RJD ನಾಯಕರನ್ನು ಭೇಟಿಯಾದ ಜಿತನ್‌ ಮಾಂಜಿ; BJP ನೇತೃತ್ವದ NDA ತೊರೆಯುತ್ತಾ HAM ಪಕ್ಷ?!

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸೋಂಕು ನಿರ್ವಹಣೆಗಿಂತಲೂ ಹೆಚ್ಚಾಗಿ ರಾಜಕೀಯ ಅವಾಂತರಗಳ ಸುದ್ದಿಗಳು ದೇಶಾದ್ಯಂತ ಸದ್ದು ಮಾಡುತ್ತಿವೆ. ವಿವಿಧ ರಾಜ್ಯಗಳಲ್ಲಿ ಪಕ್ಷಾಂತರ, ನಾಯಕತ್ವಕ್ಕಾಗಿನ ಕಿತ್ತಾಟಗಳು ಸುದ್ದಿಯಾಗುತ್ತಿವೆ. ಈ ನಡುವೆ, ಬಿಹಾರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಹಿಂದೂಸ್ತಾನ್ ಅವಾಮ್ ಮೋರ್ಚಾ(ಹೆಚ್‌ಎಎಂ)ದ ಹಿರಿಯ ನಾಯಕ ಜಿತನ್ ರಾಮ್ ಮಾಂಜಿಯವರು ಆರ್‌ಜೆಡಿಯ ತೇಜ್ ಪ್ರತಾಪ್ ಯಾದವ್‌ರವರನ್ನು ಭೇಟಿಯಾಗಿದ್ದಾರೆ. ಇದು ಬಿಹಾರ ರಾಜಕೀಯದಲ್ಲಿ ಹೊಸದೊಂದು ಚರ್ಚೆ ಮತ್ತು ಮುಂದಾಗಬಹುದಾದ ಅವಾಂತರಗಳಿಗೆ ಕೂತೂಹಲ ಕೆರಳಿಸಿದೆ.

ಕಳೆದ ವರ್ಷ ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಗೂ ಮುನ್ನ ಮಾಂಜಿ ಅವರ ಪಕ್ಷವು ಆರ್‌ಜೆಡಿ ಮತ್ತು ಕಾಂಗ್ರೆಸ್‌ ನೇತೃತ್ವದ ಮಹಾಘಟಬಂಧನ್‌ ಮೈತ್ರಿ ತೊರೆದು ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿತ್ತು. ಆದರೆ, ಇದೀಗ ಎನ್‌ಡಿಎ ಅಧಿಕಾರದಲ್ಲಿದ್ದರೂ, ಬಿಜೆಪಿ ಜೊತೆಗೆ ಹೆಚ್‌ಎಎಂ ಮನಸ್ಥಾನ ಹೊಂದಿದೆ. ಈ ಕಾರಣದಿಂದಾಗಿ ಅವರು ಆರ್‌ಜೆಡಿ ಮುಖಂಡರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಹಾರದ ಬಂಕಾ ಜಿಲ್ಲೆಯ ಮದರಸಾವೊಂದರಲ್ಲಿ ಬಾಂಬ್‌ ಸ್ಪೋಟದ ನಂತರ ಅವರು ತಮ್ಮ ಬಿಜೆಪಿ ಜೊತೆಗಿನ ಮನಸ್ತಾಪ ಹೊರಹಾಕಿದ್ದಾರೆ. ಬಿಜೆಪಿ ಮುಖಂಡರು ಮದರಸಾಗಳನ್ನು ರಾಷ್ಟ್ರವಿರೋಧಿ ಚಟುವಟಿಕೆಗಳ ತಾಣ ಎಂದು ಕರೆದಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಂಜಿ ರಾಜಕೀಯ ಲಾಭಕ್ಕಾಗಿ ಸಮುದಾಯವೊಂದನ್ನು ಟಾರ್ಗೆಟ್‌ ಮಾಡುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

“ಬಡ ದಲಿತರು ಮುಂದೆ ಬಂದರೆ ಅವರನ್ನು ನಕ್ಸಲರು ಎನ್ನುತ್ತೀರಿ, ಬಡ ಮುಸ್ಲಿಮರು ಮದರಸಾಗಳಲ್ಲಿ ಅಧ್ಯಯನ ಮಾಡಿದರೆ ಅವರನ್ನು ಭಯೋತ್ಪಾದಕರು ಎನ್ನುತ್ತೀರಿ. ಸಹೋದರ, ಅಂತಹ ಮನಸ್ಥಿತಿಯಿಂದ ಹೊರಬನ್ನಿ, ಇದು ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಒಳ್ಳೆಯದಲ್ಲ. ಬಂಕಾ ಬಾಂಬ್ ಸ್ಫೋಟದ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ನಾವು ಒತ್ತಾಯಿಸುತ್ತೇವೆ” ಎಂದು ಮಾಂಜಿಯವರು ಜೂನ್ 10 ರಂದು ಟ್ವೀಟ್ ಮಾಡಿದ್ದರು.

ಇದೇ ಸಮಯದಲ್ಲಿ ಆರ್‌ಜೆಡಿ ಮುಖಂಡ, ಲಾಲೂ ಪ್ರಸಾದ್ ಯಾದವ್‌ರವರ ಮಗ ತೇಜ್ ಪ್ರತಾಪ್ ಯಾದವ್ ಮಾಂಜಿಯವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದಾರೆ. ನಂತರ “ಮಾಂಜಿಯವರು ಮರಳಿ ಮಹಾಘಟಬಂಧನ್‌ಗೆ ಬರುವುದಾದರೆ ಅವರಿಗೆ ಮುಕ್ತ ಸ್ವಾಗತವಿದೆ” ಎಂದು ಹೇಳಿಕೆ ನೀಡಿದ್ದಾರೆ.

ಇದರಿಂದ ಬಿಹಾರ ರಾಜಕೀಯದಲ್ಲಿ ಸಂಚಲನ ಉಂಟುಮಾಡುತ್ತಿದ್ದಂತೆ, ಬಿಜೆಪಿಯ ಸುಶೀಲ್ ಕುಮಾರ್ ಮೋದಿ ಬಿಜೆಪಿಯ ಎಲ್ಲಾ ಸಚಿವರು, ಶಾಸಕರಿಗೆ ಯಾವುದೇ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಮಾಂಜಿ ಎನ್‌ಡಿಎ ತೊರೆಯುತ್ತಾರೆ ಎಂಬುದನ್ನು ಅಲ್ಲಗೆಳೆದಿದ್ದಾರೆ.

ಇದನ್ನೂ ಓದಿ: ಶರತ್ ಬಚ್ಚೇಗೌಡರ ಕುಟುಂಬ 229 ಎಕರೆ ಭೂಮಿ ಕಬಳಿಸಿದೆ: ಸಚಿವ ಎಂಟಿಬಿ ನಾಗರಾಜ್ ಆರೋಪ

ಮಾಜಿ ಸಿಎಂ ಜಿತನ್ ರಾಮ್ ಮಾಂಜಿಯವರು ಎನ್‌ಡಿಎಯ ಹಿರಿಯ ನಾಯಕರು. ಅವರು ರಾಜಕೀಯ ಮುಖಂಡರ ಮನೆಗೆ ಸೌಜನ್ಯದ ಭೇಟಿ ನೀಡಿದ ಕೂಡಲೇ ನಾವು ಯಾವುದೇ ರಾಜಕೀಯ ತೀರ್ಮಾನಗಳಿಗೆ ಬರಬಾರದು. ಅವರು ಬಿಹಾರ ದಲಿತರ ನಾಯಕ. ಅವರು ನಮ್ಮೊಂದಿಗಿರುತ್ತಾರೆ ಮತ್ತು ಈ ಸರ್ಕಾರ ಐದು ವರ್ಷ ಪೂರೈಸುತ್ತದೆ ಎಂದು ಸುಶೀಲ್ ಕುಮಾರ್ ಮೋದಿ ತಿಳಿಸಿದ್ದಾರೆ.

ಬಂಕಾ ಬಾಂಬ್ ಬ್ಲಾಸ್ಟ್ ಬಗ್ಗೆ ಮಾತನಾಡಿರುವ ಅವರು, “ಎನ್‌ಡಿಎ ಮುಖಂಡರು ತಮ್ಮ ಆಂತರೀಕ ವಲಯಗಳಲ್ಲಿ ಮಾತನಾಡಬೇಕೆ ಹೊರತು ಸಾರ್ವಜನಿಕವಾಗಿ ಅಸೂಕ್ಷ್ಮವಾಗಿ ಮಾತನಾಡಬಾರದು. ಎನ್‌ಡಿಎ ಪ್ರಜಾಸತ್ತಾತ್ಮಕ ಒಕ್ಕೂಟವಾಗಿದ್ದು ಇಲ್ಲಿ ಪಕ್ಷಗಳಿಗೆ ಹಲವು ವಿಷಯಗಳಲ್ಲಿ ತಮ್ಮದೇಯಾದ ಪ್ರತ್ಯೇಕ ಅಭಿಪ್ರಾಯಗಳಿರಬಹುದು” ಎಂದಿದ್ದಾರೆ.

ದೇಶಾದ್ಯಂತ ರಾಜ್ಯಕೀಯ ಉತ್ಪ್ರೇಕ್ಷೆಗಳು ಹೆಚ್ಚಾಗಿದ್ದು, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಮುನ್ನೆಲೆಯಲ್ಲಿ ಚರ್ಚೆಯಾಗುತ್ತಿದೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌ನಲ್ಲಿ ಆಂತರಿಕ ಬಿಕ್ಕಟ್ಟ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನಾ ಮತ್ತು ಬಿಜೆಪಿ ನಾಯಕರು ಭೇಟಿಯಾಗಿದ್ದು, ಅದೂ ಮತ್ತೊಂದು ರೀತಿಯ ಕೂತೂಹಲ ಕೆರಳಿಸಿದೆ. ಉತ್ತರ ಪ್ರದೇಶದಲ್ಲಿ ಜಿತಿನ್ ಪ್ರಸಾದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರೆ, ಬಂಗಾಳದಲ್ಲಿ ಮುಕುಲ್ ರಾಯ್ ಮತ್ತು ಅವರ ಪುತ್ರ ಬಿಜೆಪಿ ತೊರೆದು ಟಿಎಂಸಿಗೆ ಮರಳಿದ್ದಾರೆ.

ಇದನ್ನೂ ಓದಿ: ಪಂಜಾಬ್‌ ಕಾಂಗ್ರೆಸ್‌ನಲ್ಲೂ ಆಂತರಿಕ ಬಿಕ್ಕಟ್ಟು; ಅಮರಿಂದರ್‌ ಮತ್ತು ಸಿಧು ನಡುವೆ ನಾಯಕತ್ವದ ಕುಸ್ತಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights