ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದ 12 ಗಂಟೆಗಳ ಒಳಗೆ 71 ಕೊರೊನಾ ರೋಗಿಗಳ ಸಾವು!

ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದ 12 ಗಂಟೆಗಳ ಒಳಗೆ 71 ಕೊರೊನಾ ರೋಗಿಗಳು ಸಾವನ್ನಪ್ಪಿದ್ದಾರೆ ಎಂಬ ಆತಂಕಕಾಗಿ ಬೆಳವಣಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಕೊರೊನಾ ರೋಗಿಗಳ ಮರಣ ಅಂಕಿಅಂಶಗಳ ವಿಶ್ಲೇಷಣೆಯಿಂದ ಮಾಹಿತಿ ಬಹಿರಂಗವಾಗಿದೆ. ಆಸ್ಪತ್ರೆಯಲ್ಲಿ ಇದೂವರೆಗೂ 370 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.

ಈ ಪೈಕಿ, ಆಸ್ಪತ್ರೆಗೆ ದಾಖಲಾಗಿ 12 ಗಂಟೆಗಳ ಕಳೆಯುವ ಮೊದಲೇ 71 ಸೋಂಕಿತರು ಸಾವನ್ನಪ್ಪಿದ್ದಾರೆ. ಅಲ್ಲದೆ, 24 ಗಂಟೆಗಳ ಒಳಗೆ 32 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

“ಸಾವನ್ನಪ್ಪಿರುವ ಸೋಂಕಿತರಲ್ಲಿ ಹಲವು ಮಂದಿ, ವಿಕ್ಟೋರಿಯಾ ಆಸ್ಪತ್ರೆಗೆ ಬರುವುದಕ್ಕೂ ಮುನ್ನ ವಿವಿಧ ಖಾಸಗಿ ಮತ್ತು ಕಾರ್ಪೋರೇಟ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅದರೆ, ಅಲ್ಲಿ ಚಿಕಿತ್ಸೆ ಫಲಿಸದಿದ್ದಾಗ, ಕೊನೆ ಕ್ಷಣದಲ್ಲಿ ಶಿಫಾರಸ್ಸಿನ ಮೇಲೆ ಇಲ್ಲಿಗೆ ದಾಖಲಾಗಿದ್ದಾರೆ. ಅವರು ಇಲ್ಲಿಗೆ ಬರುವ ವೇಳೆಗೆ ಕೊರೊನಾ 2ನೇ ಹಂತದ ನ್ಯುಮೋನಿಯಾ ಮತ್ತು ಸೆಪ್ಟಿಸೆಮಿಯಾ ಮುಂತಾದ ತೀವ್ರ ಸ್ಥಿತಿಯ ಅನಾರೋಗ್ಯದ ಪರಿಸ್ಥಿತಿಗೆ ತುತ್ತಾಗಿದ್ದರು. ಹಾಗಾಗಿ, ಆಸ್ಪತ್ರೆಗೆ ದಾಖಲಾದ 12 ಗಂಟೆಗಳ ಅವಧಿಯಲ್ಲಿ ಸಾವು ಸಂಭವಿಸಿದೆ ಎಂಬ ಮಾತ್ರಕ್ಕೆ ಅದು ಆಸ್ಪತ್ರೆಯ ಐಸಿಯುನಲ್ಲಿ ಸಂಭವಿಸಿದ ಸಾವುಗಳೆಂದು ಪರಿಗಣಿಸಲು ಸಾಧ್ಯವಿಲ್ಲ” ಎಂದು ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ.ಸ್ಮಿತಾ ಸೆಗು ಹೇಳಿದ್ದಾರೆ.

ಸೋಂಕಿತರು ಅಂತಿಮ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಆಗ ಪರಿಸ್ಥಿತಿ ವೈದ್ಯರ ಕೈ ಮೀರಿರುತ್ತದೆ. ಹೀಗಾಗಿ ವೈದ್ಯರು ಏನೇ ಪ್ರಯತ್ನ ಪಟ್ಟರೂ ಅದು ಸಫಲವಾಗುವುದಿಲ್ಲ. ಅಲ್ಲದೆ, ಖಾಸಗಿ ಆಸ್ಪತ್ರೆಯವರು ತಮ್ಮ ಆಸ್ಪತ್ರೆಯ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಎಂಬ ಭೀತಿಯಿಂದ ಅಂತಿಮ ಕ್ಷಣದಲ್ಲಿ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಹೀಗೆ ಬಂದರು ಹಲವಾರು ರೋಗಿಗಳು ವಾಸಿಯಾಗದ ಧೀರ್ಘಾವಧಿಯ ರೋಗಗಳಿಂದ ಬಳಲುತ್ತಿರುತ್ತಾರೆ. ಅಂತಹವರಿಗೆ ಕೊನೆಯ ಅವಧಿಯಲ್ಲಿ ಚಿಕಿತ್ಸೆ ಕಷ್ಟಸಾಧ್ಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಕರ್ನಾಟಕದ ಏಕೈಕ ಕೊರೊನಾ ಚಿಕಿತ್ಸೆಯ ಆಸ್ಪತ್ರೆ ಇದಾಗಿತ್ತು. ಈ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 5,000 ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

 


ಇದನ್ನೂ ಓದಿ: ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ: ಅರ್ಜಿ ತಿರಸ್ಕರಿಸಿದ ಅಟಾರ್ನಿ ಜನರಲ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights