Fact Check: ಅಯೋಧ್ಯೆ ರಾಮಮಂದಿರದ ದೃಶ್ಯಗಳನ್ನು ಇಸ್ರೇಲ್‌ನಲ್ಲಿ ಪ್ರದರ್ಶಿಸಲಾಗಿತ್ತೆ??

ಅಯೋಧ್ಯೆ ರಾಮಮಂದಿರದ ದೃಶ್ಯಗಳನ್ನು ಪ್ರದರ್ಶಿಸುವ ಜಾಹೀರಾತು ಫಲಕಗಳನ್ನು ಹೊಂದಿರುವ ಟ್ರಕ್‌ ನ ವಿಡಿಯೋವನ್ನು ಇಸ್ರೇಲ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಇಸ್ರೇಲ್‌ ನಲ್ಲಿ ಟ್ರಕ್ ಮೇಲೆ ಅಯೋಧ್ಯ ರಾಮಮಂದಿರದ ಫಲಕಗಳನ್ನು ಹೊಂದಿರುವ ವಿಡಿಯೋ.

ನಿಜಾಂಶ: ಈ ವಿಡಿಯೋ ಇಸ್ರೇಲ್‌ ನದ್ದಲ್ಲ, ಬದಲಿಗೆ ಸಿಡ್ನಿ(ಆಸ್ಟ್ರೇಲಿಯಾ)ಯದ್ದು. ಸಿಡ್ನಿಯ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಆದ್ದರಿಂದ ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವಿಡಿಯೋದ ಸ್ಕ್ರೀನ್‌ ಶಾಟ್‌ ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ, ಯಾವುದೇ ಫಲಿತಾಂಶಗಳು ಕಂಡುಬಂದಿಲ್ಲ. ಆದ್ದರಿಂದ, ಯಾವುದಾದರೂ ವಿದೇಶದಲ್ಲಿ ಅಂತಹ ಜಾಹೀರಾತು ಫಲಕಗಳನ್ನು ಪ್ರದರ್ಶಿಸಲಾಗಿದೆಯೇ ಎಂದು ಹುಡುಕಿದಾಗ, ಎರಡು ಫಲಿತಾಂಶಗಳು ಕಂಡುಬಂದಿವೆ. ಒಂದು ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ಮತ್ತು ಇನ್ನೊಂದು ಸಿಡ್ನಿಯ ಬ್ಲ್ಯಾಕ್‌ ಟೌನ್ ಸಿಟಿ ಕೌನ್ಸಿಲ್‌ನಲ್ಲಿ ಪ್ರದರ್ಶಿಸಲಾಗಿದೆ. ಪೋಸ್ಟ್‌ ಮಾಡಲಾದ ವಿಡಿಯೋದಲ್ಲಿರುವ ದೃಶ್ಯಗಳನ್ನು ಸಿಡ್ನಿ ವಿಡಿಯೋದಲ್ಲಿ ಕಾಣಬಹುದು. ಆದರೆ ಸಿಡ್ನಿ ವಿಡಿಯೋದಲ್ಲಿ ಯಾವುದೇ ಟ್ರಕ್ ಇಲ್ಲ.

ಸಿಡ್ನಿಯ ಜಾಹೀರಾತು ಫಲಕದ ಬಗ್ಗೆ ಇನ್ನಷ್ಟು ಹುಡುಕಿದಾಗ, ಜಾಹೀರಾತು ಫಲಕವನ್ನು ‘ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾ’ ಅಳವಡಿಸಿದೆ ಎಂದು ತಿಳಿದುಬಂದಿದೆ. ಆದ್ದರಿಂದ, ಅವರ ಫೇಸ್‌ಬುಕ್ ಪುಟವನ್ನು ನೋಡಿದಾಗ, ಸಿಡ್ನಿಯ ಬ್ಲ್ಯಾಕ್‌ ಟೌನ್ ಸಿಟಿ ಕೌನ್ಸಿಲ್‌ನಲ್ಲಿರುವ ಜಾಹೀರಾತು ಫಲಕದ ಅದೇ ವಿಡಿಯೋವನ್ನು ಅವರ ಪೇಜ್‌ನಲ್ಲಿ ನೋಡಬಹುದು. ಅಲ್ಲದೆ, ಅವರ ಫೇಸ್‌ಬುಕ್ ಪುಟದ ಮತ್ತೊಂದು ವಿಡಿಯೋದಲ್ಲಿ, ವೈರಲ್‌ ಆಗುತ್ತಿರುವ ವಿಡಿಯೋದಲ್ಲಿರುವ ಟ್ರಕ್ ಅನ್ನು ನೋಡಬಹುದು. ಟ್ರಕ್‌ ನ ನಂಬರ್ ಪ್ಲೇಟ್ ಒಂದೆ ಆಗಿದ್ದು ಇತರ ಸಾಮ್ಯತೆಗಳನ್ನೂ ಕಾಣಬಹುದು.

ಸಿಡ್ನಿ ವಿಡಿಯೋದಲ್ಲಿ, ಸ್ವಾಮಿ ನಾರಾಯಣ ದೇವಸ್ಥಾನದಿಂದ ಟ್ರಕ್ ಚಾಲನೆ ಪ್ರಾರಂಭಿಸಿ ನಗರದಾದ್ಯಂತ ಹೋಗಿ ಹ್ಯಾರಿಸ್ ಪಾರ್ಕ್ ತಲುಪಿದೆ ಎಂದು ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾ’ ಫೇಸ್‌ಬುಕ್‌ ಪೇಜ್‌ನಲ್ಲಿ ಉಲ್ಲೇಖಿಸಿದ್ದಾರೆ. ಆದ್ದರಿಂದ, ನಾವು ಗೂಗಲ್ ಮ್ಯಾಪ್‌ನಲ್ಲಿ ನೋಡಿದಾಗ, ಪೋಸ್ಟ್ ಮಾಡಿದ ವಿಡಿಯೋದಲ್ಲಿರುವ ಅದೇ ಪಾರ್ಕಿಂಗ್ ಸ್ಥಳವನ್ನು BAPS ಶ್ರೀ ಸ್ವಾಮಿನಾರಾಯಣ ಮಂದಿರ ಕಟ್ಟಡದ ಹಿಂದೆ ಕಾಣಬಹುದು.

ಅಲ್ಲದೆ, ಗೂಗಲ್ ಮ್ಯಾಪ್‌ನಲ್ಲಿ ಅದೇ ಸ್ಥಳದ ಸ್ಟ್ರೀಟ್‌ ವ್ಯೂನಲ್ಲಿ, ಪೋಸ್ಟ್ ಮಾಡಿದ ವಿಡಿಯೋದಲ್ಲಿರುವ ಕಟ್ಟಡವನ್ನು ನೋಡಬಹುದು.

‘ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾ’ ಅನ್ನು ಸಂಪರ್ಕಿಸಲು ಪ್ರಯತ್ನಿಸಿತು. ನಾವು ಅವರ ಪ್ರತಿಕ್ರಿಯೆಯನ್ನು ಪಡೆದ ನಂತರ ಈ ಲೇಖನವನ್ನು ಅಪ್‌ಡೇಟ್ ಮಾಡುತ್ತೇವೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಯೋಧ್ಯೆ ರಾಮಮಂದಿರ ದೃಶ್ಯಗಳನ್ನು ಪ್ರದರ್ಶಿಸಿದ್ದ ಸಿಡ್ನಿಯಲ್ಲಿನ ಜಾಹೀರಾತು ಫಲಕಗಳನ್ನು ಹೊಂದಿರುವ ಟ್ರಕ್‌ನ ವಿಡಿಯೋವನ್ನು ಇಸ್ರೇಲ್‌ನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

– ಸೋಮಶೇಖರ್ ಚಲ್ಯ


ಇದನ್ನೂ ಓದಿ: Fact Check: ಮೇಲ್ಜಾತಿಯವರು ದಲಿತ ಯುವಕನನ್ನು ಹಿಂಸಿಸಿ ಮೂತ್ರ ಕುಡಿಸಿದ್ದು ಸತ್ಯವೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights