ಕೊರೊನಾ ನಿರ್ವಹಣೆಗೆ ಹೊರಬರದೆ ಅಡಗಿದ್ದ ಬಿಜೆಪಿ ಶಾಸಕರು ಕುರ್ಚಿ ಕದನಕ್ಕಾಗಿ ದಿಡೀರ್ ಪ್ರತ್ಯಕ್ಷ: ಕಾಂಗ್ರೆಸ್

ರಾಜ್ಯದ ಬಿಜೆಪಿ ಸರ್ಕಾರದ ನಾಯಕತ್ವ ಬದಲಾವಣೆಯ ಚರ್ಚೆ ಭಾರಿ ಸದ್ದು ಮಾಡುತ್ತಿದ್ದು, ಆಡಳಿತರೂಢ ಪಕ್ಷದ ಶಾಸಕರು ಬಹಿಂಗವಾಗಿ ಕಚ್ಚಾಡುತ್ತಿದ್ದಾರೆ. ಇದಕ್ಕೆ ಶನಿವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಕೊರೊನಾ ಇಲ್ಲದೆ ಇದ್ದರೆ ಇಷ್ಟು ಹೊತ್ತಿಗಾಗಲೇ ಬಿಜೆಪಿ ಶಾಸಕರು ರೆಸಾರ್ಟ್ ಸೇರಿರುತ್ತಿದ್ದರು ಎಂದು ಹೇಳಿದೆ.

ಇಂದು ತಮ್ಮ ಅಧೀಕೃತ ಟ್ವಿಟರ್‌ ಖಾತೆಯ ಮೂಲಕ ಟ್ವೀಟ್ ಮಾಡಿರುವ ಕಾಂಗ್ರೆಸ್‌, “ಕೊರೊನಾ ಇಲ್ಲದೆ ಇದ್ದರೆ ಇಷ್ಟು ಹೊತ್ತಿಗಾಗಲೇ ಬಿಜೆಪಿ ಶಾಸಕರು ರೆಸಾರ್ಟ್ ಸೇರಿರುತ್ತಿದ್ದರು! ಇಷ್ಟು ದಿನ ಕೊರೊನಾ ನಿರ್ವಹಣೆಗೆ ಹೊರಬರದೆ ಅಡಗಿದ್ದ ಬಿಜೆಪಿ ಸಚಿವ ಶಾಸಕರೆಲ್ಲ ಈಗ ಕುರ್ಚಿ ಕದನಕ್ಕಾಗಿ ದಿಡೀರ್ ಪ್ರತ್ಯಕ್ಷರಾಗಿದ್ದಾರೆ. ತನಗೆ ಸಿಕ್ಕ ಅಧಿಕಾರವಧಿಯಲ್ಲೆಲ್ಲ ಕುರ್ಚಿ ಕಾಳಗದಲ್ಲಿ ಮುಳುಗುವ ಬಿಜೆಪಿಯಿಂದ ಜನರ ರಕ್ಷಣೆ ಸಾಧ್ಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಅಲ್ಲದೆ ಪಕ್ಷವು ಕೊರೊನಾ ವ್ಯಾಕ್ಸೀನ್‌ ಬಗ್ಗೆ ಕೂಡಾ ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳಿದೆ. ಕಂಪೆನಿಗಳಲ್ಲಿ ಲಸಿಕೆಗಳಿಗೆ ಆರ್ಡರ್ ಮಾಡಲಾಗಿದೆ ಎಂದು ಬಹಳ ಹಿಂದೆಯೇ ಹೇಳಿದ್ದ ಸಚಿವ ಸುಧಾಕರ್‌ ಹೇಳಿದ್ದರು. ಆರ್ಡರ್ ಮಾಡಿದ ಲಸಿಕೆಗಳು ಬಂದವೇ? ಗ್ಲೋಬಲ್ ಟೆಂಡರ್ ಕತೆ ಏನಾಯ್ತು? ಎಂದು ಪ್ರಶ್ನಿಸಿದೆ.

 

ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಗಳು ಸಿಗುತ್ತಿಲ್ಲ. ಆದರೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಹೊರಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಚಿತ್ರದೊಂದಿಗೆ ದುಬಾರಿ ಕೊರೊನಾ ಲಸಿಕೆಗಳ ಬಗ್ಗೆ ಜಾಹಿರಾತುಗಳನ್ನು ಪ್ರದರ್ಶಿಸಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, “ಬಿಜೆಪಿಗರು ಖಾಸಗಿ ಆಸ್ಪತ್ರೆಗಳ ಜೊತೆ ನಿಂತು ಪ್ರಚಾರ ನಡೆಸುತ್ತಿರುವುದನ್ನ ನೋಡಿದರೆ ಸರ್ಕಾರದ ಬದಲಿಗೆ ಖಾಸಗಿ ಅಸ್ಪತ್ರೆಗಳ ಪರವಾಗಿ ಆರ್ಡರ್ ಮಾಡಿದೆ ಎನಿಸುತ್ತದೆ” ಎಂದು ಹೇಳಿದೆ.

ರಾಜ್ಯದ ನಾಯಕತ್ವ ಬದಲಾವಣೆಗೆ ಹಿಂದಿನಿಂದಲೆ ಬಿಜೆಪಿಯ ಕೆಲವು ನಾಯಕರು ಪ್ರಯತ್ನಿಸುತ್ತಲೆ ಇದ್ದಾರೆ. ಇದೀಗ ಕೊರೊನಾ ವೈಫಲ್ಯದ ನೆಪವನ್ನು ಹೇಳಿ ಮುಖ್ಯಮಂತ್ರಿಯ ಬದಲಾವಣೆ ಮಾಡಬೇಕು ಎಂದು ಹೈಕಮಾಂಡ್‌ಗೆ ಒತ್ತಡ ಹೇರಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿಯ ಆಂತರಿಕ ಅಸಮಾಧಾನ ಸ್ಪೋಟಗೊಂಡಿದ್ದು, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮತ್ತು ಸಚಿವ ಸಿಪಿ ಯೋಗೀಶ್ವರ್‌ ಬಹಿರಂಗವಾಗಿಯೆ ಕಚ್ಚಾಡಿದ್ದರು. 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights