ಟಿಕ್ರಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಹೋಗುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ!
ಟಿಕ್ರಿಯಲ್ಲಿ ರೈತರ ಪ್ರತಿಭಟನೆಗೆ ಸೇರಲು ಹೋಗುತ್ತಿದ್ದ ಬಂಗಾಳದ ಕಾರ್ಯಕರ್ತೆ ಮೇಲೆ ಅತ್ಯಾಚಾರವೆಸಗಲಾಗಿದ್ದು ಮಹಿಳೆಗೆ ಕೊರೊನಾ ಸೋಂಕು ಕಾಣಿಸಿಕೊಂಡು ಸಾವನ್ನಪ್ಪಿದ್ದಾಳೆ.
ಟಿಕ್ರಿ ಗಡಿಯಲ್ಲಿ ರೈತರ ಪ್ರತಿಭಟನೆಗೆ ಸೇರಲು ಪಶ್ಚಿಮ ಬಂಗಾಳದಿಂದ ಪ್ರಯಾಣಿಸಿದ್ದ ಕಾರ್ಯಕರ್ತರೊಬ್ಬರ ಮೇಲೆ ದೆಹಲಿಗೆ ಹೋಗುವ ದಾರಿಯಲ್ಲಿ ಅತ್ಯಾಚಾರ ಎಸಗಲಾಗಿದೆ. ಬಳಿಕ ಮಹಿಳೆಗೆ ಕೋವಿಡ್ -19 ಸೋಂಕು ಕಾಣಿಸಿಕೊಂಡು ಏಪ್ರಿಲ್ 30 ರಂದು ನಿಧನರಾದರು.
ಈ ಬಗ್ಗೆ ಮಹಿಳೆಯ ತಂದೆ ಬಹದ್ದೂರ್‌ಗಢದಲ್ಲಿ ಪೊಲೀಸರಿಗೆ ದೂರು ನೀಡಿದ್ದು, ನಾಲ್ಕು ಪುರುಷರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ‘ಕಿಸಾನ್ ಸೋಷಿಯಲ್ ಆರ್ಮಿ’ ನಡೆಸುತ್ತಿರುವ ಅನೂಪ್ ಮತ್ತು ಅನಿಲ್ ಮಲಿಕ್ ಅವರ ಹೆಸರಿ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಸಾವಿಗೆ ನಾಲ್ಕು ದಿನಗಳ ಮೊದಲು ಕೋವಿಡ್ ನಿಂದಾಗಿ 26 ವರ್ಷದ ಮಹಿಳೆ ಶಿವಂ ಆಸ್ಪತ್ರೆಗೆ ದಾಖಲಾಗಿದ್ದರು. ಮೃತ ಮಹಿಳಾ ಕಾರ್ಯಕರ್ತೆ ಆರೋಪಿಗಳೊಂದಿಗೆ ಬಂಗಾಳದಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಅಲ್ಲಿ ಅವರು ಏಪ್ರಿಲ್ 11 ರಂದು ಟಿಕ್ರಿ ಗಡಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಸೇರಿಕೊಂಡರು.
ದೆಹಲಿಗೆ ಹೋಗುವ ದಾರಿಯಲ್ಲಿ ಮತ್ತು ಟಿಕ್ರಿ ಗಡಿಯನ್ನು ತಲುಪಿದ ನಂತರ ಮಹಿಳೆಯ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದಾರೆ ಎಂದು ಸಂಯುಕ್ತಾ ಕಿಸಾನ್ ಮೋರ್ಚಾ ಹೇಳಿಕೆಯಲ್ಲಿ ತಿಳಿಸಿದೆ. ಒಂದು ವಾರದ ನಂತರ ಆಕೆ ತೀವ್ರ ಜ್ವರದಿಂದ ಬಳಲುತ್ತಿದ್ದರು. ಆಕೆಗೆ ಸೋಂಕಿರುವುದು ದೃಢಪಟ್ಟಿದೆ. ನಂತರ ಅವರು ಏಪ್ರಿಲ್ 30 ರಂದು ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿಗೆ ಬಲಿಯಾದರು.
ಆಕೆಯ ತಂದೆಯ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಹರಿಯಾಣ ಪೊಲೀಸರು ಭಾನುವಾರ ಡಿಎಸ್ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ಈ ಪ್ರಕರಣದ ತನಿಖೆಗೆ ವಹಿಸಿದ್ದಾರೆ.
ಸಂಯುಕ್ತಾ ಕಿಸಾನ್ ಮೋರ್ಚಾ ತನ್ನ ಹೇಳಿಕೆಯಲ್ಲಿ “ಮೃತ ಮಹಿಳಾ ಸಹೋದ್ಯೋಗಿಗೆ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎಸ್‌ಕೆಎಂ ಈಗಾಗಲೇ ಕಠಿಣ ಕ್ರಮ ಕೈಗೊಂಡಿದೆ ” ಎಂದಿದೆ.