‘ರಮೇಶ್ ಮುಖದಲ್ಲಿ ಮಚ್ಚೆ ಇದೆ ಆದರೆ ವಿಡಿಯೋದಲ್ಲಿ ಮಚ್ಚೆ ಇಲ್ಲ’ – ಮಹೇಶ್ ಕುಮಟಳ್ಳಿ
ರಮೇಶ್ ಜಾರಕಿಹೊಳಿ ವಿಡಿಯೋದಲ್ಲಿ ರಮೇಶ್ ಮುಖದಲ್ಲಿ ಮಚ್ಚೆ ಇಲ್ಲ. ವಿಡಿಯೋ ನೋಡಿದರೆ ಬಲತ್ಕಾರ ಅನಿಸುತ್ತಿಲ್ಲ. ಇದು ಪ್ರೀ ಪ್ಲ್ಯಾನ್ಡ್ ಅಂತ ಅನಿಸುತ್ತಿದೆ ಎಂದು ಶಾಸಕ ಮಹೇಶ್ ಕುಮುಟಳ್ಳಿ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವ ನಗರದಲ್ಲಿರುವ ರಮೇಶ್ ಮನೆಗೆ ಭೇಟಿ ನೀಡಿದ ಮಹೇಶ್ ಕುಮಟಳ್ಳಿ ರಮೇಶ್ ಮನೆಯವರೊಂದಿಗೆ ಮಾತನಾಡಿದ್ದಾರೆ. ಬಳಿಕ ಮಾದ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ರಮೇಶ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಹೌದು… ರಮೇಶ್ ಜಾರಕಿಹೊಳಿ ರಾಸಲೀಲೆ ಬಿಡುಗಡೆಯಾಗುತ್ತಿದ್ದಂತೆ ಕೆಲವರು ಮೌನವಾದ್ರೆ ಇನ್ನೂ ಕೆಲವರು ವೀಡಿಯೋದಲ್ಲಿರುವ ವ್ಯಕ್ತಿ ರಮೇಶ್ ಜಾರಕಿಹೊಳಿ ಅಲ್ಲ ಎನ್ನುವ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹೀಗಾಗಿ ಸಿಡಿ ಸಿಬಿಐ ತನಿಖೆಗೆ ಒಳಪಡಿಸಬೇಕು. ತನಿಖೆ ಮುಗಿರುವವರೆಗೂ ರಮೇಶ್ ಜಾರಕಿಹೊಳಿ ಖಾತೆಯನ್ನು ಯಾರಿಗೂ ನೀಡಬಾರದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಇದರ ಮಧ್ಯೆ ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಮಹೇಶ್ ಕುಮಟಳ್ಳಿ, “ಯಾರೋ ಹನಿಟ್ರ್ಯಾಕ್ ಮಾಡಿಸಿದ್ದಾರೆ ಎಂದಿದ್ದಾರೆ. ರಮೇಶ್ ಮುಖದಲ್ಲಿ ಮಚ್ಚೆ ಇದೆ. ಆದರೆ ವಿಡಿಯೋದಲ್ಲಿ ಇಲ್ಲ. ಇದು ಬಲವಂತದಿಂದ ನಡೆದಿಲ್ಲ. ಆ ಯುವತಿ ಕೂಡ ಬಹಳ ಸಲಿಗೆಯಿಂದ ಇದ್ದಾಳೆ. ಇದನ್ನ ನೋಡಿದರೆ ಏನ್ ಹೇಳಬೇಕು ಎಂದು ತಿಳಿಯುತ್ತಿಲ್ಲ. ಅಂದರೆ ಅದು ಎಡಿಟ್ ಆಗಿದೆ ಅಂತಲೇ ಅರ್ಥ. ತನಿಖೆ ಆದರೆ ಸತ್ಯ ತಿಳಿಯುತ್ತದೆ. ಆದರೆ ಅವರ ನೋವಿಗೆ ಯಾರು ಬೆಲೆ ಕಟ್ಟುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

