ಕಂಬಳದ ಉಸೇನ್ ಬೋಲ್ಟ್ ಶ್ರೀನಿವಾಸ ಗೌಡಗೆ ಶ್ರೀರಾಮ ಸೇನೆ ಕಾರ್ಯಕರ್ತನಿಂದ ಜೀವ ಬೆದರಿಕೆ!
ಕಂಬಳ ಓಟದಲ್ಲಿ ಹೊಸ ದಾಖಲೆ ಬರೆದು, ಕಂಬಳದ ಉಸೇನ್ ಬೋಲ್ಟ್ ಎಂದೇ ಕರೆಸಿಕೊಂಡಿರುವ, ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಮೂಡಬಿದರೆಯ ಅಶ್ವತ್ಥಪುರ ಶ್ರೀನಿವಾಸ ಗೌಡ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ.
ಶ್ರೀನಿವಾಸ್ ಅವರಿಗೆ ವ್ಯಕ್ತಿಯೊಬ್ಬರು ಕರೆ ಮಾಡಿ ನಿಂದಿಸಿದ್ದಾರೆ. ಅಲ್ಲದೆ, ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಫೋನ್ ಕರೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂಬಂಧ ಶ್ರೀನಿವಾಸ್ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕರೆ ಮಾಡಿ, ‘ನಾನು ಪ್ರಶಾಂತ್ ಬಂಗೇರ, ಶ್ರೀರಾಮ ಸೇನೆಯ ಕಾರ್ಯಕರ್ತ ಎಂದು ಪರಿಚಯಿಸಿಕೊಂಡಿರುವ ವ್ಯಕ್ತಿ, ನಿನಗೆ ಕಂಬಳದ ಇತಿಹಾಸ ತಿಳಿಸುತ್ತೇನೆ, ಮಂಗಳೂರು ಕಾರ್ ಸ್ಟ್ರೀಟ್‌ನಲ್ಲಿರುವ ನನ್ನ ರಿಯಲ್ ಎಸ್ಟೇಟ್ ಕಚೇರಿಗೆ ಬಾ ಎಂದು ಶ್ರೀನಿವಾಸ್ ಅವರನ್ನು ಕರೆದಿದ್ದಾನೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.
ನಾನು ಬರುವುದಿಲ್ಲ, ನೀವೇ ಒಂಟಿಕಟ್ಟೆಗೆ ಬನ್ನಿ’ ಎಂದು ಶ್ರೀನಿವಾಸ ಗೌಡ ಹೇಳಿದ್ದು, ನಾನು ಬರುತ್ತೇನೆ. ಆದರೆ. ನೀನು ಅಲ್ಲಿಗೆ ಬರುವಾಗ ಬೆನ್ನಿಗೆ ಹಾಳೆ ಕಟ್ಟಿಕೊಂಡು ಬಾ. ಜೊತೆಯಲ್ಲಿ ನಿನ್ನ ಬೆಂಬಲಿಗರನ್ನು ಕರೆದುಕೊಂಡು ಬಾ ಎಂದು ಪ್ರಶಾಂತ್ ಗದರಿಸಿದ್ದಾರೆ.
ಶ್ರೀನಿವಾಸ ಗೌಡ ಮತ್ತು ಪ್ರಶಾಂತ್ ಅವರ ಫೋನ್ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿಯನ್ನು ಶುಕ್ರವಾರ ಸಂಜೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿದ ಶಾಸಕ ಉಮಾನಾಥ ಕೋಟ್ಯಾನ್, ಇದು ತುಳುನಾಡಿಗೆ ಆಗಿರುವ ಅವಮಾನ, ಆರೋಪಿ ಪ್ರಶಾಂತ್ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಪೊಲೀಸರಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ.

