ಯಾವುದೇ ಚುನಾವಣೆ ಇಲ್ಲ; ಆದರೂ ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚಿಸುತ್ತೆವೆ ಎಂದು ಬಿಜೆಪಿ ಘೋಷಿಸಿದೆ!

ಜಮ್ಮು ಮತ್ತು ಕಾಶ್ಮೀರದಲ್ಲಿ ಸಧ್ಯ ಯಾವುದೇ ಚುನಾವಣೆಗಳು ನಡೆಯುವ ಸೂಚನೆಯಿಲ್ಲ. ಆದರೆ, ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮುಂದಿನ ಸರ್ಕಾರ ರಚಿಸುವುದಾಗಿ ಹೇಳಿಕೊಳ್ಳುತ್ತಿದೆ ಮತ್ತು ಮುಂದಿನ ಮುಖ್ಯಮಂತ್ರಿ ಬಿಜೆಪಿಯವರೇ ಆಗಿರಲಿದ್ದಾರೆ ಎಂದು ಪಕ್ಷ ಹೇಳಿದೆ.

“ಜೆ & ಕೆ ಯಲ್ಲಿ ಬಿಜೆಪಿ ಮುಂದಿನ ಸರ್ಕಾರವನ್ನು ರಚಿಸುತ್ತದೆ ಮತ್ತು ಜೆ & ಕೆಯ ಮುಂದಿನ ಮುಖ್ಯಮಂತ್ರಿ ಬಿಜೆಪಿಯಿಂದ ಬರಲಿದ್ದಾರೆ” ಎಂದು ಜೆ & ಕೆ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಘೋಷಿಸಿದ್ದಾರೆ.

ಈ ಗುರಿ ಸಾಧಿಸಲು ಬಿಜೆಪಿ ಕಾರ್ಯಕರ್ತರು ವ್ಯಾಪಕವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಬಿಜೆಪಿ ಕಾರ್ಯಕರ್ತರ ಪ್ರಾಮಾಣಿಕತೆಯನ್ನು ಬೇರೆ ಯಾವುದೇ ಪಕ್ಷಗಳು ಮಣಿಸಲಾರವು ಎಂದು ರೈನಾ ಹೇಳಿದ್ದಾರೆ.

ಜೂನ್ 2018 ರಲ್ಲಿ, ಬಿಜೆಪಿ ಪಕ್ಷವು ಕಾಶ್ಮೀರದ ಪಿಡಿಪಿಯೊಂದಿಗಿನ ಮೈತ್ರಿ ಸರ್ಕಾರದಿಂದ ಹಿಂದೆ ಸರಿಯಿತು. ಇದರಿಂದಾಗಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆಯನ್ನೂ ಹೇರಲಾಯಿತು.

ನಂತರ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷ ಮತ್ತು ಪಿಡಿಪಿಯಂತಹ  ಪ್ರಾದೇಶಕ ಪಕ್ಷಗಳು ಸರ್ಕಾರವನ್ನು ರಚಿಸಲು ಒಕ್ಕೂಟವನ್ನು ರಚಿಸುತ್ತಿವೆ ಎಂಬ ಊಹಾಪೋದ ನಡುವೆ 2018 ರ ನವೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ವಿಧಾನಸಭೆಯನ್ನು ಅಂದಿನ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ವಿಸರ್ಜಿಸಿದ್ದರು.

ನಂತರ ಆಗಸ್ಟ್ 5, 2019 ರಂದು ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು 370 ನೇ ವಿಧಿಯನ್ನು ರದ್ದುಪಡಿಸಿತು. ನಂತರ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿ ಕೆಳಮಟ್ಟಕ್ಕಿಳಿಸಿತು.

ಅಂದಿನಿಂದ ಜೆ & ಕೆ ಅಸೆಂಬ್ಲಿ ಇಲ್ಲವಾಗಿದೆ. ಭಾರತದ ಚುನಾವಣಾ ಆಯೋಗವು ಚುನಾವಣೆ ನಡೆಸಲು ವಿಫಲವಾಗಿದೆ. ಬಹುಪಾಲು ರಾಜಕೀಯ ಪಕ್ಷಗಳು ಚುನಾವಣೆ ನಡೆಸಲು ಒಲವು ತೋರಿದ್ದರೂ, ಆಯೋಗ ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಹೊಸ ಕ್ಷೇತ್ರಗಳನ್ನು ಡಿಲಿಮಿಟ್ ಮಾಡಲು ಕೇಂದ್ರ ಸರ್ಕಾರ ಡಿಲಿಮಿಟೇಶನ್ ಆಯೋಗಕ್ಕೆ ಮತ್ತೊಂದು ವರ್ಷ ಕಾಲಾವಕಾಶ ನೀಡಿರುವುದರಿಂದ ಜೆ & ಕೆ ಚುನಾವಣೆಯ ಬಗ್ಗೆ ರಾಜಕೀಯ ಪಕ್ಷಗಳು ಸಂಶಯ ವ್ಯಕ್ತಪಡಿಸಿವೆ.

ಇದನ್ನೂ ಓದಿ: ಕೊರೊನಾ ನಿರ್ವಹಣೆಗೆ ಮನಮೋಹನ್‌ ಸಿಂಗ್‌ ಸಲಹೆ; ಮಾಜಿ ಪ್ರಧಾನಿ ಬಗ್ಗೆ ವ್ಯಂಗ್ಯವಾಡಿದ ಕೇಂದ್ರ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights