ಲಾಕ್‌ಡೌನ್‌ನಲ್ಲಿ ಭಾರತದ ಬಿಲಿಯನೇರ್‌ಗಳ ಆದಾಯ 35% ಹೆಚ್ಚಾಗಿದೆ; ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ: ಆಕ್ಸ್‌ಫ್ಯಾಮ್ ವರದಿ

ಕೊರೊನಾ ಸಾಂಕ್ರಾಮಿಕ ರೋಗವು ಭಾರತದ ಅತಿ ಶ್ರೀಮಂತರು ಮತ್ತು ಕೋಟ್ಯಾಂತರ ಕಾರ್ಮಿಕರ ನಡುವಿನ ಆದಾಯದ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ದೇಶದ ಬಹುಸಂಖ್ಯಾತ ಜನರು ಧೀರ್ಘಕಾಲದ ನಿರುದ್ಯೋಗಿಗಳಾಗಿದ್ದಾರೆ. ಅಲ್ಲದೆ, ಲಾಭ/ಆದಾಯವಿಲ್ಲದ ಜನರು ಮೂಲಭೂತ ಸೌಕರ್ಯಗಳಾದ ಆರೋಗ್ಯ ಮತ್ತು ನೈಮಲ್ಯವನ್ನು ಪಡೆಯಲು ಎಣಗಾಡುತ್ತಿದ್ದಾರೆ ಎಂದು ಆಕ್ಸ್‌ಫ್ಯಾಮ್‌ ವರದಿಯಲ್ಲಿ ತಿಳಿಸಿದೆ.

ಸೋಮವಾರ, ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ವರದಿ ಮಂಡಿಸಿರುವ ಆಕ್ಸ್‌ಫ್ಯಾಮ್, ಲಾಕ್‌ಡೌನ್ ಸಮಯದಲ್ಲಿ ದೇಶದ ಬಿಲಿಯನೇರ್‌ಗಳ ಸಂಪತ್ತು ಅಂದಾಜು ಶೇ.35 ರಷ್ಟು ಹೆಚ್ಚಾಗಿದೆ. ಆದರೆ, ಶೇ. 84 ರಷ್ಟು ಕುಟುಂಬಗಳು ವಿವಿಧ ರೀತಿಯ ಆದಾಯ ನಷ್ಟವನ್ನು ಅನುಭವಿಸುತ್ತಿವೆ. ಅಲ್ಲದೆ, 2020ರ ಏಪ್ರಿಲ್‌ ತಿಂಗಳಿನಲ್ಲಿ ಪ್ರತಿ ಗಂಟೆಗೆ 1.7 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.

ಮಾರ್ಚ್ 2020 ರಿಂದ ಲಾಕ್‌ಡೌನ್ ಜಾರಿಗೊಳಿಸಿದ ನಂತರ, ಭಾರತದ ಅಗ್ರ 100 ಬಿಲಿಯನೇರ್‌ಗಳಿಗೆ ದೊರೆಕಿರುವ ಲಾಭ-ಆದಾಯದ ಪ್ರಮಾಣವು 138 ಮಿಲಿಯನ್ ಬಡ ಜನರಿಗೆ ತಲಾ 94,045 ಚೆಕ್ ನೀಡುವಷ್ಟು ಹೆಚ್ಚಾಗಿದೆ ಎಂದು ಅದು ಹೇಳಿದೆ.

“ದೇಶದಲ್ಲಿ ಹೆಚ್ಚುತ್ತಿರುವ ಅಸಮಾನತೆಯು ಅತ್ಯಂತ ಕಟುವಾದದ್ದಾಗಿದೆ…  ಸಾಂಕ್ರಾಮಿಕ (ಲಾಕ್‌ಡೌನ್‌) ಸಮಯದಲ್ಲಿ ಒಂದು ಗಂಟೆಯಲ್ಲಿ ಮುಖೇಶ್ ಅಂಬಾನಿ (ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ) ಗಳಿಸಿದ ಆದಾಯವನ್ನು ಕೌಶಲ್ಯರಹಿತ ಕೆಲಸಗಾರನು ಗಳಿಸಲು 10,000 ವರ್ಷಗಳು ಬೇಕಾಗುತ್ತವೆ. ಅಲ್ಲದೆ, ಅಂಬಾನಿ ಒಂದು ಸೆಕೆಂಡ್‌ನಲ್ಲಿ ಮಾಡಿದ್ದನ್ನು ಕೆಲಸಗಾರ ಪಡೆಯಲು ಮೂರು ವರ್ಷಗಳು ಬೇಕಾಗುತ್ತವೆ ಎಂದು ವರದಿ ಹೇಳಿದೆ.

ಆಗಸ್ಟ್‌ ತಿಂಗಳಿನಲ್ಲಿ ಅಂಬಾನಿಯನ್ನು ವಿಶ್ವದ ನಾಲ್ಕನೇ ದೊಡ್ಡ ಶ್ರೀಮಂತ ವ್ಯಕ್ತಿ ಎಂದು ಘೋಷಿಸಲಾಗಿತ್ತು.

ಇದನ್ನೂ ಓದಿ: ಆರ್ಥಿಕ ಕುಸಿತದ ನಡುವೆಯೂ ಶ್ರೀಮಂತನಾದ ಅಂಬಾನಿ! ಗಂಟೆ ಲೆಕ್ಕದ ಆದಾಯ ಎಷ್ಟು ಗೊತ್ತೇ?

ಇದೇ ಸಂದರ್ಭದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಉದ್ಯೋಗ ಕಳೆದುಕೊಂಡು, ಹಣ, ಆಹಾರ ಮತ್ತು ಆಶ್ರಯವಿಲ್ಲದೆ ಎಣಗಾಡಿದ್ದಾರೆ. ಸಾವಿರಾರು ಕಿಲೋಮೀಟರ್‌ಗಳ ಪ್ರಯಾಣವನ್ನು ಪುರುಷರು, ಮಹಿಳೆಯರು ಮತ್ತು ಮಕ್ಕಳ ನಡೆದುಕೊಂಡೇ ಕ್ರಮಿಸಿದ ದುರಂತ ದೃಶ್ಯಗಳು, ಸಾವಿರಾರು ಸಾವುಗಳು ದೇಶದ ಮನವನ್ನು ಕಲಕಿದವು. ಆದರೆ, ಈ ಸಾವುಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಸರ್ಕಾರ ಸಂಸತ್ತಿನಲ್ಲಿ ಘೋಷಿಸಿತು. ಇದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ತೀವ್ರ ಪ್ರತಿಕ್ರಿಯೆಯನ್ನು ನೀಡಲು ಎಡೆಮಾಡಿತು.

“ದುಃಖಕರ ಸಂಗತಿಯೆಂದರೆ, ಸರ್ಕಾರವು ಪ್ರಾಣಹಾನಿ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ, ಕಾರ್ಮಿಕರು ಸಾಯುತ್ತಿರುವುದನ್ನು ಜಗತ್ತು ಕಂಡಿತು…” ಎಂದು ರಾಹುಲ್‌ಗಾಂಧಿ ಸೆಪ್ಟೆಂಬರ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ ಹೇರಲಾದ ಲಾಕ್‌ಡೌನ್‌ನ ಪರಿಣಾಮವು ಸ್ಪಷ್ಟವಾಗುತ್ತಿದ್ದಂತೆ, ಸರ್ಕಾರವು ಸುಮಾರು 20 ಲಕ್ಷ ಕೋಟಿ ಮೌಲ್ಯದ ಆರ್ಥಿಕ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಿತು. ಪ್ರಧಾನಿ ನರೇಂದ್ರ ಮೋದಿ ಇದನ್ನು ಅವರ “ಆತ್ಮ-ನಿರ್ಭಾರ ಭಾರತ್ (ಸ್ವಾವಲಂಭಿ ಭಾರತ)” ದೂರದೃಷ್ಟಿಯ ಮೂಲಾಧಾರವೆಂದು ಶ್ಲಾಘಿಸಿದರು. ಆದರೆ, ಅದರ ಉಪಯೋಗವಾಗಿದ್ದು ವಿರಳ.

ಆದಾಗ್ಯೂ, ಪ್ಯಾಕೇಜ್‌ನ “ನೇರ ಹಣಕಾಸಿನ ಪರಿಣಾಮ” ರಕ್ಷಣಾ ಕ್ಷೇತ್ರದಲ್ಲಿ ಎಫ್‌ಡಿಐ ಹೆಚ್ಚಿಸುವುದು ಮತ್ತು ಖಾಸಗಿ ವಲಯಕ್ಕೆ ಅವಕಾಶವನ್ನು ತೆರೆಯುವುದಾಗಿದೆ. ಆದರೆ, “ಅಂತರರಾಷ್ಟ್ರೀಯ ಸಾಮಾನ್ಯ ಅನುಪಾತ (ಐಎನ್ಆರ್ )ವು 2 ಲಕ್ಷ ಕೋಟಿಗಿಂತ ಸ್ವಲ್ಪ ಹೆಚ್ಚಾಗಿದೆ ಅಥವಾ ಕೇವಲ ಜಿಡಿಪಿಯ ಶೇ.ಒಂದಷ್ಟು ಮಾತ್ರ” ಎಂದು ಆಕ್ಸ್‌ಫ್ಯಾಮ್ ತನ್ನ ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ: ಅಂಬಾನಿ ಪರನಿಂತ ಪ್ರಧಾನಿ ಮೋದಿ? ರೈತರ ಬಾಯ್ಕಾಟ್‌ ಜಿಯೋಗೆ ಪರೋಕ್ಷವಾಗಿ ವಿರೋಧ!

ಭಾರತದ ಅಗ್ರ 11 ಬಿಲಿಯನೇರ್‌ಗಳಿಗೆ “ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚಾದ ಸಂಪತ್ತಿನ ಮೇಲೆ ಕೇವಲ ಶೇಕಡಾ ಒಂದರಷ್ಟು ತೆರಿಗೆ ವಿಧಿಸಿದರೆ,” ಅದು ಜನೌಷಧಿ ಯೋಜನೆಗೆ ಅನುದಾನದ ಹಂಚಿಕೆಯನ್ನು ಹೆಚ್ಚಿಸಬಹುದು – ಇದು 140 ಪಟ್ಟು ಗುಣಮಟ್ಟದ ಔಷಧಿಗಳನ್ನು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುತ್ತದೆ ಎಂದು ವರದಿ ಹೇಳಿದೆ.

ಇದು ಆರೋಗ್ಯ ರಕ್ಷಣೆಯ ಅಸಮಾನತೆಗಳನ್ನು ಎತ್ತಿ ತೋರಿಸಿದೆ. ಕೋವಿಡ್ ಪ್ರೋಟೋಕಾಲ್‌ಗಳು ಸಾಮಾಜಿಕ ದೂರ ಮತ್ತು ಪದೇಪದೇ ಕೈ ತೊಳೆಯಬೇಕು ಎಂದು ಹೇಳಿದಾಗ. ಇದು “ಭಾರತದಲ್ಲಿ ದುಬಾರಿಯಾದದ್ದು” ಎಂದು ವಾದಿಸಲಾಗಿತ್ತು. ಏಕೆಂದರೆ, ಭಾರತದ ನಗರಗಳಲ್ಲಿ 32% ಜನರು ಒಂದೇ ಕೋಣೆಯ ಮನೆಗಳಲ್ಲಿ ಮತ್ತು 30% ಜನರು ಎರಡು ಕೋಣೆಗಳ ಮನೆಗಳಲ್ಲಿ ವಾಸಿಸುತ್ತಿದ್ದಾರೆ.

ಅದೇ ವರದಿಯಲ್ಲಿರುವ ಜಾಗತಿಕ ಆವೃತ್ತಿಯು ಸಾಂಕ್ರಾಮಿಕ ರೋಗದ ಸಮಯದಲ್ಲಿ ವಿಶ್ವದಾದ್ಯಂತ ಆದಾಯದ ಅಸಮಾನತೆಗಳಲ್ಲಿನ ಅಂತರವನ್ನು ವಿವರಿಸಿದೆ.

“ವಿಶ್ವಾದ್ಯಂತ, 2020 ರ ಮಾರ್ಚ್ 18 ಮತ್ತು ಡಿಸೆಂಬರ್ 31ರ ನಡುವೆ ಬಿಲಿಯನೇರ್‌ಗಳ ಸಂಪತ್ತು 9 3.9 ಟ್ರಿಲಿಯನ್ ಹೆಚ್ಚಾಗಿದೆ… ಅದೇ ಸಮಯದಲ್ಲಿ ಬಡತನದಲ್ಲಿ ವಾಸಿಸುವ ಒಟ್ಟು ಜನರ ಸಂಖ್ಯೆ 200 ಮಿಲಿಯನ್‌ನಿಂದ 500 ಮಿಲಿಯನ್‌ಗೆ ಏರಿಕೆಯಗಿದೆ ಎಂದು ಅಂದಾಜಿಸಲಾಗಿದೆ ” ಎಂಬುದಾಗಿ ಜಾಗತಿಕ ವರದಿ ಹೇಳಿದೆ.

ಆಕ್ಸ್‌ಫ್ಯಾಮ್‌ನ ಪ್ರಕಾರ, ವಿಶ್ವದ 10 ಶ್ರೀಮಂತ ಬಿಲಿಯನೇರ್‌ಗಳ ಸಂಪತ್ತಿನ ಹೆಚ್ಚಳದ ಪ್ರಮಾಣವು  “ಭೂಮಿಯಲ್ಲಿರುವ ಯಾರೊಬ್ಬರೂ ಕೂಡ ವೈರಸ್‌ನಿಂದಾಗಿ ಬಡತನದ ಅಂಚಿಗೆ ಬರದಂತೆ ತಡೆಯಲು ಮತ್ತು COVID-19 ಲಸಿಕೆಗಾಗಿ ಹಣವನ್ನು ಪಾವತಿಸದಂತೆ ಉಚಿತವಾಗಿ ನೀಡಲು ಬಳಸಬಹುದಿತ್ತು” ಎಂದು ಹೇಳಿದೆ.

ಇಂತಹ ಅಸಮಾನತೆಗಳನ್ನು ಪರಿಹರಿಸಲು ಆಕ್ಸ್‌ಫ್ಯಾಮ್ , ಭಾರತ ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದೆ. ಅದರಲ್ಲಿ ಮುಖ್ಯವಾಗಿ, ತಕ್ಷಣವೇ ಕನಿಷ್ಠ ವೇತನವನ್ನು ಪರಿಷ್ಕರಿಸಬೇಕು ಮತ್ತು ಇದನ್ನು ತಕ್ಷವೇ ಜಾರಿಗೆ ತರಬೇಕು ಎಂದು ಸೂಚಿಸಿದೆ.

50 ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸುವವರ ಮೇಲೆ 2% ಹೆಚ್ಚುವರಿ ತೆರಿಗೆ ಶುಲ್ಕ ವಿಧಿಸಬೇಕು ಮತ್ತು ಸಾಂಕ್ರಾಮಿಕ ಸಮಯದಲ್ಲಿ windfall ಲಾಭ ಗಳಿಸುವ ಕಂಪನಿಗಳ ಮೇಲೆ ತಾತ್ಕಾಲಿಕ ತೆರಿಗೆಯನ್ನು ಜಾರಿಗೆ ತರಬೇಕು ಎಂದು ಅದು ಸರ್ಕಾರಕ್ಕೆ ಸೂಚಿಸಿದೆ.

” ಇದು ಉತ್ತಮ ಭವಿಷ್ಯವನ್ನು ನಿರ್ಮಿಸಲು ಭಾರತ ಸರ್ಕಾರವು ನಿರ್ದಿಷ್ಟ ಮತ್ತು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವ ಸಮಯ… ಹೆಚ್ಚು ನಾಗರಿಕರು ಸಮಾನ ಮತ್ತು ನ್ಯಾಯಯುತ ಭವಿಷ್ಯವನ್ನು ಬಯಸುತ್ತಾರೆ” ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಕೃಷಿ ಕಾಯಿದೆಗಳು ಮತ್ತು ಆದಾನಿ, ಅಂಬಾನಿಗಳ ಲಾಭಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights