ಕೊರೊನಾ ಸೋಂಕು ಇಲ್ಲದವರಿಗೂ ಕಪ್ಪು ಶಿಲೀಂಧ್ರ : ಪಂಜಾಬ್ನ 32 ಜನರಲ್ಲಿ ಬ್ಲಾಕ್ ಫಂಗಸ್ ಪತ್ತೆ!

ಕೊರೊನಾ ಅಟ್ಟಹಾಸದ ನಡುವೆ ಕಪ್ಪು, ಬಿಳಿ, ಹಳದಿ ಶಿಲೀಂಧ್ರ ಆತಂಕವನ್ನು ಹೆಚ್ಚಿಸುತ್ತಿವೆ. ಕೊರೊನಾದಿಂದ ಗುಣಮುಖರಾದವರಲ್ಲಿ ಕಂಡುಬರುತ್ತಿದ್ದ ಕಪ್ಪು ಶಿಲೀಂಧ್ರ ಸದ್ಯ ಕೊರೊನಾ ಸೋಂಕು ಇಲ್ಲದವರಲ್ಲೂ ಕಾಣಿಸಿಕೊಂಡಿದೆ. ಪಂಜಾಬ್ನ 32 ಜನರಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದೆ.

ಪಂಜಾಬ್ 158 ಕ್ಕೂ ಹೆಚ್ಚು ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಪ್ರಕರಣಗಳನ್ನು ವರದಿ ಮಾಡಿದೆ. ಈ ಪೈಕಿ 32 ರೋಗಿಗಳಿಗೆ ಕೋವಿಡ್ -19 ಸೋಂಕಿನ ಇತಿಹಾಸವಿಲ್ಲ. ಆದರೂ ಇವರಿಗೆ ಕಪ್ಪು ಶಿಲೀಂಧ್ರ ಕಾಣಿಸಿಕೊಂಡಿದೆ. ಸ್ಟೀರಾಯ್ಡ್ಗಳ ಅತಿಯಾದ ಬಳಕೆಯೇ ಈ ರೋಗಿಗಳಿಗೆ ಕಪ್ಪು ಶಿಲೀಂಧ್ರ ಬರಲು ಕಾರಣ ಎಂದು ವೈದ್ಯರು ಹೇಳುತ್ತಾರೆ.

ಪಂಜಾಬ್ ನೋಡಲ್ ಅಧಿಕಾರಿ ಡಾ.ಗಗನ್‌ದೀಪ್ ಸಿಂಗ್ ಅವರ ಪ್ರಕಾರ, “ಯಾವುದೇ ವ್ಯಕ್ತಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸ್ಟೀರಾಯ್ಡ್‌ಗಳನ್ನು ಬಳಸಿದ್ದರೆ ಈ ಸೋಂಕಿಗೆ ಒಳಗಾಗಬಹುದು. ಕಪ್ಪು ಶಿಲೀಂಧ್ರವು ಸಾಂಕ್ರಾಮಿಕ ಕಾಯಿಲೆಯಲ್ಲ. ಯಾವುದೇ ಕಾಯಿಲೆಗೆ ಹೆಚ್ಚಿನ ಪ್ರಮಾಣದಲ್ಲಿ ಸ್ಟೀರಾಯ್ಡ್‌ಗಳನ್ನು ತೆಗೆದುಕೊಂಡ ಯಾವುದೇ ವ್ಯಕ್ತಿಯು ಕಪ್ಪು ಶಿಲೀಂಧ್ರಕ್ಕೆ ಒಳಗಾಗಬಹುದು” ಎಂದು ಅವರು ಹೇಳುತ್ತಾರೆ.

ಪಂಜಾಬ್‌ನ ಕೋವಿಡ್ ಎಕ್ಸ್‌ಪರ್ಟ್ ತಂಡದ ಮುಖ್ಯಸ್ಥ ಡಾ.ಕೆ.ಕೆ.ತಲ್ವಾರ್, “ಕೋವಿಡ್ ಚಿಕಿತ್ಸೆಯಲ್ಲಿ ಅತಿಯಾದ ಸ್ಟೀರಾಯ್ಡ್‌ಗಳ ಬಳಕೆಯು ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಹೀಗಾಗಿ ಪರ್ಯಾಯವಾಗಿ ಚಿಕಿತ್ಸೆ ನೀಡಲು ಮಾರ್ಗದರ್ಶನ ನೀಡಲಾಗುತ್ತಿದೆ ” ಎಂದರು.

ಪಂಜಾಬ್ ನಲ್ಲಿ ಮೇ 19 ರಂದು ಮ್ಯೂಕೋರ್ಮೈಕೋಸಿಸ್ ಕಂಡುಬಂದಿದ್ದು, ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಶಿಲೀಂಧ್ರಗಳ ಸೋಂಕಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಔಷಧಿಗಳನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುವಂತೆ ರಾಜ್ಯ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

ಕಪ್ಪು ಶಿಲೀಂಧ್ರದ ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಹಳ್ಳಿಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಎಚ್‌ಸಿ) ವೈದ್ಯರನ್ನು ನಿಯೋಜಿಸುವಂತೆ ಅವರು ಇಲಾಖೆಗೆ ತಿಳಿಸಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights