ಲಾಕ್ಡೌನ್ ನಿಯಮ ಉಲ್ಲಂಘಿಸಿದ ಬಿಜೆಪಿ ಶಾಸಕ : ದೇವಸ್ಥಾನದ ಬಾಗಿಲು ತೆಗೆಸಿ ಪೂಜೆ!
ಲಾಕ್ಡೌನ್ ನಿಯಮ ಉಲ್ಲಂಘಿಸಿ ದೇವಸ್ಥಾನದ ಬಾಗಿಲು ತೆಗೆಸಿದ ಬಿಜೆಪಿ ಶಾಸಕ ಕುಟುಂಬ ಸಮೇತ ಪೂಜೆ ಮಾಡಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಜಗಳೂರು ಬಿಜೆಪಿ ಶಾಸಕ ಎಸ್ ವಿ ರಾಮಚಂದ್ರಪ್ಪ, ಜಗಳೂರು ತಾಲೂಕಿನ ಮಾಡ್ರಳ್ಳಿ ಗ್ರಾಮದ ಚೌಡೇಶ್ವರಿ ದೇವಿಗೆ ಶಾಸಕರು ಕುಟುಂಬಸ್ಥರೊಂದಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೊರೊನಾ ಲಾಕ್ಡೌನ್ ನಿಯಮ ಉಲ್ಲಂಘಿಸಿ ದೇವಸ್ಥಾನದ ಬಾಗಿಲು ತೆಗೆಸಿದ್ದಕ್ಕೆ ಜನ ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ತಡೆಗೆ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಿರುವಾಗ ಶಾಸಕರು ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ನಿ ಇಂದಿರಾ ರಾಮಚಂದ್ರಪ್ಪ, ಪುತ್ರ ಅಜಯೇಂದ್ರ ಸಿಂಹ ಪೂಜೆಯಲ್ಲಿ ಭಾಗಿಯಾಗಿದ್ದರು. ಕೊರೊನಾ ತಡೆಗೆ ಜನರಿಗೆ ಮನೆಯಲ್ಲಿರುವಂತೆ ಆದೇಶಿಸಲಾಗಿದೆ. ಧಾರ್ಮಿಕ ಸ್ಥಳಗಳನ್ನು ಬಂದ್ ಮಾಡಲಾಗಿದೆ. ಹೀಗಿರುವಾಗ ಶಾಸಕರು ಮಾತ್ರ ದೇವಸ್ಥಾನದ ಬಾಗಿಲು ತೆಗೆಸಿದ್ದು ಕೆಂಗಣ್ಣಿಗೆ ಗುರಿಯಾಗಿದೆ.
ನಿನ್ನೆಯಷ್ಟೇ ಬೆಳಗಾವಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಕೊರೊನಾ ಹರಡುವುದನ್ನ ತಡೆಯಲು ಗಲ್ಲಿ ಗಲ್ಲಿಯಲ್ಲಿ ಹೋಮ ಮಾಡಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು. ಈಗ ದಾವಣಗೆರೆಯಲ್ಲಿ ಬಿಜೆಪಿ ಶಾಸಕ ಎಸ್ ವಿ ರಾಮಚಂದ್ರಪ್ಪ ಲಾಕ್ಡೌನ್ ನಿಯಮ ಉಲ್ಲಂಘಿಸಿ ದೇವಸ್ಥಾನದಲ್ಲಿ ಪೂಜೆ ಮಾಡಿದ್ದಾರೆ. ಇದರಿಂದಾಗಿ ಜನ ಜನಪ್ರತಿನಿಧಿಗಳಿಗೆ ಒಂದು ನಿಯಮ ಜನಸಾಮಾನ್ಯರಿಗೆ ಒಂದು ನಿಯಮನಾ ಎಂದು ಪ್ರಶ್ನಿಸಿಸುತ್ತಿದ್ದಾರೆ.
ಸರ್ಕಾರ ಇಂಥಹ ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಯಾಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.