ಇನ್ನೆರಡು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಟೋಲ್ ಮುಕ್ತವಾಗಿವೆ: ಗಡ್ಕರಿ
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಹೊಸ ವ್ಯವಸ್ತೆಯ ರೂಪುರೇಷೆಗಳನ್ನು ರೂಪಿಸಲಾಗಿದ್ದು, ಇನ್ನೆರಡು ವರ್ಷಗಳಲ್ಲಿ ಹೆದ್ದಾರೆಗಳು ಟೋಲ್ ಪ್ಲಾಜಾ ಮುಕ್ತವಾಗಲಿವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಜಿಪಿಎಸ್ ಆಧಾರಿತ ಶುಲ್ಕ ವಸೂಲಿ ಪದ್ದತಿ ಜಾರಿಗೆ ಬರಲಿದ್ದು, ಇದರಿಂದಾಗಿ ಪ್ರಯಾಣಿಕರು ಟೋಲ್ ಪ್ಲಾಜಾಗಳಲ್ಲಿ ಸಾಲುಗಟ್ಟಿ ನಿಲ್ಲುವ ಸಮಸ್ಯೆ ಬಗೆಹರಿಯಲಿದೆ. ಹೊಸ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣ ಸಂದಾಯವಾಗಲಿದೆ. ರಷ್ಯಾ ಸರ್ಕಾರದ ಸಹಯೋಗದೊಂದಿಗೆ ಅದನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ಹೊಸ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳು ಜಿಪಿಎಸ್ ಒಳಗೊಂಡಿರುತ್ತವೆ. ಹಳೆಯ ವಾಹನಗಳಿಗೂ ಜಿಪಿಎಸ್ ಅಳವಡಿಸುವ ಬಗ್ಗೆ ಸರ್ಕಾರ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಜಿಪಿಎಸ್ ವ್ಯವಸ್ಥೆ ಮೂಲಕ ವಾಹನಗಳನ್ನು ಟ್ರ್ಯಾಕ್ ಮಾಡಲಾಗುವುದು. ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಬಾಕಿ ಟೋಲ್ ಹಣ ಸಂದಾಯ ಮಾಡುವ ವ್ಯವಸ್ಥೆ ಜಾರಿಗೆ ಬರುವುದು ಎಂದು ಅವರು ತಿಳಿಸಿದ್ದಾರೆ.
ತಂತ್ರಜ್ಞಾನದ ಬಳಕೆಯಿಂದ ಲೆವಿ ಸಂಗ್ರಹದಲ್ಲಿ ಸೋರಿಕೆಯಾಗುವುದಿಲ್ಲ ಮತ್ತು ಹಣ ವರ್ಗಾವಣೆಯು ಪಾರದರ್ಶಕ ರೀತಿಯಲ್ಲಿರುತ್ತದೆ. ಪ್ಲಾಜಾಗಳಲ್ಲಿ ತಡೆರಹಿತ ಟೋಲ್ ಸಂಗ್ರಹವನ್ನು ಸಕ್ರಿಯಗೊಳಿಸಲು, ಸರ್ಕಾರವು ಆರ್‌ಎಫ್‌ಐಡಿ (ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್) ಟ್ಯಾಗ್‌ಗಳನ್ನು ಪರಿಚಯಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪುರಸಭೆ ಕಟ್ಟದ ಮೇಲೆ ‘ಜೈ ಶ್ರೀರಾಮ್’ ಬ್ಯಾನರ್; ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್!