ಕೇರಳ: ಚುನಾವಣಾ ಆಯೋಗದ ನಿರ್ದೇಶನಕ್ಕೆ ತಡೆ; ವಿಶೇಷ ಅಕ್ಕಿ ವಿತರಣೆಗೆ ಹೈಕೋರ್ಟ್‌ ಅನುಮತಿ!

ಕೇರಳದಲ್ಲಿ ಪಡಿತರದಾರರಿಗೆ ಅಕ್ಕಿ ವಿತರಣೆ ಮಾಡುವ ಸರ್ಕಾರದ ವಿಶೇಷ ಯೋಜನೆಗೆ ತಡೆಯೊಡ್ಡಿದ್ದ ಚುನಾವಣಾ ಆಯೋಗದ ನಿರ್ದೇಶನವನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದ್ದು, ಅಕ್ಕಿ ವಿತರಣೆ ಮಾಡಲು ಅನುಮತಿ ನೀಡಿ ಆದೇಶ ಹೊರಡಿಸಿದೆ.

ಈಸ್ಟರ್-ವಿಶು-ರಮಜಾನ್ ಸಮಯದಲ್ಲಿ ನೀಲಿ ಮತ್ತು ಬಿಳಿ ಪಡಿತರ ಚೀಟಿದಾರರಿಗೆ ನಿಗದಿತ ಅಕ್ಕಿಗಿಂತ 10 ಕೆಜಿ ಹೆಚ್ಚು ಅಕ್ಕಿ ವಿತರಿಸಲು ಪಿಣರಾಯಿ ವಿಜಯನ್‌ ನೇತೃತ್ವದ  ರಾಜ್ಯ ಸರ್ಕಾರದ ಯೋಜನೆಯನ್ನು ಜಾರಿಗೊಳಿಸಿತ್ತು. ಯೋಜನೆಯ ಅಡಿಯಲ್ಲಿ ಪಡಿತರದಾರರಿಗೆ ಎಂದಿನ ರೇಷನ್​ನೊಂದಿಗೆ 10 ಕೆಜಿ ಹೆಚ್ಚು ಅಕ್ಕಿಯನ್ನು 15 ರೂಪಾಯಿ ದರದಲ್ಲಿ ವಿತರಿಸಲು ಸರ್ಕಾರ ಸಿದ್ದವಾಗಿತ್ತು.

ಆದರೆ, ಮುಂದಿನ ತಿಂಗಳು ಕೇರಳದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಈ ಯೋಜನೆಯನ್ನು ಜಾರಿಗೊಳಿಸುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆ ಎಂದು ಇತರ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು. ಹೀಗಾಗಿ, ಆಯೋಗವು ಉದ್ದೇಶಿಕ ಅಕ್ಕಿ ವಿತರಣೆಯನ್ನು ನಿಲ್ಲಿಸುವಂತೆ ತಡೆ ನೀಡಿತ್ತು.

ಆಯೋಗದ ನಿರ್ದೇಶನವನ್ನು ಸರ್ಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಈ ಯೋಜನೆಯಲ್ಲಿ ಫೆಬ್ರವರಿ 04ರಂದು ನಡೆದ ಬಜೆಟ್‌ ಅಧಿವೇಶನದಲ್ಲಿ ಘೋಷಿಸಲಾಗಿತ್ತು. ಇದಕ್ಕಾಗಿ ಈಗಾಗಲೇ 83.34 ಕೋಟಿ ರೂ ವ್ಯಯ ಮಾಡಿ ಅಕ್ಕಿ ಖರೀದಿಸಲಾಗಿದೆ. ಇದು ಚುನಾವಣೆ ಘೋಷಣೆಗೂ ಮುನ್ನವೇ ಜಾರಿಗೊಳಿಸಲಾಗಿತ್ತು. ಹಾಗಾಗಿ ಇದು ಹೊಸ ಕಾರ್ಯಕ್ರಮವಲ್ಲ, ಇದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲ ಎಂದು ವಾದಿಸಿತ್ತು.

ಸರ್ಕಾರದ ಅರ್ಜಿಯನ್ನು ವಿಚಾರಣೆ ನಡೆಸಿರುವ ಹೈಕೋರ್ಟ್‌ ನ್ಯಾಯಮೂರ್ತಿ ಪಿ.ವಿ ಆಶಾ ಅವರ ನ್ಯಾಯಪೀಠವು, ಸರ್ಕಾರದ ವಾದವನ್ನು ಎತ್ತಿಹಿಡಿದಿದ್ದು, ಆಯೋಗದ ತಡೆಯಾಜ್ಷೆಯನ್ನು ರದ್ದುಮಾಡಿದೆ. ಅಲ್ಲದೆ, ಆಡಳಿತಾರೂಢ ಪಕ್ಷವು ಚುನಾವಣೆಯ ಸಂದರ್ಭದಲ್ಲಿ ಈ ಯೋಜನೆಯು ತಮ್ಮದೆಂದು ಹೇಳಿಕೊಂಡು ಚುನಾವಣಾ ಪ್ರಯೋಜನೆ ಪಡೆದುಕೊಳ್ಳಲು ಬಳಸಿಕೊಳ್ಳುವಂತಿಲ್ಲ ಎಂದು ಸರ್ಕಾರದ ಸೂಚಿಸಿದೆ.

ಇದನ್ನೂ ಓದಿ: ಚುನಾವಣಾ ಸಮೀಕ್ಷೆ: ಕೇರಳದಲ್ಲಿ ಮತ್ತೆ ಪಿಣರಾಯಿ ವಿಜಯನ್‌ಗೆ ಅಧಿಕಾರ; NDAಗೆ 2 ಸ್ಥಾನ ಮಾತ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights