ದೆಹಲಿಯ ಒಂದೇ ಆಸ್ಪತ್ರೆಯಲ್ಲಿ 80 ವೈದ್ಯರಿಗೆ ಕೊರೊನಾ ಪಾಸಿಟಿವ್: ಓರ್ವ ವೈದ್ಯ ಸಾವು!
ದೆಹಲಿಯ ಸರೋಜ್ ಆಸ್ಪತ್ರೆಯ 80 ವೈದ್ಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಹಿರಿಯ ಶಸ್ತ್ರಚಿಕಿತ್ಸಕ ಸಾವನ್ನಪ್ಪಿದ್ದಾರೆ.
ಹೌದು.. ದೆಹಲಿಯ ಸರೋಜ್ ಆಸ್ಪತ್ರೆಯಲ್ಲಿ 80 ವೈದ್ಯರಿಗೆ ಕೊರೊನಾ ಸೋಂಕು ತಗುಲಿದ್ದು ಸುಮಾರು ಮೂರು ದಶಕಗಳ ಕಾಲ ಈ ಸೌಲಭ್ಯದಲ್ಲಿ ಕೆಲಸ ಮಾಡಿದ ಹಿರಿಯ ಶಸ್ತ್ರಚಿಕಿತ್ಸಕ ಈ ಕಾಯಿಲೆಗೆ ತುತ್ತಾಗಿದ್ದಾರೆ.
ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಕ ಡಾ.ಎ.ಕೆ.ರಾವತ್ ಅವರು ಕೋವಿಡ್ -19 ಗೆ ಬಲಿಯಾಗಿದ್ದಾರೆ. ಡಾ. ಎಕೆ ರಾವತ್ ಅವರು 27 ವರ್ಷಗಳ ಕಾಲ ಸರೋಜ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರ ಸಾವು ಈಗಾಗಲೇ ಕೊರೊನಾ ತೊಂದರೆಗೀಡಾದ ಸಿಬ್ಬಂದಿಗಳಿಗೆ ತೀವ್ರನೋವನ್ನುಂಟು ಮಾಡಿದೆ. ಆದರೂ ಆಸ್ಪತ್ರೆಯು ರೋಗಿಗಳಿಗೆ ಚಿಕಿತ್ಸೆ ನೀಡುತ್ತಲೇ ಇದೆ.
ಕೋವಿಡ್ -19 ರೋಗ ಕಾಣಿಸಿಕೊಂಡ 80 ವೈದ್ಯರಲ್ಲಿ 12 ಮಂದಿಯನ್ನು ಸದ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೋವಿಡ್ ಪಾಸಿಟಿವ್ ಆಗಿರುವ ಉಳಿದ ವೈದ್ಯರು ಮನೆಯ ಸಂಪರ್ಕತಡೆಯಲ್ಲಿದ್ದಾರೆ.
ಇದುವರೆಗೆ ದೆಹಲಿ ಆಸ್ಪತ್ರೆಗಳಲ್ಲಿ 300 ಕ್ಕೂ ಹೆಚ್ಚು ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳು ಕೋವಿಡ್‌ಗೆ ಧನಾತ್ಮಕ ಪರೀಕ್ಷೆ ಮಾಡಿಸಿಕೊಂಡಿದ್ದಾರೆ ಎಂದು ವರದಿ ಹೇಳುತ್ತದೆ.
ಸರೋಜ್ ಆಸ್ಪತ್ರೆಯಲ್ಲಿ ಕೋವಿಡ್ ಏಕಾಏಕಿ ಕಾಣಿಸಿಕೊಂಡಿದ್ದು ಎಲ್ಲಾ ಹೊರ ರೋಗಿಗಳ ವಿಭಾಗಗಳನ್ನು (ಒಪಿಡಿ) ಸದ್ಯಕ್ಕೆ ಮುಚ್ಚಲಾಗಿದೆ.
ಭಾನುವಾರ, ದೆಹಲಿಯಲ್ಲಿ 273 ಕರೋನವೈರಸ್ ಸಾವುಗಳು ಮತ್ತು 13,336 ಹೊಸ ಕೋವಿಡ್ -19 ಸೋಂಕುಗಳು ವರದಿಯಾಗಿವೆ.