ಬಂಗಾಳ ಚುನಾವಣೆ: ನಂದಿಗ್ರಾಮದಲ್ಲಿ ಮಾತ್ರ ಸ್ಪರ್ಧಿಸುವಂತೆ ಮಮತಾಗೆ BJP ಸವಾಲು! ಮಮತಾ ಹೇಳಿದ್ದೇನು?
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತಾವು ಗೆದ್ದೇಗೆಲ್ಲುತ್ತೇವೆ ಎಂಬ ವಿಶ್ವಾಸವಿದ್ದರೆ, ಅವರು ನಂದಿಗ್ರಾಮ್ನಿಂದ ಮಾತ್ರ ಸ್ಪರ್ಧಿಸುವುದಾಗಿ ಘೋಷಿಸಲಿ ಎಂದು ಸಿಎಂ ಮಮತಾ ಬ್ಯಾನರ್ಜಿಗೆ ಬಿಜೆಪಿ ಸವಾಲು ಹಾಕಿದೆ.
ಇದಕ್ಕೆ ತಿರುಗೇಟು ನೀಡಿರುವ ಬ್ಯಾನರ್ಜಿ, ಬಿಜೆಪಿ ಮೊದಲು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಸಿಸಲಿ. ಅಲ್ಲದೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಅವರು ನಂದಿಗ್ರಾಮ್ನಿಂದ ಮಾತ್ರ ಸ್ಪರ್ಧಿಸುತ್ತಾರೆಂದು ಬಿಜೆಪಿ ಘೋಷಿಸುತ್ತದೆಯೇ ಎಂದು ಮರು ಪ್ರಶ್ನೆ ಎಸೆದಿದ್ದಾರೆ.
ಬಿಜೆಪಿ ಮುಖ್ಯಮಂತ್ರಿ ಸ್ಥಾನಕ್ಕೆ ಅಭ್ಯರ್ಥಿಯನ್ನು ಘೋಷಿಸಿಲ್ಲ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರವೇ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದಾಗಿ ಹೇಳುತ್ತಿದೆ. ಚುನಾವಣೆಗೂ ಮುನ್ನವೇ ಸಿಎಂ ಕ್ಯಾಂಡಿಡೇಟ್ ಹೆಸರನ್ನು ಘೋಷಿಸಲು ಬಿಜೆಪಿ ಏಕೆ ಹೆದರುತ್ತಿದೆ ಎಂದು ಟಿಎಂಸಿ ನಾಯಕ, ಸಿಎಂ ಮಮತಾ ಬ್ಯಾನರ್ಜಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ನಂದಿಗ್ರಾಮ್ನಲ್ಲಿ ಕಳೆದ ತಿಂಗಳು (ಜನವರಿ)ಯಲ್ಲಿ ನಡೆದ ಟಿಎಂಸಿ ರ್ಯಾಲಿಯಲ್ಲಿ ನಂದಿಗ್ರಾಮ್ನಿಂದ ತಾವೇ ಸ್ಪರ್ಧಿಸುವುದಾಗಿ ಬ್ಯಾನರ್ಜಿ ಘೋಷಿಸಿದ್ದಾರೆ.
ನಂದಿಗ್ರಾಮ್ ಕ್ಷೇತ್ರವು ಟಿಎಂಸಿಯ ಭದ್ರಕೋಟೆಯಾಗಿದ್ದು, ಈ ಕ್ಷೇತ್ರವನ್ನು ಮಮತಾ ಅವರ ಬಲಗೈ ಭಂಟನಾಗಿದ್ದ ಸುವೇಂದು ಅಧಿಕಾರಿ ಪ್ರತಿನಿಧಿಸುತ್ತಿದ್ದರು. ಸುವೇಂದು ಟಿಎಂಸಿ ತೊರೆದು ಬಿಜೆಪಿ ಸೇರಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಅವರನ್ನು ಸೋಲಿಸಲು ಪಣತೊಟ್ಟಿರುವ ಮಮತಾ, ತಾವೇ ನಂದಿಗ್ರಾಮ್ನಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ವಿಜಯವರ್ಗಿಯಾ ಅವರು ತಮ್ಮ ಟ್ವೀಟ್ನಲ್ಲಿ “ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮ್ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಆದರೆ, ಅವರು ಇಲ್ಲಿಂದ ಮಾತ್ರ ಸ್ಪರ್ಧಿಸುವುದಾಗಿ ಹೇಳಲಿಲ್ಲ! ಅವರಿಗೆ ತಮ್ಮ ಗೆಲುವಿನ ಬಗ್ಗೆ ವಿಶ್ವಾಸವಿದ್ದರೆ, ನಂದಿಗ್ರಾಮ್ನಿಂದ ಮಾತ್ರ ಸ್ಪರ್ಧಿಸುವುದಾಗಿ ಘೋಷಿಸಬೇಕು. ಇಲ್ಲದಿದ್ದರೆ, ನೀವು ನಂದಿಗ್ರಾಮ್ ಅನ್ನು ನಂಬುವುದಿಲ್ಲ ಎಂದು ಅರ್ಥವಾಗುತ್ತದೆ! ” ಎಂದು ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಟಿಎಂಸಿ, “ಬಿಜೆಪಿ ತನ್ನ ನಂದಿಗ್ರಾಮ್ ಅಭ್ಯರ್ಥಿಯನ್ನು ಘೋಷಿಸಲು ಮತ್ತು ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸಲೂ ಸಹ ಏಕೆ ಹೆದರುತ್ತಿದೆ” ಎಂದು ಪ್ರಶ್ನಿಸಿದೆ.
“ನಂದಿಗ್ರಾಮ್ನಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಯಾರನ್ನು ಕಣಕ್ಕಿಳಿಸುತ್ತಾರೆ ಎಂದು ಬಿಜೆಪಿ ಮೊದಲು ಘೋಷಿಸಬೇಕು” ಎಂದು ಟಿಎಂಸಿ ಹೇಳಿದೆ.
294 ಸದಸ್ಯರ ರಾಜ್ಯ ವಿಧಾನಸಭೆಗೆ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: BJP ಮುಕ್ತವಾಗುತ್ತಿವೆ ಸ್ಥಳೀಯ ಸಂಸ್ಥೆಗಳು; ಆಂಧ್ರದ 3,221 ಪಂಚಾಯತ್ ಸ್ಥಾನಗಳಲ್ಲಿ BJP ಗೆದ್ದಿದ್ದು 13 ಮಾತ್ರ!

