ಮಾಜಿ ಸಿಎಂ ಕುಮಾರಸ್ವಾಮಿಗೆ ಕೊರೊನಾ; ಬೆಡ್ ಇಲ್ಲಾ ಎಂದ ಮಣಿಪಾಲ್ ಆಸ್ಪತ್ರೆ!
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕೊರೋನಾ ಸೋಂಕು ತಗಲಿದೆ. ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಮುಂದಾಗಿದ್ದರು. ಆದರೆ, ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ ಎಂದು ಆಸ್ಪತ್ರೆ ಹೇಳಿರುವುದಾಗಿ ತಿಳಿದು ಬಂದಿದೆ.
ಕುಮಾರಸ್ವಾಮಿಯಂತಹ ಪ್ರಭಾವಿ ನಾಯಕರಿಗೇ ಈ ಸ್ಥಿತಿ ಬಂದಿರುವಾಗ ಸೋಂಕು ತಗಲಿರುವ ಸಾಮಾನ್ಯ ಜನ ಚಿಕಿತ್ಸೆಗಾಗಿ ಬೆಡ್ ಪಡೆಯಲು ಏನು ಮಾಡಬೇಕು? ಎಂಬ ಆತಂಕದ ಮಾತುಗಳು ಕೇಳಿ ಬರುತ್ತಿವೆ.
ಅಂದ ಹಾಗೆ ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕೆ ಹೋಗಿದ್ದ ಕುಮಾರಸ್ವಾಮಿ ಅವರಿಗೆ ಶುಕ್ರವಾರ ಸಂಜೆಯೇ ದಣಿವು ಕಾಣಿಸಿಕೊಂಡಿತ್ತು. ಆದ್ದರಿಂದ ಬೆಂಗಳೂರಿಗೆ ಮರಳಿದ ಅವರುಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ತಮ್ಮ ತೋಟದ ಮನೆಯಲ್ಲಿ ಕ್ವಾರಂಟೈನ್ ಆಗುವುದಾಗಿ ಹೆಚ್ಡಿಕೆ ತಿಳಿಸಿದ್ದರು. ಆದರೆ, ವೈದ್ಯರು ಅದಕ್ಕೆ ಅನುಮತಿಸದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರುವುದಾಗಿ ತಿಳಿಸಿದ್ದರು.
ಮಣಿಪಾಲ್ ಆಸ್ಪತ್ರೆ ಸೇರಲು ನಿರ್ಧರಿಸಿದ ಅವರು ಆಸ್ಪತ್ರೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಅಸ್ಪತ್ರೆಯಲ್ಲಿ ಬೆಡ್ ಇಲ್ಲ ಎಂಬ ಉತ್ತರ ಸಿಕ್ಕಿದೆ. ಈ ಮಧ್ಯೆ ವಿಷಯ ತಿಳಿದ ಕೂಡಲೇ ಆರೋಗ್ಯ ಸಚಿವ ಸುಧಾಕರ್ ಅವರು ಕುಮಾರಸ್ವಾಮಿ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ದೊರಕಿಸಿಕೊಡಲು ಯತ್ನಿಸಿದ್ದಾರಾದರೂ ಬೆಡ್ ಕೊಡಿಸುವಲ್ಲಿ ವಿಫಲರಾಗಿದ್ದಾರೆ.
ಹೀಗಾಗಿ ಹೆಚ್ಡಿಕೆಗೆ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ದೊರೆತಿದೆ. ಅದರೆ, ಅವರು ಆಸ್ಪತ್ರೆಗೆ ಇನ್ನು ತೆರಳಿಲ್ಲ. ಮುಖ್ಯವಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅವರು ಕೋರ್ಟ್ನಲ್ಲಿ ಹಾಜರಾಗಬೇಕಿದೆ ಎಂದು ಹೇಳಲಾಗಿದೆ. ಆದರೆ, ಕೊರೊನಾ ದೃಢಪಟ್ಟಿರುವುದರಿಂದಾಗಿ ಅವರು ಕೋರ್ಟ್ಗೆ ಹೋಗುವಂತಿಲ್ಲವಾದ್ದರಿಂದ ವಿಡಿಯೋ ಕಾನ್ಫರೆನ್ಸ್ನಲ್ಲಿ ಹಾಜರಾಗಿ, ನಂತರ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಮೋದಿ ತವರು ಗುಜರಾತ್ನಲ್ಲಿ ಕೊರೊನಾ ಆಕ್ರಮಣ: ಒಂದೇ ದಿನ 8,920 ಪ್ರಕರಣ – 94 ಸಾವು!

