ರಾಹುಲ್ ಯುವಜನರನ್ನು ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಪ್ರಚೋದಿಸಿದ್ದಾರೆ; ಅವರನ್ನು ತಮಿಳುನಾಡು ಪ್ರಚಾರದಿಂದ ನಿರ್ಬಂಧಿಸಬೇಕು: ಬಿಜೆಪಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ತಮಿಳುನಾಡಿನಲ್ಲಿ ರಾಹುಲ್‌ಗಾಂಧಿ ಪ್ರಚಾರ ಮಾಡುವುದನ್ನು ನಿರ್ಬಂಧಿಸಬೇಕು ಎಂದು ಚುನಾವಣಾ ಆಯೋಗವನ್ನು ತಮಿಳುನಾಡು ಬಿಜೆಪಿ ಘಟಕ ಒತ್ತಾಯಿಸಿದೆ.
“ಯುವಜನರನ್ನು ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ರಾಹುಲ್‌ಗಾಂಧಿ ಪ್ರಚೋದಿಸಿದ್ದಾರೆ. ಅದಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಚುನಾವಣಾ ಆಯೋಗವು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು” ಬಿಜೆಪಿ ಬಯಸಿದೆ.
ಮಾರ್ಚ್ 1 ರಂದು ಕನ್ಯಾಕುಮಾರಿ ಜಿಲ್ಲೆಯ ಮುಲಗುಮುದುವಿನ ಸೇಂಟ್ ಜೋಸೆಫ್ ಮೆಟ್ರಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ರಾಹುಲ್ ಗಾಂಧಿ ಅವರಸಂವಾದ ಕಾರ್ಯಕ್ರಮವು ಚುನಾವಣಾ ಪ್ರಚಾರಕ್ಕೆ ಹೋಲುತ್ತದೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ವಿ ಬಾಲಚಂದ್ರನ್ ಆರೋಪಿಸಿದ್ದಾರೆ.
ಶಿಕ್ಷಣ ಸಂಸ್ಥೆಯಲ್ಲಿ ಗಾಂಧಿಯವರ ರಾಜಕೀಯ ಅಭಿಯಾನವು ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿದೆ. ಅದಕ್ಕಾಗಿ ತಮಿಳುನಾಡಿನಲ್ಲಿ ಅವರ ಚುನಾವಣಾ ಪ್ರಚಾರವನ್ನು ನಿಷೇಧಿಸಬೇಕು ಎಂದು ರಾಜ್ಯ ಚುನಾವಣಾ ಅಧಿಕಾರಿ (ಸಿಇಒ) ಸತ್ಯಬ್ರಹತ ಸಾಹೂ ಅವರಿಗೆ ಬಿಜೆಪಿ ಮನವಿ ಪತ್ರ ಸಲ್ಲಿಸಿದೆ.
ಇದನ್ನೂ ಓದಿ: ತಮಿಳು ಭಾಷೆ ಕಲಿಯದಿರುವುದಕ್ಕೆ ಬೇಸರವಿದೆ; ಮನ್-ಕಿ-ಬಾತ್‌ನಲ್ಲಿ ಮೋದಿ
ಇದಲ್ಲದೆ, ಕಾಂಗ್ರೆಸ್ ನಾಯಕ ಭಾರತಕ್ಕೆ ಈಗ ಮತ್ತೊಂದು ಸ್ವಾತಂತ್ರ್ಯ ಹೋರಾಟದ ಅಗತ್ಯವಿದೆ ಎಂದು ಹೇಳಿದ್ದಕ್ಕಾಗಿ ಐಪಿಸಿ ಸೆಕ್ಷನ್ 109 (ಅಪರಾಧ ಶಿಕ್ಷೆ) ಮತ್ತು 124 ಎ (ದೇಶದ್ರೋಹ) ಸೆಕ್ಷನ್ ಅಡಿಯಲ್ಲಿ ಅಪರಾಧಗಳನ್ನು ಮಾಡಿದ್ದಾರೆ ಎಂದು ಬಿಜೆಪಿ ಹೇಳಿದೆ.
“ಕಾಂಗ್ರೆಸ್ ನಾಯಕರು ಪ್ರಸ್ತುತ ಪರಿಸ್ಥಿತಿಯನ್ನು ಸ್ವಾತಂತ್ರ್ಯ ಪೂರ್ವ ಬ್ರಿಟಿಷ್ ಆಳ್ವಿಕೆಗೆ ಹೋಲಿಸಿದ್ದಾರೆ. ಅಲ್ಲದೆಮ ಯುವಜನರನ್ನು ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಪ್ರಚೋದಿಸಿದ್ದಾರೆ. ಇದು ದ್ವೇಷವನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದೆ” ಎಂದು ಬಿಜೆಪಿ ಆರೋಪಿಸಿದೆ.
ಒಂದು ಪ್ರಶ್ನೆಗೆ ಉತ್ತರಿಸುವಾಗ ಗಾಂಧಿ, “ದೇಶದಲ್ಲಿ ಸಾಕಷ್ಟು ದ್ವೇಷವನ್ನು ಹರಡಲಾಗುತ್ತಿದೆ. ಬಹಳಷ್ಟು ಭಯವಿದೆ. ಅದರ ವಿರುದ್ಧ ನಾವು ಹೋರಾಡಬೇಕಾಗಿದೆ. ನಾವು ವಿಭಜನೆ, ದ್ವೇಷ, ಭಯದ ವಿರುದ್ಧ ಹೋರಾಡಬೇಕು ಮತ್ತು ಮತ್ತೊಮ್ಮೆ ಭಾರತವನ್ನು ಸಂತೋಷ, ಆರಾಮದಾಯಕ, ನಿರ್ಭೀತ ಮತ್ತು ಒಗ್ಗಟ್ಟಿನಿಂದ ಕಟ್ಟಬೇಕು” ಎಂದು ಹೇಳಿರುವುದಾಗಿ ಬಿಜೆಪಿ ತನ್ನ ದೂರು ಪತ್ರದಲ್ಲಿ ಹೇಳಿದೆ.
ಅವರ ಹೇಳಿಕೆಯು ಐಪಿಸಿಯ ಸೆಕ್ಷನ್ 124 ಎ ಅನ್ನು ಉಲ್ಲಂಘಿಸುತ್ತದೆ ಎಂದು ಬಾಲಚಂದ್ರನ್ ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡು: ಚುನಾವಣೆಗೂ ಮುನ್ನವೇ ಮೈತ್ರಿಯಲ್ಲಿ ಬಿಕ್ಕಟ್ಟು; DMK ವಿರುದ್ಧ ಸಿಟ್ಟಾದ ಕಾಂಗ್ರೆಸ್!

