ಬಿಹಾರ LJP ಪಕ್ಷದಲ್ಲಿ ಬಂಡಾಯ; ಚಿರಾಗ್‌ ನಾಯಕತ್ವ ಬದಲಾವಣೆಗೆ ಸಿಎಂ ನಿತೀಶ್‌ ಕುಮಾರ್ ಸಂಚು?

ಬಿಹಾರದ ಪ್ರದೇಶಕ ಪಕ್ಷವಾದ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ)ದಲ್ಲಿ ಭಿನ್ನಮತಗಳು ಭುಗಿಲೆದ್ದಿವೆ. ಪಕ್ಷದ ನಾಯಕತ್ವದ ಬದಲಾವಣೆಗೆ ಎಲ್‌ಜಿಪಿಯ ಆರು ಲೋಕಸಭಾ ಸಂಸದರ ಪೈಕಿ ಐವರು ಸಂಸದರು ಒತ್ತಾಯಿಸಿದ್ದಾರೆ. ಪ್ರಸ್ತುತ ಚಿರಾಗ್‌ ಪಾಸ್ವಾನ್‌ ಪಕ್ಷದ ನಾಯಕರಾಗಿದ್ದು, ಬಂಡಾಯ ಎದ್ದಿರುವ ಸಂಸದರು ಪಾಸ್ವಾನ್‌ ಅವರ ಚಿಕ್ಕಪ್ಪ, ಸಂಸದ ಪಶುಪತಿ ಕುಮಾರ್ ಪರಾಸ್ ಅವರನ್ನು ಎಲ್‌‌ಜೆಪಿಯ ಹೊಸ ಅಧ್ಯಕ್ಷರನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.

ಚಿರಾಗ್‌ ಪಾಸ್ವಾನ್‌ ನಾಯಕತ್ವದ ವಿರುದ್ದ ಬಂಡಾಯ ಎದ್ದಿರುವ ಸಂಸದರಲ್ಲಿ ಪರಾಸ್‌ ಕೂಡ ಒಬ್ಬರಾಗಿದ್ದಾರೆ. ಪಕ್ಷವನ್ನು ಉಳಿಸಲು ಮತ್ತು ಎಲ್‌ಜೆಪಿಯನ್ನು ಕಟ್ಟಿದ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ರಾಜಕೀಯ ಸಿದ್ಧಾಂತಗಳನ್ನು ಮುಂದುವರೆಸಲು ತಮಗೆ ನಾಯಕತ್ವವನ್ನು ಕೊಡಬೇಕು ಎಂದು ಪರಾಸ್‌ ಅವರು ದೂರವಾಣಿ ಮೂಲಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಜೆಪಿ ತೀವ್ರ ಹಿನ್ನಡೆ ಅನುಭವಿಸಿತು. ನಾನು ಪಕ್ಷವನ್ನು ಪುನರುಜ್ಜೀವನಗೊಳಿಸುತ್ತೇನೆ ಮತ್ತು ಈ ಮೂಲಕ ಪಕ್ಷದ ಸಂಸ್ಥಾಪಕರ ಆತ್ಮಕ್ಕೆ ಶಾಂತಿ ಒದಗಿಸಲು ಪ್ರಯತ್ನಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಮೂಲಗಳ ಪ್ರಕಾರ, ಹೊಸ ನಾಯಕತ್ವದೊಂದಿಗೆ ಹೊಸ ಪಕ್ಷದ ರಚನೆಯನ್ನು ಭಾನುವಾರ ಸಂಜೆ ನವದೆಹಲಿಯಲ್ಲಿ ಪರಾಸ್ ನಿವಾಸದಲ್ಲಿ ನಿರ್ಧರಿಸಲಾಯಿತು. ಐವರು ಸಂಸದರೊಂದಿಗೆ ಎಲ್‌ಜೆಪಿಯ ಹೊಸ ಬಣವನ್ನು ರಚಿಸುವ ಈ ನಿರ್ಧಾರದ ಬಗ್ಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ತಿಳಿಸಲಾಯಿತು. ಚಿರಾಗ್‌ ಪಾಸ್ವಾನ್ ಅವರು ಪಕ್ಷದ ಹಿರಿಯರನ್ನು ಹಿನ್ನಲೆಗೆ ತಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಇದು ಪಕ್ಷದ ನಾಯಕರಿಗೆ ಸಾಕಷ್ಟು ಅಸಮಾಧಾನವನ್ನುಂಟು ಮಾಡಿದೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ: ಶ್ರೀರಾಮನ ಹೆಸರಲ್ಲಿ ಭ್ರಷ್ಟಾಚಾರ; ಟ್ರಸ್ಟ್‌ ವಿರುದ್ದ 16 ಕೋಟಿ ರೂ ಅವ್ಯವಹಾರ ಆರೋಪ!

ಏತನ್ಮಧ್ಯೆ, ಜೆಡಿಯು ಹಿರಿಯ ಮುಖಂಡರೂ ಇತ್ತೀಚೆಗೆ ಪರಾಸ್‌ ಅವರನ್ನು ಭೇಟಿ ಮಾಡಿದ್ದಾರೆ ಎಂದು ಸ್ಥಳೀಯ ರಾಜಕೀಯ ಮೂಲಗಳು ತಿಳಿಸಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. “ಚಿರಾಗ್ ಪಾಸ್ವಾನ್ ಅವರಿಗೆ ಪಾಠ ಕಲಿಸಲು ಹಿಂದಿನಿಂದ ಹೊಸ ರಾಜಕೀಯ ಆಟವನ್ನು ಆಡಲಾಗುತ್ತಿದೆ” ಎಂದು ಪಕ್ಷದ ಮುಖ್ಯಸ್ಥರ ಆಪ್ತ ಮುಖಂಡರು ಹೇಳಿದ್ದಾರೆ.

ಲೋಕಸಭಾ ಸ್ಪೀಕರ್ ಅನುಮೋದನೆಯ ನಂತರ ಸೋಮವಾರ ನವದೆಹಲಿಯಲ್ಲಿ ಈ ನಾಯಕತ್ವದ ಬೆಳವಣಿಗೆಯ ಕುರಿತು ಔಪಚಾರಿಕ ಪ್ರಕಟಣೆ ಘೋಷಣೆಯಾಗುವ ಸಾಧ್ಯತೆ ಇದೆ. ಪರಾಸ್‌ ಅವರು ಇತ್ತೀಚೆಗೆ ಸಿಎಂ ನಿತೀಶ್ ಕುಮಾರ್ ಅವರನ್ನು ಉತ್ತಮ ಆಡಳಿತಗಾರ ಎಂದು ಶ್ಲಾಘಿಸಿದ್ದರು. ಇದರ ನಂತರ ಬಿಹಾರದ ರಾಜಕೀಯ ವಲಯ ಹೊಸ ಸಂಚಲನ ಮೂಡಿಸಿವೆ.

ಸಂಸದರಾದ ಪ್ರಿನ್ಸ್ ರಾಜ್, ಚಂದನ್ ಸಿಂಗ್, ವೀಣಾ ದೇವಿ ಮತ್ತು ಮೆಹಬೂಬ್ ಅಲಿ ಕೈಸರ್ ಅವರನ್ನೊಳಗೊಂಡ ಬಂಡಾಯ ಗುಂಪು ಚಿರಾಗ್ ಪಾಸ್ವಾನ್ ಅವರ ಕಾರ್ಯವೈಖರಿಯ ಬಗ್ಗೆ ಬಹಳ ದಿನಗಳಿಂದ ಅಸಮಾಧಾನ ವ್ಯಕ್ತಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಪಕ್ಷದ ವಿಭಜನೆಗೆ ಜೆಡಿಯು ಕಾರಣ ಎಂದು ಕೂಡಾ ಚಿರಾಗ್‌ ಪಾಸ್ವಾನ್‌ ಆಪ್ತರು ಆರೋಪಿಸಿದ್ದಾರೆ. 2020 ರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್‌‌ ನೇತೃತ್ವದ ಆಡಳಿತ ಪಕ್ಷದ ವಿರುದ್ದ ಸ್ಪರ್ಧಿಸಿ ಪಕ್ಷದ ಹಲವು ಸ್ಥಾನಗಳು ಕಳೆದುಕೊಳ್ಳಲು ಚಿರಾಗ್‌ ಕಾರಣವಾಗಿದ್ದರು. ಜೆಡಿಯುಗೆ ತೀವ್ರ ಹಾನಿ ಮಾಡಿರುವ ಚಿರಾಗ್‌ ಅವರನ್ನು ಏಕಾಂಗಿಯಾಗಿಸಲು ನಿತೀಶ್ ಕುಮಾರ್‌ ಅವರ ಪಕ್ಷವು ಬಹಳ ಹಿಂದಿನಿಂಲೂ ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ.

ಮುಂದಿನ ದಿನಗಳಲ್ಲಿ ಇದೀಗ ಬಂಡಾಯವೆದ್ದಿರುವ ಗುಂಪು ಜೆಡಿಯುಗೆ ಬೆಂಬಲ ನೀಡಬಹುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪದಚ್ಯುತಿ; ನೂತನ ಪ್ರಧಾನಿಯಾಗಿ ನಫ್ಟಾಲಿ ಬೆನೆಟ್ ಅಧಿಕಾರ ಸ್ವೀಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights