ನನಗೆ BJP ಲೆಕ್ಕಕ್ಕಿಲ್ಲ; ನನ್ನ ಸ್ಪರ್ಧೆ ಕಾಂಗ್ರೆಸ್ನೊಂದಿಗೆ ಮಾತ್ರ: ಮಲ್ಲಿಕಾರ್ಜುನ ಖೂಬಾ
ಬಸವ ಕಲ್ಯಾಣ ವಿಧಾನಸಭಾ ಉಪಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಟಿಕೆಟ್ ಸಿಗದ ಕಾರಣದಿಂದಾಗಿ ಬಿಜೆಪಿ ವಿರುದ್ದ ಬಂಡಾಯ ಎದ್ದಿದ್ದಾರೆ. ಅಲ್ಲದೆ, ಅದೇ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ.
ಏಪ್ರಿಲ್ 17ರಂದು ಚುನಾವಣೆ ನಡೆಯಲಿದ್ದು, ಖೂಬಾ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಅವರು, ನನಗೆ ಬಿಜೆಪಿ ಲೆಕ್ಕಕ್ಕಿಲ್ಲ. ನನ್ನ ಸ್ಪರ್ಧೆ ಏನಿದ್ದರೂ ಕಾಂಗ್ರೆಸ್ನೊಂದಿಗೆ ಮಾತ್ರ ಎಂದು ಅವರು ಹೇಳಿದ್ದಾರೆ.
ನಾನು ಎರಡು ಸಲ ಶಾಸಕನಾಗಿದ್ದೇನೆ. ಯಡಿಯೂರಪ್ಪ ಅವರನ್ನು ಬೆಂಬಲಿಸಿ, ಅವರು ಮುಖ್ಯಮಂತ್ರಿ ಆಗಬೇಕು ಎಂದ ಸದುದ್ದೇಶದಿಂದ ಬಿಜೆಪಿಗೆ ಸೇರಿದ್ದೇನೆ. ಕಳೆದ ಸಲ ಬಿಜೆಪಿಯಿಂದಲೇ ಸೋತೆ. ಆದರೂ, ಈ ಸಲ ನನಗೆ ಟಿಕೆಟ್ ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಕ್ಷೇತ್ರದ ಹೊರಗಿನವರಿಗೆ ಕಣಕ್ಕೆ ಇಳಿಸಿದ್ದರಿಂದ ಆ ಪಕ್ಷದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸ್ಥಳೀಯ ಸ್ವಾಭಿಮಾನಿ ಬಳಗದಿಂದ ನನಗೆ ಬೆಂಬಲ ದೊರಕುತ್ತಿದೆ. ಅಲ್ಲದೇ, ಎಲ್ಲ ಸಮುದಾಯಗಳ ಮತದಾರರು ನನ್ನನ್ನು ಬೆಂಬಲಿಸುತ್ತಿದ್ದಾರೆ. ಹೀಗಾಗಿ ಕೆಲ ದಿನಗಳಲ್ಲಿಯೇ ಕ್ಷೇತ್ರದ ಚಿತ್ರಣ ಬದಲಾಗಿದ್ದು, ಬಿಜೆಪಿಯವರಿಗೆ ಇದು ನುಂಗಲಾರದ ತುತ್ತಾಗಿದೆ’ ಎಂದರು.
‘ಗ್ರಾಮೀಣ ಭಾಗದಲ್ಲಿ ಒಂದು ಸುತ್ತಿನ ಪ್ರಚಾರ ನಡೆಸಿದ್ದು ಈಗ ನನಗೆ ದೊರೆತ ಚುನಾವಣಾ ಚಿಹ್ನೆ ನೇಗಿಲು (ಟಿಲ್ಲರ್) ನೊಂದಿಗೆ ಪ್ರಚಾರ ನಡೆಸಲಿದ್ದೇನೆ. ನನಗೆ ಓಟು ನೀಡುವ ಭರವಸೆಯ ಜತೆಗೆ ಜನರು ಖರ್ಚಿಗೆ ನೋಟು ಕೂಡ ಕೊಟ್ಟು ಪ್ರೋತ್ಸಾಹಿಸು ತ್ತಿದ್ದಾರೆ’ ಎಂದು ಹೇಳಿದರು.
ಇದನ್ನೂ ಓದಿ: ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ಸಿಬ್ಬಂದಿಗೆ ರಕ್ಷಣೆ’ – ಗೃಹ ಸಚಿವ ಬಸವರಾಜ ಬೊಮ್ಮಾಯಿ

