ಬೆಡ್ ಸಿಗದೆ ಆಸ್ಪತ್ರೆಯ ಹೊರಗೆ ಕಾರಿನಲ್ಲಿ ಮೃತಪಟ್ಟ ಕೊರೊನಾ ಸೋಂಕಿತ ಮಹಿಳೆ..!

ಭಾರತ ಕೊರೊನಾ ಎರಡನೇ ಅಲೆಗೆ ತತ್ತರಿಸಿ ಹೋಗಿದೆ. ದೇಶಾದ್ಯಂತ ಅಸಂಖ್ಯಾತ ದುರಂತ ಪ್ರಕರಣಗಳು ಹೊರಬೀಳುತ್ತಲೇ ಇವೆ. ಕೊರೊನಾ ಸೋಂಕಿತ ಮಹಿಳೆಯೊಬ್ಬಳು ಬೆಡ್ ಸಿಗದೆ ಆಸ್ಪತ್ರೆಯ ಹೊರಗೆ ಕಾರಿನಲ್ಲಿ ಮೃತಪಟ್ಟ ದಾರುಣ ಘಟನೆ ನೋಯ್ಡಾದಲ್ಲಿ ನಡೆದಿದೆ.

ಗುರುವಾರ ನೋಯ್ಡಾದ ಸರ್ಕಾರಿ ಜಿಮ್ಸ್ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ 35 ವರ್ಷದ ಕೋವಿಡ್ ಸೋಂಕಿತ ಮಹಿಳೆ ಜಾಗೃತಿ ಗುಪ್ತಾ ಸಾವನ್ನಪ್ಪಿದ್ದಾರೆ. ಮಹಿಳೆಯೊಂದಿಗೆ ಬಂದ ವ್ಯಕ್ತಿಯು ಸುಮಾರು ಮೂರು ಗಂಟೆಗಳ ಕಾಲ ಹಾಸಿಗೆಗಾಗಿ ಅಧಿಕಾರಿಗಳನ್ನು ಬೇಡಿಕೊಂಡರೂ ಬೆಡ್ ಸಿಗದೇ ತೀವ್ರ ಉಸಿರಾಟದ ಸಮಸ್ಯೆಯಿಂದ ಕಾರಿನಲ್ಲೇ ಮಹಿಳೆ ಮೃತಪಟ್ಟಿದ್ದಾಳೆ.

ಗ್ರೇಟರ್ ನೋಯ್ಡಾದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಜಾಗೃತಿ ಗುಪ್ತಾ ನಗರದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಆಕೆಯ ಇಬ್ಬರು ಮಕ್ಕಳು ಪತಿಯೊಂದಿಗೆ ಮಧ್ಯಪ್ರದೇಶದಲ್ಲಿ ವಾಸವಾಗಿದ್ದರು.

“ಜಾಗೃತಿ ಗುಪ್ತಾ ಸಹಾಯ ಕೇಳುತ್ತಾ ಓಡಿಬಂದಿದ್ದಾಳೆ. ಆದರೆ ಯಾರೂ ಅವರ ಮಾತನ್ನು ಕೇಳಲಿಲ್ಲ. ಮಧ್ಯಾಹ್ನ 3: 30 ರ ಸುಮಾರಿಗೆ ಅವಳು ಕುಸಿದುಬಿದ್ದಳು. ಸಹಾಯಕ್ಕಾಗಿ ಬಂದ ವ್ಯಕ್ತಿ ಆಸ್ಪತ್ರೆ ಸಿಬ್ಬಂದಿಗೆ ಬೆಡ್ ಕೇಳಿದ್ದಾನೆ. ಆದರೆ ಸಿಬ್ಬಂದಿ ಹೊರಗೆ ಧಾವಿಸಿ ನೋಡುವ ಹೊತ್ತಿಗೆ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು “ಎಂದು ಪ್ರತ್ಯಕ್ಷದರ್ಶಿಯಾದ ಸಚಿನ್ ಎನ್ಡಿಟಿವಿಗೆ ತಿಳಿಸಿದರು.

ದೇಶ ಕೋವಿಡ್ ವಿರುದ್ಧ ಹೋರಾಡುತ್ತಿರುವಾಗ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಳೆದ ವಾರ ತಮ್ಮ ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಲ್ಲ ಮತ್ತು ಆಸ್ಪತ್ರೆಯ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಿ ಸಮಸ್ಯೆಗಳನ್ನು ಶೀಘ್ರವಾಗಿ ನಿವಾರಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಹಾಸಿಗೆಗಳು ಸಿಗದೆ ಕೋವಿಡ್ ರೋಗಿಗಳು ರಸ್ತೆಯಲ್ಲಿ ಸಾಯುತ್ತಿದ್ದಾರೆ.  ಹಾಸಿಗೆಗಳು ಮತ್ತು ಆಮ್ಲಜನಕದ ತೀವ್ರ ಕೊರತೆಯಿಂದಾಗಿ ರೋಗಿಗಳಿಗೆ ಮನೆಗೆ ಮರಳಲು ಒತ್ತಾಯಿಸಲಾಗುತ್ತಿದೆ.

ನೊಯ್ಡಾ ರಾಜ್ಯದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಲ್ಲಿ ಒಂದಾಗಿದೆ, ಇದರಲ್ಲಿ 8,200 ಕ್ಕೂ ಹೆಚ್ಚು ಸಕ್ರಿಯ ಕೊರೊನಾವೈರಸ್ ಪ್ರಕರಣಗಳು ಮತ್ತು 212 ಸಾವುಗಳು ಸಂಭವಿಸಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights