ಚುನಾವಣಾ ಫಲಿತಾಂಶ: ರಾಜ್ಯದ ಬಿಜೆಪಿ ಸರ್ಕಾರ ಜನಬೆಂಬಲ ಕಳೆದುಕೊಂಡಿದೆ ಎಂಬುದು ಸಾಬೀತು: ಸಿದ್ದರಾಮಯ್ಯ
ರಾಜ್ಯದ 10 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಒಂದು ಸಂಸ್ಥೆಯಲ್ಲಿ ಮಾತ್ರ ಗೆದ್ದಿದ್ದು, ಉಳಿದ 09 ಪಾಲಿಕೆ, ಪುರಸಭೆಗಳಲ್ಲಿ ಸೋಲುಂಡಿದೆ. ಈ ಫಲಿತಾಂಶವು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜನರ ಬೆಂಬಲವನ್ನು ಕಳೆದುಕೊಂಡಿದೆ ಎಂಬುದನ್ನು ಸಾಬೀತು ಪಡಿಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೋವಿಡ್ ಸಂದರ್ಭದಲ್ಲಿ ಸರ್ಕಾರ ಜನರ ಜೀವದ ಜತೆ ಚೆಲ್ಲಾಟ ಆಡುತ್ತಿದೆ. ಈ ಕಾರಣದಿಂದ ಮತದಾನ ಮೂಲಕ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದು, ಬಿಜೆಪಿ ವಿರುದ್ದ ಮತ ಚಲಾಯಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಜನರ ಕೆಂಗಣ್ಣಿಗೆ ಗುರಿಯಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರವನ್ನು ವಿಸರ್ಜಿಸಿ ಚುನಾವಣೆಗೆ ಹೋಗುವುದು ಉತ್ತಮ ಎಂದು ಹೇಳಿದ್ದಾರೆ.
ಚುನಾವಣೆ ನಡೆದ ಹತ್ತು ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಹೆಚ್ಚು ಸಂಸ್ಥೆಗಳಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದೆ. ರಾಜ್ಯದಲ್ಲಿ ಬದಲಾವಣೆ ಬಯಸಿ ಮತದಾರರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಚುನಾವಣೆ ನಡೆದಿದ್ದ 10 ಸ್ಥಳೀಯ ಸಂಸ್ಥೆಗಳ ಪೈಕಿ 07ರಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಜೆಡಿಎಸ್ ಎರಡು ಪುರಸಭೆಗಳನ್ನು ಗೆದ್ದಿದ್ದರೆ, ಆಡಳಿತಾರೂಢ ಬಿಜೆಪಿ ಒಂದೇ ಒಂದು ಪಾಲಿಕೆಯಲ್ಲಿ ಮಾತ್ರ ಗೆದ್ದಿದ್ದು ಭಾರೀ ಮುಖಭಂಗ ಅನುಭವಿಸಿದೆ.
ಒಟ್ಟು 266 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಕ್ಷವು 119 ಸ್ಥಾನಗಳಲ್ಲಿ ಜಯಗಳಿಸಿದ್ದು ಒಟ್ಟು 44.73% ಮತಗಳನ್ನು ಪಡೆದಿದೆ. ಜೆಡಿಎಸ್ 67 ಸ್ಥಾನಗಳಲ್ಲಿ ಜಯಿಸಿದ್ದು, 25.18% ಮತಗಳನ್ನು ಪಡೆದಿದೆ. ಹಾಗೆಯೇ ಬಿಜೆಪಿ 56 ಸ್ಥಾನಗಳಲ್ಲಿ ಜಯಗಳಿಸಿದ್ದು, 21.05% ರಷ್ಟು ಮತಗಳನ್ನು ಪಡೆದಿದೆ.
ಇದನ್ನೂ ಓದಿ: ಉಪಚುನಾವಣೆ ಫಲಿತಾಂಶಕ್ಕೆ ಪಾಲಿಕೆ ಫಲಿತಾಂಶ ಬುನಾದಿ? 3 ಕ್ಷೇತ್ರಗಳಲ್ಲಿ ಗೆಲ್ಲುತ್ತಾ ಕಾಂಗ್ರೆಸ್?