ಕೊರೊನಾ ನಿರ್ವಹಣಾ ವೈಫಲ್ಯ: ಜನಪ್ರಿಯತೆ ಕಳೆದುಕೊಂಡ ಮೋದಿ!

ಭಾರತದಲ್ಲಿ ಉಲ್ಭಣಿಸಿದ ಕೋವಿಡ್ ಎರಡನೇ ಅಲೆಯ ಸಾವು-ನೋವುಗಳ ತೀವ್ರತೆಯ ನಡುವೆ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯಲ್ಲಿ ದಿಢೀರ್ ಕುಸಿತ ಕಂಡುಬಂದಿದೆ. ಅಲ್ಲದೆ ಅವರು ವಿರುದ್ಧದ ಅಲೆಯಲ್ಲಿ ಗಣನೀಯ ಹೆಚ್ಚಳವಾಗಿದೆ.

ಅಮೆರಿಕದ ಡಾಟಾ ಕಂಪನಿ ‘ಮಾರ್ನಿಂಗ್ ಕನ್ಸಲ್ಟ್’ ನಡೆಸುವ ವಿಶ್ವ ನಾಯಕರ ಅಪ್ರುವಲ್ ರೇಟಿಂಗ್ ಟ್ರಾಕಿಂಗ್ ಪ್ರಕಾರ ಪ್ರಧಾನ ಮಂತ್ರಿ ಮೋದಿಯವರ ಜನಪ್ರಿಯತೆ ಮೇ 4 ರಂದು ಶೇಕಡಾ 65 ಕ್ಕೆ ಇಳಿದಿದೆ. ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಇದು ಶೇಕಡಾ 74 ಇತ್ತು. ಅಂದರೆ ಆಗಸ್ಟ್ 2019 ರಿಂದ ಏಜೆನ್ಸಿಯು ರೇಟಿಂಗ್ ಅನ್ನು ಪ್ರಕಟಿಸಲು ಪ್ರಾರಂಭಿಸಿದ ನಂತರದಲ್ಲಿ ಮೋದಿಯವರ ಜನಪ್ರಿಯತೆ ಮೊದಲ ಬಾರಿಗೆ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿದೆ.

ಅದೇ ರೀತಿಯಲ್ಲಿ ಟ್ರ್ಯಾಕರ್ ಅನ್ನು ಪ್ರಾರಂಭಿಸಿದಾಗಿನಿಂದ ನರೇಂದ್ರ ಮೋದಿಯವರಿಗೆ ಅಸಮ್ಮತಿ ರೇಟಿಂಗ್ ಅತ್ಯುನ್ನತ ಮಟ್ಟಕ್ಕೆ ಏರಿದೆ. ಮಾರ್ಚ್ ಆರಂಭದಲ್ಲಿ ಶೇಕಡಾ 20 ಇದ್ದ ಮೋದಿ ವಿರೋಧಿ ಅಲೆ ಮೇ ಆರಂಭಕ್ಕೆ ಶೇಕಡಾ 29 ಕ್ಕೆ ಏರಿದೆ.

ಉಳಿದ ವಿಶ್ವ ನಾಯಕರಿಗೆ ಹೋಲಿಸಿದರೆ ನರೇಂದ್ರ ಮೋದಿಯವರ ಜನಪ್ರಿಯತೆ ಈಗಲೂ ಹೆಚ್ಚಿಗೆಯೇ ಇದೆ. ಆದರೆ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಅವರು ಅನುಸರಿಸಿದ ಕ್ರಮಗಳಿಂದ ತೀವ್ರ ಟೀಕೆಗೆ ಒಳಗಾದ ಅವರ ಜನಪ್ರಿಯತೆ ದೊಡ್ಡ ಮಟ್ಟದಲ್ಲಿ ಕುಸಿಯಲು ಆರಂಭಿಸಿದೆ.

ತಜ್ಞರ ಎಚ್ಚರಿಕೆಯನ್ನು ಕಡೆಗಣಿಸಿ ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಸಂದರ್ಭದಲ್ಲಿಯೂ ಪ್ರಧಾನಿ ಮೋದಿಯವರು ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದು ಅವರ ವಿರುದ್ಧ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಅಲ್ಲದೇ ಫೆಬ್ರವರಿಯಲ್ಲಿ ಅವರು ನಾವು ಕೋವಿಡ್‌ ಅನ್ನು ಮಣಿಸಿದ್ದೇವೆ, ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗಿದೆ ಎಂದು ಉದ್ಘರಿಸಿದ್ದರು. ಆದರೆ ಮಾರ್ಚ್ ಅಂತ್ಯದಿಂದ ಆರಂಭಗೊಂಡ ಕೋವಿಡ್ ಎರಡನೇ ಅಲೆ ಭಾರತಕ್ಕೆ ತೀವ್ರ ಆಘಾತ ನೀಡಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಳು, ಆಮ್ಲಜನಕ, ಔಷಧಿಗಳ ಕೊರತೆ ತೀವ್ರವಾಗಿ ಬಾಧಿಸಿದೆ. ಶ್ಮಶಾನದಲ್ಲಿ ಶವಸಂಸ್ಕಾರಕ್ಕೂ ಉದ್ದನೆಯ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಕೋವಿಡ್‌ ಅಲೆಯನ್ನು ಕಡೆಗಣಿಸಿದ್ದರ ಪರಿಣಾಮವಾಗಿ ಗೋಚರಿಸುತ್ತಿದೆ.

ಲಸಿಕೆ ವಿಚಾರದಲ್ಲಿಯೂ ಪ್ರಧಾನಿ ಮೋದಿಯವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಉಚಿತ ಲಸಿಕೆ ಕೊಡುವಲ್ಲಿ ವಿಫಲತೆ, ಸಮಯಕ್ಕೆ ಸರಿಯಾಗಿ ಲಸಿಕೆ ಲಭ್ಯತೆಯಲ್ಲಿ ವಿಫಲತೆ ಮತ್ತು ವಿದೇಶದಿಂದ ಆಮದು ಮಾಡಿಕೊಳ್ಳುವಲ್ಲಿ ವಿಫಲತೆ ಸೇರಿದಂತೆ ಇಂದು ಭಾರತದಲ್ಲಿ ಲಸಿಕೆ ನೀಡುವುದು ದುಸ್ತರವಾಗಿದೆ.

ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಪ್ರಸ್ತುತ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಮೆಕ್ಸಿಕೊ, ದಕ್ಷಿಣ ಕೊರಿಯಾ, ಸ್ಪೇನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಸರ್ಕಾರಿ ನಾಯಕರ ಅಪ್ರುವಲ್ ರೇಟಿಂಗ್ ಅನ್ನು ಟ್ರ್ಯಾಕ್ ಮಾಡುತ್ತಿದೆ. ವಾರಕ್ಕೊಮ್ಮೆ ಈ ಪುಟವು ಎಲ್ಲಾ 13 ದೇಶಗಳ ಇತ್ತೀಚಿನ ಡೇಟಾವನ್ನು ಅಪ್ಡೇಟ್ ಮಾಡುತ್ತದೆ. ಇದು ಜಗತ್ತಿನಾದ್ಯಂತ ಬದಲಾಗುತ್ತಿರುವ ರಾಜಕೀಯ ಚಲನಶಾಸ್ತ್ರದ ಬಗ್ಗೆ ನೈಜ ಒಳನೋಟವನ್ನು ನೀಡುತ್ತದೆ. ಅಪ್ರುವಲ್ ರೇಟಿಂಗ್‌ಗಳು ಪ್ರತಿ ದೇಶದ ವಯಸ್ಕ ನಿವಾಸಿಗಳ ಏಳು ದಿನಗಳ ಅಭಿಪ್ರಾಯಗಳ ಸರಾಸರಿಯನ್ನು ಆಧರಿಸಿವೆ, ಮತ್ತು ಮಾದರಿಗಳ ಗಾತ್ರಗಳು ದೇಶಕ್ಕೆ ಅನುಗುಣವಾಗಿ ಬದಲಾಗುತ್ತವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights