ಹಾನಗಲ್‌ ಶಾಸಕ, ಬಿಜೆಪಿ ಹಿರಿಯ ನಾಯಕ ಸಿಎಂ ಉದಾಸಿ ನಿಧನ!

ಮಾಜಿ ಸಚಿವ, ಹಾನಗಲ್ ಕ್ಷೇತ್ರದ ಶಾಸಕ, ಬಿಜೆಪಿ ಹಿರಿಯ ಮುಖಂಡ ಸಿಎಂ ಉದಾಸಿ ಅವರು ಮಂಗಳವಾರ ವಿಧವಶರಾಗಿದ್ದಾರೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು 15 ದಿನಗಳಿಂದ ಬೆಂಗಳೂರಿನ ನಾರಾಯಣ ಹೆಲ್ತ್​ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಚೇತರಿಸಿಕೊಳ್ಳಲಾಗದ ಅವರು ಇಂದು ಮೃತಪಟ್ಟಿದ್ದಾರೆ.

ಅವರ ಮೃತ ಶರೀರವನ್ನು ಅವರ ಹುಟ್ಟುರಾದ ಹಾನಗಲ್‌ಗೆ ಕೊಂಡೊಯ್ಯಲಾಗುತ್ತಿದ್ದು, ಬುಧವಾರ ಸಂಜೆ 5ಕ್ಕೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಉದಾಸಿ ಪುತ್ರ, ಸಂಸದ ಶಿವಕುಮಾರ್ ಉದಾಸಿ ಅವರು ತಿಳಿಸಿದ್ದಾರೆ.

1983ರಲ್ಲಿ ಮೊದಲ ಭಾರಿ ವಿಧಾನಸಭೆ ಪ್ರವೇಶಿಸಿದ ಸಿಎಂ ಉದಾಸಿ, 1985ರಲ್ಲಿ ರಾಜ್ಯ ಸರ್ಕಾರದ ಲೆಕ್ಕಪತ್ರ ಸಮಿತಿ ಸದಸ್ಯರಾಗಿ ನೇಮಕವಾಗಿದ್ದರು. 1989ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. 1990ರಲ್ಲಿ ಅಖಂಡ ಧಾರವಾಡ ಜಿಲ್ಲೆಯ ಜನತಾದಳದ ಅಧ್ಯಕ್ಷರಾಗಿ ಆಯ್ಕೆಯಾದರು. 1994ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಮುಖ್ಯಮಂತ್ರಿ ಜೆ.ಎಚ್​ ಪಟೇಲರ ಮಂತ್ರಿಮಂಡಲದಲ್ಲಿ ಲೋಕೋಪಯೋಗಿ ಸಚಿವರಾಗಿ ಕೆಲಸ ಮಾಡಿದ್ದರು.

1999ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಅವರು, 2006ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂಧ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಂದಿನ ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರ ಸಮ್ಮಿಶ್ರ ಸರ್ಕಾರದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆಯ ಸಚಿವರಾಗಿದ್ದರು. ನಂತರದ ಯಡಿಯೂರಪ್ಪ ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜನಪರ ಕೆಲಸ ಮಾಡಿದ್ದರು.

2013ರ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರಾದರೂ 2014ರ ರಾಜ್ಯರಾಜಕೀಯ ಬೆಳವಣಿಗೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಗೆದಿದ್ದರು. ಅಷ್ಟೇ ಅಲ್ಲ 2000ರಲ್ಲಿ ಬರಗಾಲ ಕಾಡಿತ್ತು. ಆ ವೇಳೆ ರೈತರ ಪರವಾಗಿ ಸಿಎಂ ಉದಾಸಿ ಹೋರಾಡಿ 100 ಕೋಟಿ ರೂ.ಗಳ ಬೆಳೆವಿಮೆ ಕೊಡಿಸಿದ್ದರು.

ಇದನ್ನೂ ಓದಿ: ಪ್ರತಿಸ್ಪರ್ಧಿಗಳಿಗೆ ಲಂಚ: ಕೇರಳ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ದ ಎಫ್‌ಐಆರ್‌ ದಾಖಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights