ಮಸ್ಕಿ ಉಪಚುನಾವಣೆ: ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡ BJP ಅಭ್ಯರ್ಥಿ!
ಅದಲಿ-ಬದಲಿ ಅಭ್ಯರ್ಥಿಗಳ ಅಖಾಡವಾಗಿದ್ದ ಮಸ್ಕಿ ವಿಧಾನಸಭಾ ಉಪಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಇಂದು ಮತ ಎಣಿಕೆ ನಡೆಯುತ್ತಿದ್ದು, 16 ಸುತ್ತುಗಳ ಎಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಅಂತಿಮ ಫಲಿತಾಂಶ ಪ್ರಕಟವಾಗುವುದಕ್ಕೂ ಮುನ್ನವೇ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಸೋಲನ್ನು ಒಪ್ಪಿಕೊಂಡಿದ್ದಾರೆ.
ರಾಯಚೂರಿನ ಮತ ಎಣಿಕೆ ಸಂಕೀರ್ಣದಿಂದ ಹೊರ ನಡೆದಿರುವ ಪ್ರತಾಪಗೌಡ ಪಾಟೀಲ್, ಮಸ್ಕಿಯಲ್ಲಿ ನಾನು ಸೋಲುವುದಿಲ್ಲ ಎಂದು ಭಾವಿಸಿದ್ದೆ. ಆದ್ರೆ ಜನ ಹೊಸಬರನ್ನು ಬಯಸಿದ್ದಾರೆ. ಜನ ಕ್ಷೇತ್ರದಲ್ಲಿ ಬದಲಾವಣೆ ಬಯಸಿ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಇದೂವರೆಗೂ ನಡೆದಿರುವ ಅಷ್ಟೂ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರು ಗೆಲ್ಲುವುದು ಭಾಗಶಃ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಾಪಗೌಢ ತಮ್ಮ ಸೋಲನ್ನು ಒಪ್ಪಿಕೊಂಡು ಹೊರ ನಡೆದಿದ್ದಾರೆ.
ಕಳೆದ ಚುನಾವಣೆ(2018)ಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪ್ರತಾಪಗೌಡ ಗೆಲುವು ಸಾಧಿಸಿದ್ದರು. ನಂತರ ನಡೆದ ಆಪರೇಷನ್ ಕಮಲಕ್ಕೆ ಬಲಿಯಾಗಿ ಬಿಜೆಪಿ ಸೇರಿದ್ದರು. ಅದೇ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 213 ಮತಗಳಿಂದ ಸೋಲುಂಡಿದ್ದ ಬಸನಗೌಡ ತುರ್ವಿಹಾಳ ಈಗ ಕಾಂಗ್ರೆಸ್ ಸೇರಿದ್ದು, ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಕಳೆದ ಚುನಾವಣೆಯಲ್ಲಿಯೂ ಪರಸ್ಪರ ಸೆಣೆಸಾಡಿದ್ದ ಪ್ರತಾಪಗೌಡ ಮತ್ತು ಬಸನಗೌಡ ಇದೀಗ ಮತ್ತೆ ಕಣದಲ್ಲಿ ಹಣಾಹಣಿ ನಡೆಸುತ್ತಿದ್ದಾರೆ. ಆದರೆ, ಅವರು ಪ್ರತಿನಿಧಿಸುತ್ತಿದ್ದ ಪಕ್ಷಗಳು ಅದಲು-ಬದಲಾಗಿವೆಯಷ್ಟೇ.
ಇದನ್ನೂ ಓದಿ: ಕರ್ನಾಟಕ ಉಪಚುನಾವಣೆ: ಕಾಂಗ್ರೆಸ್-ಬಿಜೆಪಿ ತಲಾ ಕ್ಷೇತ್ರದಲ್ಲಿ ಮುನ್ನಡೆ; ಬೆಳಗಾವಿಯಲ್ಲಿ ಭಾರೀ ಪೈಪೋಟಿ