ಕಳ್ಳತನದಿಂದ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನ ಬಂಧನ : ಈತನಲ್ಲಿ ಚಿನ್ನ ಪತ್ತೆ ಹಚ್ಚಿದ್ದೇ ರೋಚಕ!

ಕತರ್ನಾಕ ಪ್ರಯಾಣಿಕನೊಬ್ಬ ಕಳ್ಳತನದಿಂದ ಚಿನ್ನ ಸಾಗಿಸುವ ವೇಳೆ ವಿಮಾನ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದಾನೆ.

ಇಂಫಾಲ್ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿದ್ದ ಸಿಐಎಸ್ಎಫ್ ಸಿಬ್ಬಂದಿಗಳು ದೆಹಲಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬನಿಂದ 900 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈತನಲ್ಲಿ ಸಿಬ್ಬಂದಿಗಳು ಚಿನ್ನ ಪತ್ತೆ ಹಚ್ಚಿದ್ದೇ ರೋಚಕವಾಗಿದೆ.

ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪೂರ್ವ ಭದ್ರತಾ ಚೆಕ್‌ಪೋಸ್ಟ್‌ನಲ್ಲಿ ಈ ಘಟನೆ ನಡೆದಿದೆ. ಸಬ್ ಇನ್ಸ್‌ಪೆಕ್ಟರ್ ಬಿ ದಿಲ್ಲಿ ಅವರು ಕೇರಳದ ನಿವಾಸಿ ಎಂದು ಗುರುತಿಸಲಾದ ಪ್ರಯಾಣಿಕರ ದೇಹದಲ್ಲಿ ಗಡ್ಡೆಯನ್ನು ಪತ್ತೆ ಮಾಡಿದ್ದಾರೆ. ತಪಾಸಣೆಯ ನಂತರ ಆತನ ಗುದನಾಳದಲ್ಲಿ 900 ಗ್ರಾಂ ಚಿನ್ನದ ಪೇಸ್ಟ್ ಪತ್ತೆಯಾಗಿದೆ.

ಆರೋಪಿಯು ಇಂಫಾಲದಿಂದ ದೆಹಲಿಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಪ್ರಶ್ನಿಸಿದಾಗ ಪ್ರಯಾಣಿಕ ಉತ್ತರ ನೀಡಲು ತಡವರಿಸಿದ್ದಾನೆ. ಅನುಮಾನ ಬಂದು ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷಾ ಕೊಠಡಿಗೆ ಕರೆದೊಯ್ದಿದ್ದಾರೆ. ದೇಹದ ಕೆಳಭಾಗದ ಎಕ್ಸ್-ರೇ ಮಾಡಿದಾಗ ಕೆಲವು ಲೋಹೀಯ ವಸ್ತುಗಳು ಕಂಡು ಬಂದಿವೆ.

ನಂತರ ಪ್ರಯಾಣಿಕನು ತಾನು ಚಿನ್ನವನ್ನು (ಪೇಸ್ಟ್ ರೂಪದಲ್ಲಿ) ಒಯ್ಯುತ್ತಿರುವುದಾಗಿ ಒಪ್ಪಿಕೊಂಡನು. ಸುಮಾರು 909.68 ಗ್ರಾಂ ತೂಕದ ನಾಲ್ಕು ಪ್ಯಾಕೆಟ್ ಹಳದಿ ಚಿನ್ನದ ಪೇಸ್ಟ್ ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ ಸುಮಾರು 42 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.

ವಶಪಡಿಸಿಕೊಂಡ ಚಿನ್ನದ ಜೊತೆಗೆ ಪ್ರಯಾಣಿಕನನ್ನು ಮುಂದಿನ ಕ್ರಮಕ್ಕಾಗಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights