ಕಾವೇರಿ ಯೋಜನೆಗಳ ಸ್ಥಗಿತಕ್ಕೆ ಆಗ್ರಹ: ಮಾರ್ಚ್‌ 13ರಿಂದ ಸರಣಿ ಹೋರಾಟ; 27ಕ್ಕೆ ಕರ್ನಾಟಕ ಬಂದ್‌!

ತಮಿಳುನಾಡು ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕಾವೇರಿ ನೀರಾವರಿ ಯೋಜನೆಗಳನ್ನು ಕೈ ಬಿಡುವಂತೆ ಒತ್ತಾಯಿಸಿ ಮಾರ್ಚ್‌ 27 ರಂದು ಕರ್ನಾಟಕ ಬಂದ್‌ಗೆ ಕರೆನೀಡಿರುವುದಾಗಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್‌ ತಿಳಿಸಿದ್ದಾರೆ.

ತಮಿಳುನಾಡು ಸರ್ಕಾರ ಏಕಾಏಕಿ ನೀರಾವರಿ ಯೋಜನೆಗಳನ್ನು ಕೈಗೊಂಡಿದೆ. ಕಾವೇರಿ ನದಿ ಜೋಡಣೆಗೆ ಸಂಬಂಸಿದಂತೆ 118 ಕಿಮೀ ಉದ್ದದ ಕಾಲುವೆಗಳ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರ ಶಂಕುಸ್ಥಾಪನೆ ಮಾಡಿದೆ. ಇದರಿಂದ ಕರ್ನಾಟಕಕ್ಕೆ ಭಾರೀ ನಷ್ಟವಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.

ತಮಿಳುನಾಡು ಸರ್ಕಾರ ಕಳೆದ ಆರು ತಿಂಗಳ ಹಿಂದೆಯೇ ನೀರಾವರಿ ಯೋಜನೆಗಳಿಗೆ ಸಂಬಂಧಿಸ ಪ್ರಕ್ರಿಯೆಗಳನ್ನು ಆರಂಭಿಸಿದೆ. ಆದರೆ, ಇದರ ವಿರುದ್ದ ನಮ್ಮ ರಾಜ್ಯ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈ ಯೋಜನೆಗಳು ತಮಿಳುನಾಡಿಗೆ ವರವಾಗಿದ್ದು, ರಾಜ್ಯಕ್ಕೆ ಸಂಪೂರ್ಣ ಶಾಪವಾಗಿವೆ. ಕೂಡಲೇ ಕರ್ನಾಟಕ ಸರ್ಕಾರ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಕಾಮಗಾರಿಗೆ ತಡೆ ತರಬೇಕು ಎಂದು ನಾಗರಾಜ್‌ ಒತ್ತಾಯಿಸಿದ್ದಾರೆ.

ತಮಿಳುನಾಡು ಸರ್ಕಾರ ಕಾವೇರಿ ಯೋಜನೆ ಕೈ ಬಿಡಬೇಕೆಂದು ಒತ್ತಾಯಿಸಿ ಮಾರ್ಚ್ 13ರಂದು ಕೆಆರ್‌ಎಸ್‌ ಚಲೋ ನಡೆಸುತ್ತೇವೆ. ಮಾರ್ಚ್ 20ರಂದು ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆ ನಡೆಸುತ್ತೇವೆ. ಅಷ್ಟರೊಳಗೆ ಸರ್ಕಾರ ತೀರ್ಮಾನ ಕೈಗೊಳ್ಳದಿದ್ದರೆ ಮಾರ್ಚ್ 27ರಂದು ಕರ್ನಾಟಕ ಬಂದ್ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಕಾವೇರಿ-ವೆಲ್ಲಾರು-ವೈಗೈ ಗುಂಡಾರು ನದಿ ಜೋಡಣೆ ಯೋಜನೆಗೆ ತಮಿಳುನಾಡು ಸರ್ಕಾರ ಅಡಿಗಲ್ಲು ಹಾಕಿದೆ. ನಮ್ಮ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ಕಾವೇರಿ ವಿಷಯದಲ್ಲಿ ನಮ್ಮ ನಾಡಿಗೆ ನಿರಂತರ ಅನ್ಯಾಯವಾಗುತ್ತಲೇ ಬಂದಿದೆ. ಅವರು ಕಾಲುವೆಗಳನ್ನು ನಿರ್ಮಿಸಿದರೆ ಮತ್ತೆ ನೀರಿಗೆ ಕಂಟಕ ಬರಲಿದೆ ಎಂದು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಸಿಡಿದ ತನ್ವೀರ್; ಅಮಾನತಿಗೂ ಸಿದ್ದ ಎಂದ ಕಾಂಗ್ರೆಸ್‌ ಶಾಸಕ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights