ಮೋದಿ ಚೌಕಿದಾರ ಅಲ್ಲ- ಜನರ ಪಾಲಿನ ‘ಕೆಟ್ಟ ಗ್ರಹಚಾರ’: ದಿನೇಶ್‌ ಗುಂಡೂರಾವ್

ಪ್ರಧಾನಿ ಮೋದಿಯವರು ಚೌಕಿದಾರರಲ್ಲ, ಬದಲಿಗೆ ಜನಸಾಮಾನ್ಯರ ಪಾಲಿನ ‘ಕೆಟ್ಟ ಗ್ರಹಚಾರ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಬೆಲೆ ಏರಿಕೆಯ ವಿರುದ್ದ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಚೇಳಿಗೆ ಯಜಮಾನಿಕೆ ನೀಡಿ ಮನೆಯವರೆಲ್ಲಾ ಕುಟುಕಿಸಿಕೊಳ್ಳುವಂತಾಗಿದೆ ಪ್ರಧಾನಿ ಮೋದಿಯವರ ಆಡಳಿತ. ಇದೊಂದು ರೀತಿ ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡಂತೆ. ಸ್ವಘೋಷಿತ ‘ಚೌಕಿದಾರ’ ಮೋದಿಯವರು ನಿಜವಾದ ‘ಚೌಕಿದಾರ’ರಲ್ಲ. ಬದಲಿಗೆ ಜನಸಾಮಾನ್ಯರ ಪಾಲಿನ ‘ಕೆಟ್ಟ ಗ್ರಹಚಾರ’ವಾಗಿದ್ದಾರೆ. ಮೋದಿಯವರ ಅಚ್ಚೇದಿನ್‌ನ ಸತ್ಯ ಜನರಿಗೆ ಈಗ ಅರಿವಾಗುತ್ತಿದೆ ಎಂದು ಪೋಸ್ಟ್‌ ಮಾಡಿದ್ದಾರೆ.

ಬೆಲೆಯೇರಿಸಿ ಜನರ ಜೇಬು ಖಾಲಿ ಮಾಡುವುದೇ ಕೇಂದ್ರ ಸರ್ಕಾರದ ಒಂದಂಶದ ಕಾರ್ಯಕ್ರಮವಿದ್ದಂತೆ ಭಾಸವಾಗುತ್ತಿದೆ. ಒಂದೇ ತಿಂಗಳ ಅವಧಿಯಲ್ಲಿ 4 ಬಾರಿ LPG ಬೆಲೆಯೇರಿಕೆಯಾಗಿದೆ. ಒಂದೊಂದು ರೂಪಾಯಿಗೂ ಪರಿತಪಿಸುತ್ತಿರುವ ಬಡಜನತೆ ಈ ಬೆಲೆಯೇರಿಕೆ ತಾಪ ಸಹಿಸಿಕೊಳ್ಳಲು ಹೇಗೆ ಸಾಧ್ಯ? ಈ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತಾದರೂ ಸಂವೇದನೆ ಬೇಡವೆ? ಎಂದು ಟ್ವೀಟ್ ಮಾಡಿದ್ದಾರೆ.

ಹೊಟ್ಟೆ-ಬಟ್ಟೆ ಕಟ್ಟಿ ಜೀವನ ನಡೆಸುತ್ತಿರುವ ಜನ ಈ ಸರ್ಕಾರದ ದುಡ್ಡಿನ ದುರಾಸೆಗೆ ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ಬೆಲೆಯೇರಿಕೆಯಿಂದ ದುಡಿದ ಹಣ ಉಳಿಸುವುದಿರಲಿ,ತಿಂಗಳ ಸಂಸಾರ ನಡೆಸುವುದೂ ಕಷ್ಟವಾಗಿದೆ. ಮಾತಲ್ಲೇ ಮಂಟಪ ಕಟ್ಟುವ ಬಣ್ಣದ ಮಾತುಗಳು ಜನರ ಹೊಟ್ಟೆ ತುಂಬಿಸುವುದಿಲ್ಲ. ಈ ಸತ್ಯವನ್ನು ಮೋದಿಯವರು ಇನ್ನಾದರೂ ಅರ್ಥ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರ ಆರೋಪ: ಅಮಿತ್‌ ಶಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಪುದುಚೇರಿ ಮಾಜಿ ಸಿಎಂ ಎಚ್ಚರಿಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights