ಭಾರತ-ಪಾಕಿಸ್ಥಾನವನ್ನು ಉತ್ತಮ ಸ್ನೇಹಿತರನ್ನಾಗಿ ನೋಡುವುದು ನನ್ನ ಕನಸು: ಮಲಾಲ
ಗಡಿ ಮತ್ತು ವಿಭಜನೆಯ ಫಿಲಾಸಫಿಯು ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ಭಾರತ ಮತ್ತು ಪಾಕಿಸ್ತಾನದ ಜನರು ಶಾಂತಿಯಿಂದ ಬದುಕಲು ಬಯಸುತ್ತಾರೆ. ಉಭಯ ರಾಷ್ಟ್ರಗಳು ‘ಉತ್ತಮ ಸ್ನೇಹಿತ’ರಾಗುವುದನ್ನು ನೋಡಬೇಕು ಎಂಬುದು ನನ್ನ ಕನಸು ಎಂದು ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲ ಯೂಸಫ್ ಜೈ ಹೇಳಿದ್ದಾರೆ.
ಜೈಪುರ ಸಾಹಿತ್ಯ ಉತ್ಸವದ (ಜೆಎಲ್ಎಫ್) ಮುಕ್ತಾಯದ ದಿನದಂದು ವರ್ಚುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಲಾಲ, ಪಾಕಿಸ್ತಾನವಾಗಲಿ ಅಥವಾ ಭಾರತವಾಗಲಿ, ಪ್ರತಿ ದೇಶದಲ್ಲಿಯೂ ಅಲ್ಪಸಂಖ್ಯಾತರಿಗೆ ರಕ್ಷಣೆ ಬೇಕು. ಇದು ಧರ್ಮಕ್ಕೆ ಸಂಬಂಧಿಸಿದ ವಿಷಯವಲ್ಲ. ಆದರೆ “ಅಧಿಕಾರದ ಶೋಷಣೆಗೆ” ಸಂಬಂಧಿಸಿದೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ.
“ಭಾರತ ಮತ್ತು ಪಾಕಿಸ್ತಾನಗಳು ಉತ್ತಮ ಸ್ನೇಹಿತರಾಗುವುದು ಮತ್ತು ನಾವು ಪರಸ್ಪರರ ದೇಶಗಳಿಗೆ ಭೇಟಿ ನೀಡುವುದು ನನ್ನ ಕನಸು. ನೀವು ಪಾಕಿಸ್ತಾನಿ ನಾಟಕಗಳನ್ನು ನೋಡುವುದನ್ನು ಮುಂದುವರಿಸಬಹುದು, ನಾವು ಬಾಲಿವುಡ್ ಚಲನಚಿತ್ರಗಳನ್ನು ನೋಡುವುದನ್ನು ಮುಂದುವರಿಸಬಹುದು ಮತ್ತು ಕ್ರಿಕೆಟ್ ಪಂದ್ಯಗಳನ್ನು ಆನಂದಿಸಬಹುದು” ಎಂದು ಮಲಾಲ ಆಶಯ ವ್ಯಕ್ತಪಡಿಸಿದ್ದಾರೆ.
“ನೀವು ಭಾರತೀಯರು – ನಾನು ಪಾಕಿಸ್ತಾನಿ. ನಾವಿಬ್ಬರೂ ಸಂಪೂರ್ಣವಾಗಿ ಪರಸ್ಪರ ಚೆನ್ನಾಗಿದ್ದೇವೆ. ಹಾಗಾದರೆ ಈ ದ್ವೇಷವನ್ನು ನಮ್ಮ ನಡುವೆ ಏಕೆ ಸೃಷ್ಟಿಸಲಾಗಿದೆ? ಗಡಿಗಳು, ವಿಭಾಗಗಳು, ವಿಭಜನೆ ಮತ್ತು ಆಕ್ರಮಣ (ಜಯ) ಇವೆಲ್ಲವೂ ಹಳೆಯ ತತ್ವಶಾಸ್ತ್ರಗಳು. ಇವು ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ಮಾನವರಂತೆ ನಾವೆಲ್ಲರೂ ಶಾಂತಿಯಿಂದ ಬದುಕಲು ಬಯಸುತ್ತೇವೆ” ಮಲಾಲ ಹೇಳಿದರು.
ಇದನ್ನೂ ಓದಿ: ಕಾಶ್ಮೀರದಲ್ಲಿ ರಕ್ತದೋಕುಳಿ ನಿಲ್ಲಿಸಿ; ಶಾಂತಿ ನೆಲೆಸಲು ಪಾಕ್ ಜೊತೆ ಕೇಂದ್ರ ಸರ್ಕಾರ ಮಾತಕತೆ ನಡೆಸಬೇಕು: ಮೆಹಬೂಬಾ ಮುಫ್ತಿ
ಭಾರತ ಮತ್ತು ಪಾಕಿಸ್ತಾನದ ನಿಜವಾದ ಶತ್ರು “ಬಡತನ, ತಾರತಮ್ಯ ಮತ್ತು ಅಸಮಾನತೆ.” ಇವುಗಳ ವಿರುದ್ಧ ನಾವು ಹೋರಾಟಬೇಕು ಮತ್ತು ಎರಡೂ ದೇಶಗಳು ಒಂದಾಗಬೇಕು ಎಂದು ಅವರು ಹೇಳಿದರು.
“ಅಲ್ಪಸಂಖ್ಯಾತರಿಗೆ ಅಪಾಯವಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಅವರಿಗೆ ನೀಡಲಾಗಿಲ್ಲ. ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಕ್ರಿಶ್ಚಿಯನ್ನರು, ಭಾರತದಲ್ಲಿ ದಲಿತರು, ಮುಸ್ಲಿಮರು ಮತ್ತು ಇತರರು ಅಲ್ಪಸಂಖ್ಯಾತರು. ಪ್ಯಾಲೆಸ್ತೀನಿಯರು, ರೋಹಿಂಗ್ಯಾಗಳು ನಿರಾಶ್ರಿತರು. ಇವರಲ್ಲರ ಮೇಲಿನ ಶೋಷಣೆ ಧರ್ಮವಲ್ಲ, ಇದೆಲ್ಲವೂ ಧರ್ಮಕ್ಕಾಗಿ ನಡೆಯುತ್ತಿಲ್ಲ. ಅದು ಅಧಿಕಾರದ ಶೋಷಣೆ, ಅದು ಬಡವರು ಮತ್ತು ಅಲ್ಪಸಂಖ್ಯಾತರ ಮೇಲೆ ಶ್ರೀಮಂತರ ಶೋಷಣೆ” ಎಂದು ಮಲಾಲ ವಿವರಿಸಿದ್ದಾರೆ.
“ಅಲ್ಪಸಂಖ್ಯಾತರಿಗೆ ಜಾಗತಿಕವಾಗಿ ಪ್ರತಿ ದೇಶದಿಂದ ರಕ್ಷಣೆ ಬೇಕು. ಅವರಿಗೆ ಧ್ವನಿ ಬೇಕು, ರಕ್ಷಣೆ ಬೇಕು. ಇದನ್ನು ಸರ್ಕಾರಗಳು, ಮಾನವ ಹಕ್ಕುಗಳ ಸಂಸ್ಥೆಗಳು ಬಹಳ ಗಂಭೀರವಾಗಿ ಪರಿಗಣಿಸಬೇಕು” ಎಂದು ಅವರು ಗಮನ ಸೆಳೆದರು.
ಚರ್ಚೆಯ ಸಮಯದಲ್ಲಿ, ಅವರು ಮಾನವ ಹಕ್ಕುಗಳಿಗಾಗಿ ಹೋರಾಡುವ ಭಾರತೀಯ ಯುವ ಹೋರಾಟಗಾರ್ತಿಯರನ್ನು ಶ್ಲಾಘಿಸಿದರು. ಭಾರತದ ರೈತರಿಗಾಗಿ, ಹವಾಮಾನ ಬದಲಾವಣೆ ಮತ್ತು ಅಲ್ಪಸಂಖ್ಯಾತ ಹಕ್ಕುಗಳ ರಕ್ಷಣೆಗಾಗಿ ಯುವ ಹೋರಾಟಗಾರ್ತಿಯರು ಮಾತನಾಡುತ್ತಿದ್ದಾರೆ. ಅದು “ಸಬಲೀಕರಣ ಮತ್ತು ಸ್ಪೂರ್ತಿದಾಯಕ“ ಎಂದು ಮಲಾಲ ಕರೆದಿದ್ದಾರೆ.
ಭಾರತದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತರ ಬಂಧನ ಮತ್ತು ಪ್ರತಿಭಟನಾ ಸ್ಥಳದಲ್ಲಿ ಅಂತರ್ಜಾಲವನ್ನು ಸ್ಥಗಿತಗೊಳಿಸಿರುವ ಸುದ್ದಿಯು ವ್ಯವಸ್ಥೆಯ ಬಗ್ಗೆ ಚಿಂತೆಗೀಡುಮಾಡಿದೆ. ನೀವು ಅವರ ರಾಜಕೀಯ ಅಭಿಪ್ರಾಯವನ್ನು ಇಷ್ಟಪಡದಿರಬಹುದು. ಆದರೆ, ನೀವು ಅವರನ್ನು ಬಂಧಿಸಬೇಕು ಮತ್ತು ಜೈಲುಗಳಲ್ಲಿ ಕೂಡಿಡಬೇಕು ಎಂಬುದು ಸರಿಯಲ್ಲ. ಸರ್ಕಾರವು ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸುತ್ತದೆ ಎಂಬ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜಾಗತಿಕ ಹಸಿವು ಸೂಚ್ಯಂಕ: ಭಾರತಕ್ಕೆ 94ನೇ ಸ್ಥಾನ; ಪಾಕಿಸ್ಥಾನ, ನೇಪಾಳಕ್ಕಿಂತ ಹಿಂದುಳಿದ ಭಾರತ

