ಜೂನ್‌ 21ರಿಂದ ಅನ್‌ಲಾಕ್‌ 2.0: ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ!?

ರಾಜ್ಯದಲ್ಲಿ ಅನ್‌ಲಾಕ್‌ ಪ್ರಕ್ರಿಯೆ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, ಅನ್‌ಲಾಕ್‌ ಮಾಡಬಾರದು, ಲಾಕ್‌ಡೌನ್‌ ಮುಂದುವರೆಸಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಆಕ್ಷೇಪಿಸಿತ್ತು. ಇದೀಗ ಜೂನ್‌ 21 ರಿಂದ ಅನ್‌ಲಾಕ್‌ ಮಾಡಲು ಸಮಿತಿ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.

ಜೂನ್‌ 21 ರ ನಂತರ ರಾಜ್ಯದಲ್ಲಿ ಮಾಲ್, ಹೋಟೆಲ್, ಚಿಕ್ಕ‌ಪುಟ್ಟ ಮಾರುಕಟ್ಟೆ, ಸೆಲೂನ್‌‌ ಅಂಗಡಿಗಳು ಮತ್ತು ಮದುವೆ ಸಮಾರಂಭಕ್ಕೆ 50 ಜನರಿಗೆ ಅವಕಾಶ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಈ ಮೊದಲೇ ಹೇಳಿತ್ತು. ಅದಕ್ಕೆ ಸಲಹಾ ಸಮಿತಿ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.

ಬಟ್ಟೆ ಅಂಗಡಿ ಸೇರಿದಂತೆ ಆಭರಣಗಳ ಅಂಗಡಿಗಳನ್ನು ಕೂಡಾ ದಿನದ 8 ಗಂಟೆಗಳ ಕಾಲ ತೆರೆದಿಡಲು ಅವಕಾಶ ನೀಡಲಾಗುತ್ತದೆ. ಹೋಟೆಲ್‌ ಹಾಗೂ ರೆಸ್ಟೋರೆಂಟ್‌‌ಗಳಲ್ಲಿ 50% ದಷ್ಟು ಸಾಮರ್ಥ್ಯದೊಂದಗೆ ಗ್ರಾಹಕರಿಗೆ ಅವಕಾಶ ನೀಡಲಾಗಿದೆ. ಜೊತೆಗೆ 50% ಪ್ರಯಾಣಿಕರೊಂದಿಗೆ ಬಸ್‌ ಸಂಚಾರ ಕೂಡಾ ಪ್ರಾರಂಭವಾಗಲಿದೆ ಎನ್ನಲಾಗಿದೆ.

ದೇಶದಲ್ಲಿ ಕಳೆದ ಒಂದು ದಿನದಲ್ಲಿ 60,471 ಹೊಸ ಕೊರೊನಾ ವೈರಸ್‌ ಏರಿಕೆ ಕಂಡಿದ್ದು, 75 ದಿನಗಳ ನಂತರ ದಾಖಲಾದ ಅತಿ ಕಡಿಮೆ ಏರಿಕೆ ಇದಾಗಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟು ಕೊರೊನಾ ಪ್ರಕರಣಗಳು 2.95 ಕೋಟಿಗೆ ತಲುಪಿದೆ. ಜೊತೆಗೆ ದೈನಂದಿನ ಪಾಸಿಟಿವಿಟಿ ದರದ ಪ್ರಮಾಣವು 3.45% ಕ್ಕೆ ಇಳಿದಿದೆ ಎಂದು ಒಕ್ಕೂಟ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ ದಿನ ಕರ್ನಾಟಕದಲ್ಲಿ 1.49 ಲಕ್ಷ ಪರೀಕ್ಷೆಗಳು ನಡೆಸಲಾಗಿದ್ದು, ಇದರಲ್ಲಿ 6,835 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮಂತ್ರಿ ಕೆ. ಸುಧಾಕರ್‌ ತಿಳಿಸಿದ್ದಾರೆ. ಈ ಪ್ರಕರಣಗಳೊಂದಿಗೆ ರಾಜ್ಯದ ಕೊರೊನಾ ಪಾಸಿಟಿವಿಟಿ ಪ್ರಮಾಣ 4.56% ರಷ್ಟಿದೆ ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲೇ ಅತೀ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದ ಬೆಂಗಳೂರಿನಲ್ಲಿ ಕೂಡಾ ಪ್ರಕರಣಗಳು ಕಡಿಮೆಯಾಗಿದೆ. ಕಳೆದ ದಿನ ನಗರದ 1,470 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿದೆ. ಅಲ್ಲದೆ ಒಂದೇ ದಿನದಲ್ಲಿ 2,409 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸಂಪೂರ್ಣ ಪ್ಯಾಕೇಜ್‌ಗಾಗಿ ಒತ್ತಾಯ; ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಹೋರಾಟಗಾರರ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights