18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಎಂಬುದು ಪುಕ್ಕಟ್ಟೆ ಪುಂಗಿ; ಕೇಂದ್ರ – ರಾಜ್ಯ ಸರ್ಕಾರದ್ದು ಬಾಯಿ ಬಿಟ್ಟರೆ ಬಣ್ಣಗೇಡು: ಹೆಚ್‌ಡಿಕೆ ವ್ಯಂಗ್ಯ

ಮೇ ಒಂದರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಎಂದು ಬೊಬ್ಬೆ ಹೊಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರ ಪುಕ್ಕಟೆ ಪುಂಗಿ ಊದಿದ್ದೇ ಬಂತು. ಲಸಿಕೆಯ ದಾಸ್ತಾನಿಲ್ಲದೆ, ಸೂಕ್ತ ಮುನ್ನೆಚ್ಚರಿಕೆ, ವ್ಯವಸ್ಥೆ ಮಾಡಿಕೊಳ್ಳದೆ ಬರೀ ಪ್ರಚಾರ ತೆಗೆದುಕೊಂಡ ಕೇಂದ್ರ, ರಾಜ್ಯ ಸರ್ಕಾರಗಳ ನಿಲುವು ಅಕ್ಷಮ್ಯ ಮತ್ತು ಖಂಡನೀಯ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಲಭ್ಯವಿರುವ ಮಾಹಿತಿ ಪ್ರಕಾರ ಮೇ ಒಂದರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸರ್ಕಾರ ಏದುಸಿರು ಬಿಡುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಕೊಡಲು ಹೆಣಗಾಡುತ್ತಿದೆ ಎಂದಿದ್ದಾರೆ.

18 ವರ್ಷ ಮೇಲ್ಪಟ್ಟ ದೇಶದ ಕೋಟ್ಯಾಂತರ ಮಂದಿಗೆ ಲಸಿಕೆ ನೀಡುವುದಾಗಿ ಬಾಯಿಮಾತಿನ ಉಪಚಾರ ಮಾಡಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೊಣೆಗೇಡಿತನ ಮತ್ತು ತಿಕ್ಕಲುತನವನ್ನು ದೇಶದ ಜನತೆ ಎಂದಿಗೂ ಕ್ಷಮಿಸರು ಎಂದು ಹೇಳಿದ್ದಾರೆ.

ಆತುರಗಾರನಿಗೆ ಬುದ್ಧಿ ಕಡಿಮೆ ಎಂಬಂತೆ ಕೇವಲ ಮಾತಿನಲ್ಲಿ ಜನರನ್ನು ಓಲೈಸುವ ಇಂತಹ ಬೂಟಾಟಿಕೆಯನ್ನು ಸರ್ಕಾರ ಬಿಡಬೇಕು. “ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ” ಎನ್ನುವ ಸರ್ಕಾರ ಇದ್ದರೇನು? ಇಲ್ಲದಿದ್ದರೇನು? ಎಂದು ಕಿಡಿಕಾರಿದ್ದಾರೆ.

ಮೊದಲ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಎಷ್ಟು ಮಂದಿಗೆ ಲಸಿಕೆ ಹಾಕಲಾಗಿದೆ? ಅವರಲ್ಲಿ ಎಷ್ಟು ಮಂದಿಗೆ ಎರಡನೇ ಹಂತದಲ್ಲಿ ಲಸಿಕೆ ಕೊಡಲಾಗಿದೆ ಎಂಬ ಅಂಕಿಅಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿ ಎಂದು ಒತ್ತಾಯಿಸಿದ್ದಾರೆ.

18 ವರ್ಷ ಮೇಲ್ಪಟ್ಟವರಿಗೆ ಎಷ್ಟು ಮಂದಿಗೆ ಯಾವತ್ತಿನಿಂದ ಲಸಿಕೆ ಹಾಕುವ ಅಭಿಯಾನ ಶುರು ಮಾಡುವಿರಿ? ಎಂಬುದನ್ನು ಸ್ಪಷ್ಟವಾಗಿ ದೇಶದ ಜನತೆಗೆ ಮಾಹಿತಿ ಕೊಡಿ. ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತೆ ವರ್ತಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯತನ ದೇಶದ ಜನತೆ ಮೂರ್ಖರು ಎಂದು ಭಾವಿಸಿದಂತಿದೆ ಎಂದಿದ್ದಾರೆ.

ದೇಶದಾದ್ಯಂತ ಕೊರೋನಾ ಸೋಂಕಿತರು ಬೆಡ್, ಆಕ್ಸಿಜನ್, ಅಂಬುಲೆನ್ಸ್, ಔಷಧಿಗಳಿಲ್ಲದೆ ಪರದಾಡುತ್ತಿದ್ದಾರೆ. ಸತ್ತವರ ಅಂತ್ಯಸಂಸ್ಕಾರಕ್ಕೂ ಪಾಳಿಯಲ್ಲಿ ನಿಲ್ಲಬೇಕಾದ ವ್ಯವಸ್ಥೆ ಸೃಷ್ಟಿಸಿದ ಕೇಂದ್ರ- ರಾಜ್ಯ ಸರ್ಕಾರಗಳ ದಯನೀಯ ವೈಫಲ್ಯದ ಬಗ್ಗೆ ದೇಶದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ.

ಅರಿವುಗೇಡಿಗಳಂತೆ ಪುಕ್ಕಟೆ ಪ್ರವಚನ ನೀಡುತ್ತಿರುವ ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವರುಗಳು ಕನಿಷ್ಠ ಸಾಮಾನ್ಯ ರೀತಿ ಪ್ರತಿಕ್ರಿಯಿಸುವುದನ್ನು, ಇಂತಹ ದುರಿತ ಕಾಲದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಯನ್ನು ಜವಾಬ್ದಾರಿಯಿಂದ ನಿಭಾಯಿಸುವುದು ಒಳಿತು ಎಂದು ತಿಳಿಸಿದ್ದಾರೆ.

ಲಸಿಕೆ ನೀಡುವ ವಿಷಯದಲ್ಲಿ ಜನತೆ ಸಿನಿಕರಾಗದಂತೆ ಎಚ್ಚರವಹಿಸುವುದು ಸರ್ಕಾರಗಳ ಜವಾಬ್ದಾರಿ. ಸಾರ್ವಜನಿಕರ ಆರೋಗ್ಯದ ವಿಷಯದಲ್ಲಿ ಸರ್ಕಾರ ಉಡಾಫೆಯ ಧೋರಣೆ ತಳೆಯುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Also: ಬಳ್ಳಾರಿ ಪಾಲಿಕೆ ಚುನಾವಣೆ: ಕಾಂಗ್ರೆಸ್‌ ಭರ್ಜರಿ ಗೆಲುವು; ಈ ಬಾರಿಯೂ ಅಧಿಕಾರದಿಂದ ದೂರ ಉಳಿದ ಬಿಜೆಪಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights