಟವನ್ನು ಯಶಸ್ವಿಗೊಳಿಸಿದ್ದರು.
ಇದನ್ನೂ ಓದಿ: ಬಂಗಾಳ ಚುನಾವಣೆ: ಕಾಂಗ್ರೆಸ್-ಸಿಪಿಎಂ ಮೈತ್ರಿ; BJP-TMCಗಳನ್ನು ಮೀರಿಸಿ ಅಧಿಕಾರ ಹಿಡಿಯುತ್ತಾ ಎಡರಂಗ!
ನಂದಿಗ್ರಾಮ್ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾನು ಟಿಎಂಸಿ ಪ್ರಧಾನ ಕಾರ್ಯದರ್ಶಿ ಸುಬ್ರತಾ ಬಕ್ಷಿ ಅವರಲ್ಲಿ ಈ ಕುರಿತು ವಿನಂತಿಸಿಕೊಳ್ಳುತ್ತೇನೆ. ನಂದಿಗ್ರಾಮ್ನಲ್ಲಿ ಸ್ಪರ್ಧಿಸುವುದು ನನ್ನ ಇಚ್ಛೆ. ನಾನು ಭವಾನಿಪುರವನ್ನು ಕಡೆಗಣಿಸುವುದಿಲ್ಲ, ಉತ್ತಮ ಅಭ್ಯರ್ಥಿಯನ್ನು ಅಲ್ಲಿನ ಕಣಕ್ಕಿಳಿಸುತ್ತೇನೆ’ ಎಂದು ಹೇಳಿದ್ದಾರೆ.
ಚುನಾವಣಾ ಪೂರ್ವ ಸಮೀಕ್ಷೆಯ ಬಗ್ಗೆ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) 211 ಸ್ಥಾನಗಳನ್ನು ಗೆಲ್ಲಲಿದೆ, ಬಿಜೆಪಿ ಕೇವಲ 51 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಂಗಾಳದಲ್ಲಿ ಶಿವಸೇನೆ ಸ್ಪರ್ಧೆ: ಮಮತಾಗೆ ಮತ್ತೊಂದು ಸವಾಲು; BJPಗೆ ಹಿಂದುತ್ವದ ಪ್ರತಿಸ್ಪರ್ಧಿ!

