BJP ಸವಾಲಿಗೆ ತಕ್ಕ ಉತ್ತರ: ಒಂದೇ ಕ್ಷೇತ್ರದಲ್ಲಿ ಮಮತಾ ಸ್ಪರ್ಧೆ; ಬಂಗಾಳ ಹುಲಿಯನ್ನು ಎದುರಿಸ್ತಾರ ಸುವೇಂದು?
ತಮ್ಮ ಬಲಗೈ ಭಂಟನಂತಿದ್ದ ಸುವೇಂದು ಅಧಿಕಾರಿ ಪಕ್ಷ ತೊರೆದು ಬಿಜೆಪಿ ಸೇರಿದ ನಂತರ, ಸುವೇಂದು ಪ್ರತಿನಿಧಿಸುವ ನಂದಿಗ್ರಾಮ್‌ನಲ್ಲಿ ತಾವೇ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ಘೋಷಿಸಿದ್ದರು. ಇದೀಗ, ಅವರ ಘೋಷಣೆಯಂತೆ ತಮ್ಮ ಸ್ವಕ್ಷೇತ್ರವನ್ನು ಬಿಟ್ಟುಕೊಟ್ಟಿರುವ ಮಮತಾ, ತಾವು ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದು, ನಂದಿಗ್ರಾಮದಲ್ಲಿ ಮಾತ್ರವೇ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಇದೀಗ ಮಮತಾ ವಿರುದ್ಧ ಸುವೇಂದು ಅಧಿಕಾರಿ ಬಿಜೆಪಿಯಿಂದ ಸ್ಪರ್ಧಿಸುವರೇ? ಅಥವಾ ಕ್ಷೇತ್ರ ಬದಲಾಯಿಸುವರೇ? ಎಂಬುದು ಕುತೂಹಲ ಹುಟ್ಟುಹಾಕಿದೆ.
ಹತ್ತು ವರ್ಷಗಳ ಹಿಂದೆ ನಂದಿಗ್ರಾಮ ಪ್ರದೇಶದಲ್ಲಿ ನಡೆದ ಭೂ ಹೋರಾಟವು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರಕ್ಕೆ ಬರಲು ಕಾರಣವಾಗಿತ್ತು. ಅಲ್ಲದೆ, ಈ ನಂದಿಗ್ರಾಮ ಕ್ಷೇತ್ರವು ಟಿಎಂಸಿಯಲ್ಲಿ ಪ್ರಭಾವಿ ನಾಯಕನಾಗಿದ್ದ, ಇದೀಗ ಬಿಜೆಪಿ ಸೇರಿರುವ ಸುವೇಂದು ಅಧಿಕಾರಿಯ ಭದ್ರಕೋಟೆಯಾಗಿತ್ತು. ಈ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದ ಮಮತಾ ಬ್ಯಾನರ್ಜಿ, ಇದಲ್ಲದೇ ಮತ್ತೊಂದು ಕ್ಷೇತ್ರದಲ್ಲಿಯೂ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ, ನಂದಿಗ್ರಾಮ್‌ನಿಂದ ಮಾತ್ರ ಸ್ಪರ್ಧಿಸುವುದಾಗಿ ಘೋಷಿಸಲಿ ಮಮತಾ ಘೋಷಿಸಲಿ ಎಂದು ಸವಾಲು ಹಾಕಿತ್ತು.
ಇದೀಗ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿರುವ ಮಮತಾ, ತಮ್ಮ ಸುರಕ್ಷಿತ ನೆಲೆಯಾಗಿದ್ದ ಕೋಲ್ಕತ್ತಾದ ಭವಾನಿಪೋರ್ ಕ್ಷೇತ್ರವನ್ನು ತೊರೆದು, ಕಠಿಣ ಸವಾಲಾಗಿರುವ ನಂದಿಗ್ರಾಮದಿಂದ ಮಾತ್ರವೇ ಸ್ಪರ್ಧಿಸುವುದಾಗಿ ತೀರ್ಮಾನಿಸಿದ್ದಾರೆ.
ಬಂಗಾಳದ ಒಟ್ಟು 294 ಕ್ಷೇತ್ರಗಳಲ್ಲಿ 291 ಕ್ಷೇತ್ರಗಳಿಗೆ ಟಿಎಂಸಿ ಅಭ್ಯರ್ಥಿಗಳನ್ನು ಇಂದು ಘೋಷಿಸಲಾಗಿದೆ. ಈ ಪೈಕಿ ಮಹಿಳೆಯರು, ದಲಿತರು ಮತ್ತು ಮುಸ್ಲಿಮರಿಗೆ ಹೆಚ್ಚಿನ ಸೀಟುಗಳನ್ನು ನೀಡಲಾಗಿದೆ. 291 ಕ್ಷೇತ್ರಗಳಲ್ಲಿ 50 ಮಹಿಳೆಯರಿಗೆ, 42 ಮುಸ್ಲಿಮರಿಗೆ, 79 ಪರಿಶಿಷ್ಟ ಜಾತಿ ಮತ್ತು 17 ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. 80 ವರ್ಷ ಮೇಲ್ಪಟ್ಟ ಯಾವುದೇ ಹಿರಿಯ ನಾಯಕರಿಗೂ ಟಿಕೆಟ್ ನೀಡಲಾಗಿಲ್ಲ.
ತಮ್ಮ ಕ್ಷೇತ್ರವನ್ನು ತೊರೆದಿರುವ ಮಮತಾ, ಆ ಕ್ಷೇತ್ರದಲ್ಲಿ ತಮ್ಮ ಸಂಪುಟದಲ್ಲಿ ವಿದ್ಯುತ್ ಸಚಿವರಾಗಿರುವ ಸೋವಾಂಡೇಬ್ ಚಟ್ಟೋಪಾಧ್ಯಾಯರು ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದ್ದಾರೆ.
ಟಿಎಂಸಿ ತ್ಯಜಿಸಿ ಬಿಜೆಪಿ ಸೇರಿರುವ ಸುವೇಂಧು ಅಧಿಕಾರಿ ನಂದಿಗ್ರಾಮದ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗಿದೆ. ಗುರುವಾರ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿ ಇಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿದರೆ ಅವರನ್ನು 50,000 ಮತಗಳ ಅಂತರದಿಂದ ಸೋಲಿಸುತ್ತೇನೆ ಎಂದಿದ್ದರು. ಆದರೆ, ಅವರು ಸುವೇಂದು ಸ್ಪರ್ಧೆಯ ಬಗ್ಗೆ ಪ್ರಧಾನಿ ಮೋದಿ ನಿರ್ಧರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಂದಿಗ್ರಾಮದಲ್ಲಿ ಟಾಟಾ ಕಂಪನಿಯ ಕಾರು ತಯಾರಿಕ ಘಟಕಕ್ಕಾಗಿ ರೈತರಿಂದ ಬಲವಂತವಾಗಿ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದ್ದಾಗ ಅದನ್ನು ವಿರೋಧಿಸಿ ಸುವೇಂಧು ಅಧಿಕಾರಿ ಟಿಎಂಸಿ ಅಭಿಯಾನದ ನೇತೃತ್ವ ವಹಿಸಿದ್ದರು.
ಮೂರು ಕ್ಷೇತ್ರಗಳಿಲ್ಲಿ ಟಿಎಂಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಅವುಗಳನ್ನು ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಡಲು ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ.
Read Also: ಬಂಗಾಳ ಚುನಾವಣೆ: ನಂದಿಗ್ರಾಮದಲ್ಲಿ ಮಾತ್ರ ಸ್ಪರ್ಧಿಸುವಂತೆ ಮಮತಾಗೆ BJP ಸವಾಲು! ಮಮತಾ ಹೇಳಿದ್ದೇನು?