ಗುಜರಾತ್‌ ಚುನಾವಣೆ: 576 ಸ್ಥಾನಗಳಲ್ಲಿ 483 ಗೆದ್ದ BJP; ಕಾಂಗ್ರೆಸ್‌ ನಾಯಕರ ಸರಣಿ ರಾಜೀನಾಮೆ!

ಗುಜರಾತ್‌ನಲ್ಲಿ ಚುನಾವಣೆ ನಡೆದ ಎಲ್ಲಾ ಆರು ಪಾಲಿಕೆಗಳಲ್ಲಿಯೂ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯ ಹೆಜ್ಜೆ ಇಟ್ಟಿದೆ. ಚುನಾವಣೆ ನಡೆದ ಒಟ್ಟು 576 ಸ್ಥಾನಗಳಲ್ಲಿ ಕನಿಷ್ಠ 483 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಕೆಲವು ಕ್ಷೇತ್ರಗಳಲ್ಲಿ ಎಣಿಕೆ ಇನ್ನೂ ನಡೆಯುತ್ತಿದೆ.

ಇತ್ತೀಚಿನ ಪಂಜಾಬ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಎದುರು ಧೂಳಿಪಟವಾಗಿದ್ದ ಬಿಜೆಪಿ ಗುಜರಾತ್‌ನಲ್ಲಿ ಕಾಂಗ್ರೆಸ್‌ ಅನ್ನು ಮಣಿಸಿದೆ.

ಇತ್ತೀಚೆಗೆ ನಡೆದ ಹಲವು ರಾಜ್ಯಗಳ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಭಾರೀ ಸೋಲನ್ನು ಅನುಭವಿಸಿದ ಸಂದರ್ಭದಲ್ಲಿ ಗುಜರಾತ್‌ನ ಗೆಲುವು ‘ಬಹಳ ವಿಶೇಷ’ ಮತ್ತು ಎರಡು ದಶಕಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಒಂದು ಪಕ್ಷವು ಇಂತಹ ಅದ್ಭುತ ಗೆಲುವನ್ನು ದಾಖಲಿಸುವುದು ಗಮನಾರ್ಹವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಎಎಪಿಗೆ ಭರ್ಜರಿ ಆರಂಭ:

ಬಿಜೆಪಿ ಪ್ರಾಭಲ್ಯ ಸಾಧಿಸಿರುವ ಗುಜರಾತ್‌ನಲ್ಲಿ ಹೊಸದಾಗಿ ಪ್ರವೇಶ ಪಡೆದುಕೊಂಡಿರುವ ಆಮ್‌ ಆದ್ಮಿ ಪಕ್ಷವು ಸೂರತ್‌ನಲ್ಲಿ 27 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಎರಡನೇ ಸ್ಥಾನದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮೂರನೇ ಸ್ಥಾನಕ್ಕೆ ದೂಡಿದೆ.

ಗುಜರಾತ್‌ನಲ್ಲಿ 06 ಪಾಲಿಕೆಗಳಲ್ಲಿ ಒಟ್ಟು 470 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ ಸೂರತ್‌ನಲ್ಲಿ ಭರ್ಜರಿ ಆರಂಭವನ್ನು ಎಎಪಿ ಪಡೆದುಕೊಂಡಿದೆ. ಹೀಗಾಗಿ ಸೂರತ್‌ನಲ್ಲಿ ಕೇಜ್ರಿವಾಲ್‌ ರೋಡ್‌ ಶೋ ನಡೆಸಲಿದ್ದಾರೆ ಎಂದು ಪಕ್ಷದ ಮೂಲಕಗಳು ತಿಳಿಸಿವೆ.

ಕಾಂಗ್ರೆಸ್‌ಗೆ ಮುಖಭಂಗ:

ಗುಜರಾತ್‌ನಲ್ಲಿ ಕಾಂಗ್ರೆಸ್ ಕಳಪೆ ಸಾಧನೆ ತೋರುತ್ತಿದೆ. ಇದುವರೆಗೆ ಘೋಷಿಸಲಾಗಿರುವ ಸ್ಥಾನಗಳಲ್ಲಿ ಕೇವಲ 43 ಸ್ಥಾನಗಳನ್ನು ಮಾತ್ರ ಕಾಂಗ್ರೆಸ್‌ ಗೆದ್ದಿದೆ.

“ಆರು ಪುರಸಭೆಗಳ ಚುನಾವಣಾ ಫಲಿತಾಂಶಗಳು ಗುಜರಾತ್‌ನ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಾಶಾದಾಯಕವಾಗಿದೆ. ನಾವು ಜನರ ಆದೇಶವನ್ನು ಸ್ವೀಕರಿಸುತ್ತೇವೆ. ಆದರೆ ಪ್ರತಿ ಕರಾಳ ರಾತ್ರಿಯ ನಂತರ ಒಂದು ಉದಯವಿದೆ. ನಗರ ಮತದಾರರ ವಿಶ್ವಾಸವನ್ನು ಪಡೆಯಲು ನಾವು ಶ್ರಮಿಸುತ್ತೇವೆ” ಎಂದು ಮಾಜಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅರ್ಜುನ್ ಮೊಡ್ವಾಡಿಯಾ ತಿಳಿಸಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದ ಎಲ್ಲ ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡಿತ್ತು. ಇದೀಗ ಸ್ಥಳೀಯ ಸಂಸ್ಥೆಗಳಲ್ಲಿಯೂ ಮುಖಭಂಗ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಕಾಂಗ್ರೆಸ್‌ ನಾಯಕರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡವು ಪರ್ವ ಆರಂಭಿಸಿದ್ದಾರೆ. ರಾಜ್‌ಕೋಟ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ದಂಗರ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದೇ ರೀತಿ ಸೂರತ್ ಕಾಂಗ್ರೆಸ್ ಅಧ್ಯಕ್ಷ ಬಾಬು ರಾಯ್ಕಾ ಮತ್ತು ಭಾವನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ವಘಾನಿ ಕೂಡ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: BJP ಸದಸ್ಯರ ಅಡ್ಡ ಮತದಾನ; NCP ಪಾಲಿಗೆ ಮೇಯರ್‌ ಹುದ್ದೆ!

 

ಇದನ್ನೂ ಓದಿ: ಪಂಚಮಸಾಲಿ ಹೋರಾಟ: ಪ್ರಶ್ನಾತೀತ ಲಿಂಗಾಯತ ನಾಯಕ ಬಿಎಸ್‌ವೈಗೆ ಬಿಕ್ಕಟ್ಟು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights