ರೋಹಿಣಿ – ಶಿಲ್ಪನಾಗ್ ಕಚ್ಚಾಟ ವರ್ಗಾವಣೆಯಲ್ಲಿ ಅಂತ್ಯ: ಕೆಲಸವಿಲ್ಲದ ಖಾತೆಗೆ ಸಿಂಧೂರಿ ವರ್ಗಾವಣೆ!

ರಾಜಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ಮೈಸೂರಿನ ಇಬ್ಬರು ಐಎಎಸ್‌ ಅಧಿಕಾರಿಗಳ ಬಹಿರಂಗ ಸಮರ ಇದೀಗ ಅಂತ್ಯಗೊಂಡಿದೆ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪನಾಗ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಶನಿವಾರ ರಾತ್ರಿ ಆದೇಶ ಹೊರಡಿಸಿದೆ.

ರೋಹಿಣಿ ಸಿಂಧೂರಿ ಅವರನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಶಿಲ್ಪಾ ನಾಗ್‌ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಇ-ಆಡಳಿತ ವಿಭಾಗದ ನಿರ್ದೇಶಕರ ಹುದ್ದೆಗೆ ನೇಮಿಸಿ ವರ್ಗಾಯಿಸಲಾಗಿದೆ.
ರೋಹಿಣಿ ಸಿಂಧೂರಿ ವಿರುದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಜಿಲ್ಲೆಯ ಹಲವು ಶಾಸಕರು ಅರೋಪಗಳನ್ನು ಮಾಡಿದ್ದರು. ಪ್ರತಾಪ್ ಸಿಂಹ ಅವರ ಆರೋಪಗಳಿಗೆ ಅಂಕಿಅಂಶಗಳು ಮತ್ತು ದಾಖಲೆಗಳ ಸಮೇತ ಸಿಂಧೂರಿ ಉತ್ತರಿಸಿದ್ದರು.

ಈ ಬಳಿಕ ರೋಹಿಣಿ ಸಿಂಧೂರಿ ಅವರು ಕರ್ತವ್ಯ ನಿರ್ವಹಣೆಯಲ್ಲಿ ತಮಗೆ ಕಿರುಕುಳ ನೀಡುತ್ತಿದ್ದಾರೆ, ಅವರು ನೀಡುತ್ತಿರುವ ಕಿರುಕುಳ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಆರೋಪಿಸಿ ಶಿಲ್ಪಾ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

ಇದು ಇಬ್ಬರೂ ಐಎಎಸ್‌ಗಳ ತಿಕ್ಕಾಟಕ್ಕೆ ಕಾರಣವಾಗಿತ್ತು. ಶಿಲ್ಪಾನಾಗ್ ಆರೋಪಕ್ಕೆ ಉತ್ತರಿಸಿದ್ದ ಸಿಂಧೂರಿ, ಶಿಲ್ಪಾ ನಾಗ್‌ ಅವರು ಸಿಎಸ್‌ಆರ್‌ ಅನುದಾನ ಬಳಕೆಯ ಲೆಕ್ಕ ನೀಡಿಲ್ಲ, ಕೊರೋನಾ ಕೇಂದ್ರಗಳನ್ನು ಸ್ಥಾಪಿಸಲು ಕೆಲಸ ಮಾಡಿಲ್ಲ. ಈ ಬಗ್ಗೆ ಕೇಳಿದ್ದಕ್ಕೆ ಅನಗತ್ಯ ವಿವಾದ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಕೊರೊನಾ ಕಾಲದಲ್ಲಿ ಬುಗಿಲೆದ್ದಿದ್ದ ಮೈಸೂರಿನ ಅಧಿಕಾರಿಗಳು, ಸಂಸದ, ಶಾಸಕರ ತಿಕ್ಕಾಟಕ್ಕೆ ತೆರೆ ಎಳೆದಿರುವ ಸರ್ಕಾರ, ಇಬ್ಬರೂ ಐಎಎಸ್‌ಗಳನ್ನು ವರ್ಗಾವಣೆ ಮಾಡಿದೆ.

ಗೌತಮ್‌ ಮೈಸೂರು ನೂತನ ಜಿಲ್ಲಾಧಿಕಾರಿ:

ರೋಹಿಣಿ ಸಿಂಧೂರಿ ವರ್ಗಾವಣೆಯಿಂದ ತೆರವಾದ ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಡಾ.ಗೌತಮ್‌ ಬಗಾದಿ ಅವರನ್ನು ನೇಮಿಸಲಾಗಿದೆ. ಕರ್ನಾಟಕ ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಲಕ್ಷ್ಮೇಕಾಂತ್‌ ರೆಡ್ಡಿ ಅವರನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights