ಮಗನ ಔಷಧಿಗಾಗಿ 300ಕಿ.ಮೀ ಸೈಕಲ್ ತುಳಿದ ಸಾಹಸಿ ತಂದೆ..!

ಕೊರೊನಾ ಸಮಯದಲ್ಲಿ ಅಧಿಕ ಜನ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದಿನಕ್ಕೊಂದು ಸಂಕಷ್ಟದ ಕಥೆಗಳು ನಾನಾ ಮೂಲೆಯಿಂದ ಬರುತ್ತಲೇ ಇವೆ. ಇವುಗಳ ಮಧ್ಯೆ ಕೆಲ ಸಾಹಸದ ಕಥೆಗಳೂ ಹೊರಬಂದಿವೆ. ಕೊರೊನಾ ಸಂಕಷ್ಟದಲ್ಲಿ ಮಗನಿಗೆ ಮಾತ್ರೆ ತರಲು 300 ಕಿ.ಮೀ ಸೈಕಲ್ ತುಳಿದ ಸಾಹಸಿ ಅಪ್ಪನ ಕಥೆ ಇದು.

ಆನಂದ್ (45) ಎಂಬಾತ ವಿಶೇಷ ಚೇತನ ಮಗ ಭೈರೇಶ್ ಗಾಗಿ ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲೂಕಿನ ಗಾಣಿಗನ ಕೊಪ್ಪಲು ಗ್ರಾಮದಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹೋಗಿ ಔಷಧ ತೆಗೆದುಕೊಂಡು ಪುನಃ ಗ್ರಾಮಕ್ಕೆ ಸೈಕಲ್ ನಲ್ಲಿ ವಾಪಸ್ಸಾಗಿದ್ದಾರೆ.

ಗಾರೆ ಕೆಲಸ ಮಾಡಿ ಕುಟುಂಬವನ್ನು ನಡೆಸುತ್ತಿರುವ ಆನಂದ್ ಅವರ ಮಗ ಹುಟ್ಟಿದ 6 ತಿಂಗಳಿನಲ್ಲೇ ಮಾನಸಿಕ ವಿಶೇಷ ಚೇತನವಾಗಿದೆ. ಕಳೆದ 10 ವರ್ಷಗಳಿಂದ ಭೈರೇಶ್​​ಗೆ ಬೆಂಗಳೂರಿನ ನಿಮಾನ್ಸ್​​ನಲ್ಲಿ‌ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದ್ದು, ಔಷಧದಿಂದಲೇ ಮಗನ ಆರೋಗ್ಯ ಸುಧಾರಿಸುತ್ತಿದೆ.

ಔಷಧ ಇಲ್ಲದ ಮಗನ ಆರೋಗ್ಯದಲ್ಲಿ ಏರುಪೇರು ಆಗುವುದರಿಂದ ಆನಂದ್ ಪ್ರತೀ ಬಾರಿ ಎರಡು ತಿಂಗಳಿಗಾಗುವಷ್ಟು ಔಷಧವನ್ನು ಖರೀದಿ ಮಾಡಿ ತರುತ್ತಿದ್ದರು. ಆದರೆ ಈ ಬಾರಿ ಸತತವಾಗಿ ಲಾಕ್ ಡೌನ್ ಇರುವುದರಿಂದ ಔಷಧ ತರಲು ಸಾಧ್ಯವಾಗಿಲ್ಲ. ಹೀಗಾಗಿ ಔಷಧ ಖಾಲಿಯಾಗುತ್ತಿದ್ದಂತೆ ನೆರೆಹೊರೆ, ಸಂಬಂಧಿಕರಿಗೆ ಔಷಧ ತರಲು ವಾಹನ ನೀಡಲು ಕೇಳಿಕೊಂಡಿದ್ದಾನೆ. ಆದರೆ ಯಾರೂ ಕೂಡ ಆತನ ಸಹಾಯಕ್ಕೆ ಮುಂದಾಗಿಲ್ಲ. ಹೀಗಾಗಿ ತನ್ನ ಹಳೆಯ ಸೈಕಲ್ ತೆಗೆದುಕೊಂಡು 300 ಕಿ.ಮೀ ಕ್ರಮಿಸಿ ಔಷಧಿ ಖರೀದಿಸಿ ಮತ್ತೆ ಗ್ರಾಮಕ್ಕೆ ವಾಪಸ್ಸಾಗಿದ್ದಾರೆ.

ಮೇ 23ರಂದು ಬನ್ನೂರು, ಮಳವಳ್ಳಿ, ಕನಕಪುರ ಮಾರ್ಗದ ಮೂಲಕ ಹೊರಟಿದ್ದಾರೆ. ಮಾರ್ಗದ ಮಧ್ಯೆ ಲಾಕ್‌ಡೌನ್ ಇರುವ ಪರಿಣಾಮ ಪೊಲೀಸರ ಲಾಠಿ‌ ಏಟು ಸಹ ಬಿದ್ದರೂ ಇದ್ಯಾವುದಕ್ಕೂ ಜಗ್ಗದೇ ತನ್ನ ಮಗನಿಗಾಗಿ ಹಗಲು ರಾತ್ರಿಯನ್ನದೆ ಸೈಕಲ್ ನಲ್ಲಿಯೇ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯನ್ನು ತಲುಪಿದ್ದಾರೆ.

ಗ್ರಾಮದಿಂದ ಸೈಕಲ್ ನಲ್ಲಿಯೇ ಬಂದಿರುವುದನ್ನು ತಿಳಿದ ವೈದ್ಯರು ಆನಂದ್​​ಗೆ ಔಷಧದ ಜೊತೆಗೆ ಡಾಕ್ಟರ್ ಟೋನಿ 1000.ರೂ ಕೊಟ್ಟು ಜೋಪಾನವಾಗಿ ತನ್ನ ಗ್ರಾಮಕ್ಕೆ ಹೋಗುವಂತೆ ಸೂಚಿಸಿದ್ದಾರೆ. ಅದರಂತೆ ಮೇ 25ಕ್ಕೆ ಬೆಂಗಳೂರಿನಿಂದ ಹೊರಟು ಮೇ 26ರ ಸಂಜೆ ತನ್ನ ಗ್ರಾಮಕ್ಕೆ ಹಿಂತಿರುಗಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಸಾಮಾನ್ಯ ಮಕ್ಕಳನ್ನು ನೋಡಿಕೊಳ್ಳುವ ಕಷ್ಟದ ದಿನಗಳಲ್ಲಿ ವಿಶೇಷ ಚೇತನ ಮಗನನ್ನು ನೋಡಿಕೊಳ್ಳುವುದು ಅಂದರೆ ನಿಜಕ್ಕೂ ಅದು ಸಾಮಾನ್ಯವಾದ ವಿಷಯವಲ್ಲ. ಇನ್ನೂ ಈ ಮಗುವಿಗಾಗಿ 300 ಕಿ.ಮೀ ಸೈಕಲ್ ತುಳಿದು ಔಷಧ ಖರೀದಿಸಿ ತಂದ ಈ ಸಾಹಸಿ ತಂದೆ ಎಲ್ಲರಿಗೂ ಮಾದರಿಯಾಗಿದ್ದಾರೆ. ಇಂತಹ ತಂದೆಗೆ ನಮ್ಮದೂ ಒಂದು ಸೆಲ್ಯೂಟ್..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights