ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್‌ ನಡೆಸಿಯೇ ತೀರುತ್ತೇವೆ: ರೈತ ಮುಖಂಡರ ಘೋಷಣೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ಶಾಂತಿಯುತ ಟ್ರ್ಯಾಕ್ಟರ್ ಪರೇಡ್‌ ನಡೆಸಿಯೇ ತೀರುತ್ತೇವೆ ಎಂದು ಸಂಯುಕ್ತ ಹೋರಾಟ – ಕರ್ನಾಟಕದ ರೈತ ಮುಖಂಡರು ಘೋಷಿಸಿದ್ದಾರೆ.

ಇಂದು ನಗರದ ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಚಾಮರಸ ಮಾಲಿಪಾಟೀಲ್, ದ.ಸ.ಸಂ (ಅಂಬೇಡ್ಕರ್ ವಾದ)ಯ ಮಾವಳ್ಳಿ ಶಂಕರ್, ಕರ್ನಾಟಕ ಜನಶಕ್ತಿಯ ಕುಮಾರ್ ಸಮತಳ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷರಾದ ನಿತ್ಯಾನಂದ ಸ್ವಾಮಿ, ಕಾರ್ಮಿಕ ಒಕ್ಕೂಟದ ಕೆ.ವಿ ಭಟ್, ರೈತ ಮುಖಂಡರಾದ ಜೆ.ಎಂ ವೀರಸಂಗಯ್ಯ ಮುಂತಾದವರು ಭಾಗವಹಿಸಿ ಸಾವಿರಾರು ಟ್ರ್ಯಾಕ್ಟರ್‌ಗಳು-ವಾಹನಗಳೊಂದಿಗೆ 20,000 ಕ್ಕೂ ಅಧಿಕ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ಚಾಮರಸ ಮಾಲಿಪಾಟೀಲ್ ಮಾತನಾಡಿ “ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ರೈತರು ಸೇರಿದಂತೆ ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರಿನಿಂದ ಅತಿ ಹೆಚ್ಚಿನ ರೈತರು ನಾಳೆಯ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಆದರೆ ಟ್ರ್ಯಾಕ್ಟರ್‌ಗಳನ್ನು ಎಲ್ಲೆಡೆ ಪೊಲೀಸರು ತಡೆಯುತ್ತಿದ್ದು ಇದನ್ನು ನಾವು ಖಂಡಿಸುತ್ತೇವೆ. ಏನೇ ಸಮಸ್ಯೆಗಳಿದ್ದರೆ ಪೊಲೀಸ್ ಅಧಿಕಾರಿಗಳು ನಮ್ಮೊಂದಿಗೆ ಚರ್ಚೆ ಮಾಡಲಿ. ಆದರೆ ನಿರ್ಬಂಧ ಹಾಕಲು ಪೊಲೀಸರು ಮುಂದಾದರೆ ಪರಿಸ್ಥಿತಿ ಕೈಮೀರುತ್ತದೆ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸರ್ಕಾರವೇ ಜವಾಬ್ದಾರಿ” ಎಂದಿದ್ದಾರೆ.

ಮಾವಳ್ಳಿ ಶಂಕರ್‌ರವರು ಮಾತನಾಡಿ “ನಾವು ಈಗಾಗಲೇ ಬೆಂಗಳೂರು ಪೊಲೀಸ್ ಮುಖ್ಯಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ಯಾವುದೇ ಕಾರಣಕ್ಕೂ ಹಿಂಸೆಗೆ ಅವಕಾಶ ಕೊಡುವುದಿಲ್ಲ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಕುದುಂಟು ಮಾಡುವುದಿಲ್ಲ ಎಂದು ಸಭೆಯಲ್ಲಿ ನಮ್ಮ ಸ್ಪಷ್ಟ ಅಭಿಪ್ರಾಯ ತಿಳಿಸಿದ್ದೇವೆ. ಎಲ್ಲಾ ರೈತರು ನಗರದ ರೈಲ್ವೇ ಸ್ಟೇಷನ್ ಬಳಿ ಸೇರಿ ಅಲ್ಲಿಂದ ಫ್ರೀಡಂ ಪಾರ್ಕ್ ವರೆಗೂ ಮೆರವಣಿಗೆ ನಡೆಸುತ್ತೇವೆ. ಅಲ್ಲಿ ಶತಾಯುಷಿ ಎಚ್.ಎಸ್ ದೊರೆಸ್ವಾಮಿಯವರು ಧ್ವಜಾರೋಹಣ ನಡೆಸಲಿದ್ದಾರೆ ಎಂದು ತಿಳಿಸಿದ್ದೇವೆ. ಆದರೆ ಪೊಲೀಸರು ಟ್ರ್ಯಾಕ್ಟರ್ ತಡೆದರೆ, ಡೀಸೆಲ್ ಹಾಕಲು ನಿರಾಕರಿಸಿರುತ್ತಿರುವುದನ್ನು ನೋಡಿದರೆ ನಾಗರೀಕ ಹೋರಾಟವನ್ನು ಸರ್ಕಾರ ದಮನ ಮಾಡುತ್ತಿರುವುದು ಕಂಡುಬಂದಿದೆ. ನಾವು ಶಾಂತಿಯುತವಾಗಿ ನಮ್ಮ ಹೋರಾಟ ಮುಂದುವರೆಸುತ್ತೇವೆ’ ಎಂದಿದ್ದಾರೆ.

ರಾಯಚೂರು, ಬಳ್ಳಾರಿ ಜಿಲ್ಲೆಗಳಿಂದ ಒಂದು ತಂಡ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಂದ ಒಂದು ತಂಡ, ಮಡಿಕೇರಿ, ಮೈಸೂರು, ಮಂಡ್ಯ ಜಿಲ್ಲೆಗಳಿಂದ ರೈತರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮೈಸೂರು ಮಾರ್ಗದಿಂದ ಬರುವ ರೈತರು ಬಿಡದಿ ಕೈಗಾರಿಕಾ ಜಂಕ್ಷನ್‌ನಲ್ಲಿ, ಉತ್ತರ ಕರ್ನಾಟಕದಿಂದ ಬರುವ ರೈತರು ತುಮಕೂರು-ನೈಸ್‌ರಸ್ತೆ ಜಂಕ್ಷನ್‌, ಚಿಕ್ಕಬಳ್ಳಾಪುರ ಕಡೆಯಿಂದ ಬರುವ ರೈತರು ದೇವನಹಳ್ಳಿ ನಂದಿ ಕ್ರಾಸ್‌ ಬಳಿ ಹಾಗೂ ಕೊಲಾರ ಕಡೆಯಿಂದ ಬರುವ ರೈತರು ಹೊಸಕೋಟೆ ಟೋಲ್‌ ಬಳಿ ಹಾಗೂ ಬೆಂಗಳೂರು ಸಿಟಿ ರೈಲ್ವೆ ಜಂಕ್ಷನ್‌ನಲ್ಲಿ ಜ. 26ರಂದು ಬೆಳಗ್ಗೆ 9 ಗಂಟೆಗೆ ಸೇರಲಿದ್ದಾರೆ.

ಇಲ್ಲಿಂದ ಹೊರಡಲಿರುವ ರೈತರು ಮಧ್ಯಾಹ್ನ 12.30ಕ್ಕೆ ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನೆರೆಯಲಿದ್ದಾರೆ. ಉದ್ಯಾನದಲ್ಲಿ ನಡೆಯಲಿರುವ ಬೃಹತ್‌ ಸಮಾವೇಶದಲ್ಲಿ ಕೃಷಿ ಕಾಯ್ದೆಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯ ಜಾರಿಗೊಳಿಸುತ್ತಿರುವ ಪಟ್ಟು ಹಿಡಿದಿರುವ ಸರ್ಕಾರದ ರೈತ ವಿರೋಧಿ ಧೋರಣೆ ಕುರಿತು ಚರ್ಚೆ ನಡೆಯಲಿವೆ.

ಈ ನಡುವೆ ಟ್ರ್ಯಾಕ್ಟರ್ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ನಗರ ಪೋಲಿಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ. ಇದಕ್ಕೆ ರೈತ ಮುಖಂಡರು ಕಿಡಿಕಾರಿದ್ದು, ಕೇಂದ್ರ ಸರ್ಕಾರವೇ ಟ್ರ್ಯಾಕ್ಟರ್ ‌ಪೆರೇಡ್ ಗೆ ಅವಕಾಶ ಕೊಟ್ಟಿದೆ. ದೆಹಲಿಯಲ್ಲಿಯೇ ಟ್ರ್ಯಾಕ್ಟರ್ ಪರೇಡ್ ನಡೆಯುತ್ತೆ ಅಂದ ಮೇಲೆ ರಾಜ್ಯ ಸರ್ಕಾರ ಏಕೆ ಅನುಮತಿ ಕೊಡಲ್ಲಾ? ನಾವು ನಾಳೆ‌ ಟ್ರ್ಯಾಕ್ಟರ್ ಪೆರೇಡ್ ಮಾಡೇ ಮಾಡುತ್ತೇವೆ. ಟ್ಯಾಕ್ಟರ್ ಪೆರೇಡ್ ಇಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮ್ಮನ್ನು ತಡೆದರೆ ಉಗ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಈ ಕುರಿತು ಇಂದು ಸಂಜೆ 4 ಗಂಟೆಗೆ ಐಜಿಪಿಯವರು ರೈತ ಮುಖಂಡರೊಂದಿಗೆ ಮತ್ತೊಂದು ಸುತ್ತಿನ ಸಭೆ ಕರೆದಿದ್ದಾರೆ. ಪೊಲೀಸರು ಅನುಮತಿ ನೀಡದಿದ್ದರೆ ಇಂದು ಸಂಜೆಯಿಂದಲೇ ಡಿಸಿಪಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

ಇದನ್ನೂ ಓದಿ: ರೈತರನ್ನು ಭಯೋತ್ಪಾದಕರೆಂದ ‘ಗೋದಿ ಮೀಡಿಯಾ’; ಮಾಧ್ಯಮಗಳ ವರ್ತನೆ ಹೀಗಿದೆ ನೋಡಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.