ನೈತಿಕ ಪೊಲೀಸ್‌ಗಿರಿ: ಅನ್ಯ ಧರ್ಮದ ಸ್ನೇಹಿತೆ ಜೊತೆ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವಕನಿಗೆ ಇರಿದ ಭಜರಂಗಿಗಳು!

ಅನ್ಯ ಧರ್ಮದ ಗೆಳತಿಯ ಜೊತೆ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವಕನ ಮೇಲೆ ಭಜರಂಗದಳದ ಪುಂಡರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ನಾಲ್ವರು ಭಜರಂಗ ದಳದ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಸಹಪಾಠಿಗಳಾಗಿದ್ದ ವ್ಯಕ್ತಿ ಅಸ್ವಿಡ್ ಅನ್ಸಾರ್ ಮೊಹಮ್ಮದ್ ಮತ್ತು ಆತನ ಸ್ನೇಹಿತ ಅಶ್ವಿನಿ ಶಾನುಭಾಗ್ ಅವರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೊರಟಿದ್ದರು. ಖಾಸಗೀ ಬಸ್‌ನಲ್ಲಿ ಪ್ರಯಾಣಿಸುದ್ದ ವೇಳೆ ಬಸ್‌ಅನ್ನು ತಡೆದ ಭಜರಂಗದ ದಳದ ಸದಸ್ಯರ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಆತನಿಗೆ ಇರಿದಿದ್ದಾರೆ. ಅಲ್ಲದೆ, ಯುವತಿಯೂ ಕೂಡ ಗಾಯಗೊಂಡಿದ್ದಾಳೆ ಎಂದು  ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಅವರು ವಿವರಿಸಿದ್ದಾರೆ.

ಪ್ರಕರಣವನ್ನು ದಾಖಲಿಸಿಕೊಂಡಿರುವ ಆಯುಕ್ತರು, ನಾಲ್ಕು ತಂಡಗಳನ್ನು ರಚಿಸಿದ್ದು, ಶುಕ್ರವಾರ ಸಂಜೆ ವೇಳೆಗೆ ನಾಲ್ಕು ಜನರನ್ನು ಬಂಧಿಸಿದ್ದಾರೆ. ಅತ್ತಾವರದ ಬಾಲಚಂದ್ರ (28), ಕಂದುಕಾದ ಧನುಷ್ ಭಂಡರಿ (25), ಶಕ್ತಿನಗರದ ಜಯಪ್ರಶಾಂತ್ (27) ಮತ್ತು ಉರ್ವಾ ಮೂಲದ ಅನಿಲ್ ಕುಮಾರ್ (38) ಬಂಧಿತರು. ಅವರಲ್ಲಿ ಧನುಷ್ ಈಗಾಗಲೇ ನಾಲ್ಕು ಕೊಲೆ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಆತನನ್ನು ರೌಡಿ ಶೀಟರ್ ಪಟ್ಟಿಯಲ್ಲಿ ಸೇರಿಸಲಾಗಿದೆ.

ಆರೋಪಿಗಳ ವಿರುದ್ಧ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. “ಕಳೆದ ಮೂರು ತಿಂಗಳಲ್ಲಿ, ಇಂತಹ 4 ಪ್ರಕರಣಗಳು ನಡೆದಿವೆ. ಇವರಿಬ್ಬರ ಮೇಲೆ ಹಲ್ಲೆ ನಡೆಸಲು ಯಾರು ಪ್ರೇರೇಪಿಸಿದರು ಎಂದು ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಆಯುಕ್ತರು ತಿಳಿಸಿದ್ದಾರೆ.

“ಪದವೀಧರಳಾಗಿರುವ ಯುವತಿ ತಾನು ಬೆಂಗಳೂರಿನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಉದ್ಯೋಗವನ್ನು ಹುಡುಕುತ್ತಿದ್ದೇನೆ ಎಂದು ಹೇಳಿದ್ದಾಳೆ. ಆದ್ದರಿಂದ ತನ್ನ ಸ್ನೇಹಿತನನ್ನು ತನ್ನೊಂದಿಗೆ ಬರಲು ಕೇಳಿಕೊಂಡಿದ್ದಾಳೆ. ಯುವತಿಯ ಬಗ್ಗೆ ತಿಳಿಸಿದ್ದ ದಾಳಿಕೋರರು ಇಬ್ಬರನ್ನೂ ಒಟ್ಟಿಗೆ ನೋಡಿದ್ದಾರೆ. ಹೀಗಾಗಿ ಅವರ ಮೇಲೆ ದಾಳಿ ನಡೆಸಿದ್ದಾರೆ. ನಾವು ದಾಳಿಕೋರರನ್ನು ಗುರುತಿಸಲು ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು, ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷವಾಗಿ ಪ್ರವಾಸಿ ತಾಣಗಳು, ಕಡಲತೀರಗಳು ಮತ್ತು ಬಸ್ ನಿಲ್ದಾಣಗಳಲ್ಲಿ ನಿಯೋಜಿಸಲಾಗುವುದು. “ಸಂಜೆ ಮತ್ತು ರಾತ್ರಿ ತಡವಾಗಿ ಪ್ರಯಾಣಿಸುವ ಜನರ ಸುರಕ್ಷತೆಗಾಗಿ ಪೊಲೀಸ್ ಗಸ್ತು ಮತ್ತು ಅಬ್ಬಕ್ಕಾ ತಂಡವು ಜಾಗರೂಕರಾಗಿರುತ್ತವೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಜಾರಕಿಹೊಳಿ ಪ್ರಕರಣ: ಅತ್ಯಾಚಾರ ಸಂತ್ರಸ್ತೆಯ ಪರ ವಕೀಲ ಜಗದೀಶ್‌ ವಿರುದ್ಧವೇ ದೂರು ನೀಡಿದ ಎಸ್‌ಐಟಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights